ಈಗಾಗಲೇ ಲೋಕಸಭಾ ಚುನಾವಣೆಯು ಕರ್ನಾಟಕದಲ್ಲಿ ಮೊದಲ ಹಂತವನ್ನು ಮುಗಿಸಿದೆ. ರಾಜ್ಯದ 14 ಕ್ಷೇತ್ರಗಳ 247 ಸ್ಪರ್ಧಿಗಳ ಗೆಲುವು ಸೋಲು ಮತದಾರ ಏಪ್ರಿಲ್ 26 ರಂದು ಮತದಾನ ಮಾಡುವ ಮೂಲಕ ಭವಿಷ್ಯ ಬರೆದಿದ್ದಾನೆ.
ಒಂದು ತಿಂಗಳಿನಿಂದ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿ ಮತಬೇಟೆಗೆ ಇಳಿದಿದ್ದ ನಾಯಕರು ಚುನಾವಣೆ ಮುಗಿದ ಬಳಿಕ ಈಗ ಉತ್ತರ ಕರ್ನಾಟಕದತ್ತ ಮುಖ ಮಾಡಿದ್ದಾರೆ.ಮೇ 7 ರಂದು ಉತ್ತರ ಕರ್ನಾಟಕದ 14 ಜಿಲ್ಲೆಗಳಲ್ಲಿ ಮತದಾನ ನಡೆಯಲಿದ್ದು ಪ್ರತಿಯೊಬ್ಬ ಅರ್ಹ ನಾಗರೀಕನೂ ಯಾವುದೇ ಆಮಿಷಗಳಿಗೆ ಜಾತಿ ಕುಲಕ್ಕೆ ಜೋತು ಬೀಳದೆ ಪಾರದರ್ಶಕವಾಗಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಳ್ಳಬೇಕಿದೆ.
ಆ ಕುರಿತ ಮತದಾನ ಜಾಗೃತಿಯ ಲೇಖನವಿದು…
ನಮ್ಮ ಮತದಾನವು ರಾಜಕೀಯ ವ್ಯವಸ್ಥೆಯನ್ನು ನಿಯಂತ್ರಿಸುವುದಕ್ಕಾಗಿ ಭಾರತೀಯ ಸಂವಿಧಾನ ನೀಡಿರುವ ಒಂದು ಬಲವಾದ ಅಸ್ತ್ರ.ಸಮಾಜದಲ್ಲಿ ಏನೇ ಬದಲಾವಣೆ ತರಬೇಕೆಂದರು ಮುಕ್ತ ಮತದಾನದಿಂದ ಮಾತ್ರ ಸಾಧ್ಯ,ದೇಶದ ಪ್ರತಿಯೊಬ್ಬ ಮತದಾರನಿಗೂ ಸರಕಾರವನ್ನು ಸ್ಥಾಪಿಸುವ ಮತ್ತು ಅಧಿಕಾರದಿಂದ ಕೆಳಗಿಸುವ ಹಕ್ಕನ್ನು ಮತದಾನವು ನೀಡಿದೆ.ಅದನ್ನು ಅಸ್ತ್ರವಾಗಿ ಪ್ರಯೋಗಿಸುವ ಮೂಲಕ ದೇಶ ಅಭಿವೃದ್ಧಿ ರಕ್ಷಣೆಗೆ ನಿಲ್ಲವಂತಹ ನಾಯಕರ ಆಯ್ಕೆಗೆ ಮತದಾರ ಮುಕ್ತವಾಗಿ ಮತದಾನ ಮಾಡುವ ಮೂಲಕ ದೇಶದ ಅಭಿವೃದ್ಧಿಯಲ್ಲಿ ಪಾತ್ರವಹಿಸಬೇಕಿದೆ.ಕೆಲ ಬೆಂಗಳೂರಿನಂತಹ ಮಹಾನಗರಗಳಲ್ಲಿ ತೀರಾ ಕಡಿಮೆ ಮತದಾನ ದಾಖಲಾಗುತ್ತಿದ್ದು ಮತದಾರರ ನಿರಾಸಕ್ತಿ ತೊಲಗಬೇಕಿದೆ.ನನ್ನ ಒಂದು ಮತದಿಂದ ಏನು ಬದಲಾವಣೆ ಆಗುವುದಿಲ್ಲ. ರಾಜಕಾರಣಿಗಳೆಲ್ಲ ಒಂದೇ,ನಮ್ಮಂತಹವರಿಗೆ ಅದರಿಂದ ಏನೂ ಲಾಭ ಇಲ್ಲ,ರಾಜಕೀಯ ನಾವಂದುಕೊಂಡಂತೆ ಇಲ್ಲ ಎಂದು ದೂರುವವರೇ ಹೆಚ್ಚು.ಆದರೆ ಇವೆಲ್ಲಕ್ಕೂ ಉತ್ತರ ಸಿಗಬೇಕಾದರೆ ಪ್ರತಿಯೊಬ್ಬ ಮತದಾರ ಮತಗಟ್ಟೆಗೆ ಬಂದು ಯಾವ ಸ್ವಾರ್ಥವೂ ಇಲ್ಲದೆ ಮುಕ್ತವಾಗಿ ಮತ ಚಲಾಯಿಸಿದಾಗಲೇ ಅವನಿಗೆ ಪ್ರಶ್ನಿಸುವ ನೈತಿಕ ಹಕ್ಕು ಇರುತ್ತದೆ.ಕಡಿಮೆ ಮತದಾನ ದಾಖಲಾಗುವ ನಗರಗಳಲ್ಲಿ ವಿದ್ಯಾವಂತರು ಮತ್ತು ಯುವಕರಲ್ಲೇ ಮತದಾನದ ಬಗ್ಗೆ ಆಸಕ್ತಿ ಇಲ್ಲದಿರುವುದು ಅವರು ಮತದಾನದಿಂದ ದೂರ ಉಳಿಯುತ್ತಿರುವುದು ದುರದೃಷ್ಟಕರ.
ಚುನಾವಣಾ ವ್ಯವಸ್ಥೆ ಸುಧಾರಿಸಿದರೆ ಆ ಮೂಲಕ ಮುಕ್ತ ಮತದಾನವಾಗಿ ಭ್ರಷ್ಟಮುಕ್ತ ದುರಾಡಳಿತದ ಸರ್ಕಾರ ನೋಡಲು ಸಾಧ್ಯ.ಮತದಾರರು ಹಣ, ಆಮಿಷಕ್ಕಾಗಿ ಜಾತಿ ಕುಲಮತಕ್ಕಾಗಿ ಮತ ನೀಡುವುದನ್ನು ಮೊದಲು ನಿಲ್ಲಿಸಬೇಕು.ಹಣ ಪಡೆದು ಮತ ನೀಡಿದರೆ ಸೌಲಭ್ಯ ಕೇಳುವ ಹಕ್ಕು ಸ್ವತಃ ನಾವೇ ಕಳೆದುಕೊಂಡಂತೆ ಕೇಳುವ ನೈತಿಕ ಜವಾಬ್ದಾರಿ ಕೂಡ ನಮಗೆ ಇರುವುದಿಲ್ಲ ಹಣ ಖರ್ಚು ಮಾಡಿ ಆಯ್ಕೆಯಾದವರಿಗೂ ಜವಾಬ್ದಾರಿ ಇರುತ್ತದೆ ಎಂಬುದು ಕೂಡ ಸತ್ಯಕ್ಕೆ ದೂರವಾದದ್ದು. ಕಳಕಳಿ ಸಾಮಾಜಿಕ ಬದ್ದತೆ ಅಭಿವೃದ್ಧಿಯ ವೇಗ ಕೂಡ ಅವರಿಂದ ನಿರೀಕ್ಷಿಸಲು ಸಾಧ್ಯವೇ?
ಸೌಲಭ್ಯ ವಂಚಿತರು,ಮಧ್ಯಮ ವರ್ಗದ ಜನರು,ಬಡವರು,ಶೋಷಿತರು ಕೆಲವೊಮ್ಮೆ ಸೌಲಭ್ಯಕ್ಕಾಗಿ ಬೀದಿಗಿಳಿದು ಹೋರಾಟ ಮಾಡುತ್ತಾರೆ.ಹೀಗೆ ಮಾಡಿದ ಮಾತ್ರಕ್ಕೆ ಅವರ ಸಮಸ್ಯೆ ತೀರುವುದು ಅಭಿವೃದ್ಧಿ ಆಗುವುದು ಎಂದು ಹೇಳಲು ಕಷ್ಟಸಾಧ್ಯ.ನಾವು ನಿಷ್ಪಕ್ಷಪಾತವಾಗಿ ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ ಮುಕ್ತವಾಗಿ ಮತ ಚಲಾಯಿಸಿದರೆ ನಾವು ಆಯ್ಕೆ ಮಾಡಿದ ಜನಪ್ರತಿನಿಧಿಯನ್ನು ಧೈರ್ಯದಿಂದ ಅಭಿವೃದ್ಧಿ ಸೌಲಭ್ಯಗಳನ್ನು ಕೇಳಬಹುದು ಆ ಮೂಲಕ ಪ್ರಾಮಾಣಿಕ ಅಭಿವೃದ್ಧಿಯತ್ತ ಕೊಂಡೊಯ್ಯುವ ಜನಪ್ರತಿನಿಧಿಯನ್ನು ನಾವು ನೋಡಬಹುದು.ಉತ್ತಮ ನಾಯಕ ಆಯ್ಕೆಯಾದರೆ ಸೌಲಭ್ಯಗಳು ಅಭಿವೃದ್ಧಿಯೂ ಸಹಜವಾಗಿ ನಡೆಯುತ್ತಿರುತ್ತದೆ ಕೂಡಾ
ಚುನಾವಣೆಗಳ ಸಂದರ್ಭದಲ್ಲಿ ಹಣ,ಹೆಂಡ,ಸೀರೆ, ಕುಕ್ಕರ್,ಟಿವಿ ನೀಡುವ ಮೂಲಕ ಜನರ ಮತಗಳನ್ನು ಸೆಳೆಯುವ ನಾಯಕರು ಅವರು ತೋರುವ ಆಸೆ ಆಮಿಷಗಳು,ಭರವಸೆಗಳನ್ನು ನೀಡುವ ಮೂಲಕ ಮತದಾರರನ್ನು ಸೆಳೆದು ಗೆದ್ದ ಬಳಿಕ ಚುನಾವಣೆಗೆ ತಾವು ಖರ್ಚು ಮಾಡಿದ ಹತ್ತರಷ್ಟು ಸಂಪಾದನೆ ಮಾಡುವುದಿಲ್ಲ ಎಂಬುದು ಯಾವ ಗ್ಯಾರಂಟಿ?ಅವರು ನೀಡುವ ಹಣ ಅಥವಾ ಇನ್ಯಾವುದೇ ವಸ್ತುಗಳು ನಮ್ಮನ್ನು ಜೀವನಪೂರ್ತಿ ಬದುಕಲು ಸಹಾಯ ಮಾಡುತ್ತದೆಯೇ ಎಂದು ಯೋಚಿಸಬೇಕು ಅಲ್ಲವೇ? ನಮ್ಮ ಮತಗಳನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯುವ ನಮ್ಮ ಅಶೋತ್ತರಗಳಿಗೆ ಸ್ಪಂದಿಸುವ ವ್ಯಕ್ತಿಗೆ ನೀಡಿದರೆ ಉತ್ತಮ.
ಮತದಾರರಾದ ನಾವು ಅಭ್ಯರ್ಥಿಯ ಆಯ್ಕೆ ವಿಚಾರದಲ್ಲಿ ಭ್ರಷ್ಟತೆಗೆ ಬೆಂಬಲ ನೀಡಿ ನಿಮಗೆ ಮತ ನೀಡುತ್ತೇನೆ ನಮಗೆ ಹಣ,ಹೆಂಡ,ಸೀರೆ ಕುಕ್ಕರ್ ನೀಡಿ ಎನ್ನುವಷ್ಟರ ಮಟ್ಟಿಗೆ ನಾವು ಹೋದರೆ ಭ್ರಷ್ಟಚಾರ ಮುಕ್ತ ಜನಪ್ರತಿನಿಧಿಗಳನ್ನು ಕಾಣಲು ಸಾಧ್ಯವೆ? ಭ್ರಷ್ಟಾಚಾರಕ್ಕೆ ನಾವೇ ಪ್ರೋತ್ಸಾಹ ನೀಡಿ ಮತ ನೀಡಿದಲ್ಲಿ ನಮ್ಮನ್ನು ನಾವು ಮಾರಿಕೊಂಡಂತೆಯೇ ಸರಿ.ಆಗ ನಮ್ಮಿಂದ ಗೆದ್ದು ಹೋದವರು ಭ್ರಷ್ಟಾಚಾರದ ಕೂಪದಲ್ಲಿ ಮಿಂದೇಳುವುದಿಲ್ಲವೇ? ಅದರ ಬದಲಾಗಿ ಮತ ಯಾಚನೆಗೆ ಅಭ್ಯರ್ಥಿ ನಮ್ಮ ಮನೆ ಬಾಗಿಲಿಗೆ ಬಂದಾಗ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವ ಬಗ್ಗೆ ಅಭಿವೃದ್ಧಿಯ ಬಗ್ಗೆ ಪ್ರಸ್ತಾಪ ಮಾಡುವುದು ಸೂಕ್ತ.ಹೀಗೆ ಪ್ರತಿ ಚುನಾವಣೆಯಲ್ಲೂ ಮನೆ ಬಾಗಿಲಿಗೆ ಬಂದ ಪ್ರತಿ ಸ್ಪರ್ದಾಳುವಿಗೂ ಈ ರೀತಿ ಮಾಡುವುದರಿಂದ ಗೆದ್ದ ಬಳಿಕ ಅಭಿವೃದ್ಧಿಯ ಕಡೆಗೆ ಗಮನ ಹರಿಸಬಹುದು. ಆ ಮೂಲಕ ಭ್ರಷ್ಟಾಚಾರ ಮುಕ್ತ ಆಡಳಿತ ಅಭಿವೃದ್ಧಿಯ ರಾಜ್ಯ ದೇಶದ ಪ್ರಗತಿ ನಿರೀಕ್ಷಿಸೋಣ.
-ಮಂಜುನಾಥ್ ಚಿಕ್ಕಬಳ್ಳಾಪುರ
7892741920