ಕೊಪ್ಪಳ,ನ.24-ನಾಡಿನಾದ್ಯಂತ ಇದೀಗ ಕಾರ್ತೀಕ ದೀಪೋತ್ಸವವನ್ನು ಶ್ರದ್ಧಾಭಕ್ತಿಗಳಿಂದ ಆಚರಿಸುತ್ತಿರುವ ಬೆನ್ನಲ್ಲೇ ಜಿಲ್ಲೆಯ ಕೆರೆಹಳ್ಳಿ ಬಳಿ ಇರುವ ತಿರುಗಲ್ ತಿಮ್ಮಪ್ಪ ದೇವಸ್ಥಾನದಲ್ಲಿ ಹನುಮ ಮಾಲಾಧಾರಿಗಳು ಸಹ ಕಾರ್ತೀಕ ದೀಪೋತ್ಸವ ಆಚರಿಸಿದರು.
ಶ್ರೀ ತಿರುಗಲ್ ತಿಮ್ಮಪ್ಪ, ಶ್ರೀ ಲಕ್ಷ್ಮೀದೇವಿ ಮತ್ತು ಶ್ರೀ ತೇರಿನ ಹನುಮಂತರಾಯ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಇದೇ ಮೊದಲ ಬಾರಿಗೆ ಗುಡ್ಡದಲ್ಲಿ ಈ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ತಿರುಗಲ್ ತಿಮ್ಮಪ್ಪ, ಲಕ್ಷ್ಮೀದೇವಿ ಮತ್ತು ಹನುಮಂತದೇವರಿಗೆ ವಿಶೇಷ ಅಲಂಕಾರ, ಪೂಜೆ, ಮಹಾ ಮಂಗಳಾರತಿ ಬಳಿಕ ದೀಪೋತ್ಸವ ಆಚರಿಸಿದ ಹನುಮ ಮಾಲಾಧಾರಿಗಳು ತಮ್ಮ ಹರಕೆಯನ್ನು ಸಮರ್ಪಿಸಿದರು.
ಟ್ರಸ್ಟ್ ಅಧ್ಯಕ್ಷ ವೀರಣ್ಣ ಕೋಮಲಾಪುರ, ಪ್ರಧಾನ ಕಾರ್ಯದರ್ಶಿ ವಸಂತ್ ಕೆರೆಹಳ್ಳಿ, ಖಜಾಂಚಿ ಪರಶುರಾಮ್ ಕೆರೆಹಳ್ಳಿ ಸೇರಿದಂತೆ ಟ್ರಸ್ಟಿನ ಪದಾಧಿಕಾರಿಗಳು ಆಯೋಜಿಸಿದ್ದ ಈ ಕಾರ್ತೀಕ ದೀಪೋತ್ಸವ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಬೇವಿನಹಳ್ಳಿ, ಹಿಟ್ನಾಳ, ಗುಡದಹಳ್ಳಿ, ನಾಗೇಶನಹಳ್ಳಿ, ಬಿಳೇಬಾವಿ ಮತ್ತು ಬೂದುಗುಂಪ ಸೇರಿದಂತೆ ಶಹಪುರ ಗ್ರಾಮದ ಹನುಮ ಮಾಲಾಧಾರಿಗಳು ಧಾರ್ಮಿಕ ಆಚರಣೆಗಳನ್ನು ನಡೆಸಿದರು.
ನಿನ್ನೆ ರಾತ್ರಿಯಿಡೀ ಆಚರಿಸಿದ ಕಾರ್ತೀಕ ದೀಪೋತ್ಸವದಲ್ಲಿ ಹನುಮ ಮಾಲಾಧಾರಿಗಳಿಂದ ಅಖಂಡ ರಾಮಜಪ, ದೇವರ ನಾಮಜಪ, ಹನುಮ ಭಜನೆ, ಹರಿದಾಸರ ಸಂಕೀರ್ತನೆಗಳ ಜೊತೆ ಪ್ರವಚನ ಕಾರ್ಯಕ್ರಮವೂ ಜರುಗಿತು. ಪ್ರಾತಃಕಾಲದಲ್ಲಿ ಸ್ನಾನ, ಸಂಧ್ಯಾನುಷ್ಟಾನ ನೆರವೇರಿಸಿದ ಭಕ್ತರು ಮಹಾಮಂಗಳಾರತಿ ಬಳಿಕ ದಾಸೋಹ ನಡೆಸಿದರು.
ಇದೇ ಪ್ರಥಮ ಬಾರಿಗೆ ಹನುಮ ಮಾಲಾಧಾರಿಗಳಿಂದ ನಡೆದ ಭಕ್ತಿಯ ಸೇವೆ ಇದಾಗಿದ್ದು, ಮುಂದಿನ ವರ್ಷ ನೂರಾರು ಹನುಮ ಮಾಲಾಧಾರಿಗಳೊಂದಿಗೆ ಶ್ರೀ ತಿರುಗಲ್ ತಿಮ್ಮಪ್ಪ, ಶ್ರೀ ಲಕ್ಷ್ಮೀದೇವಿ ಮತ್ತು ಶ್ರೀ ತೇರಿನ ಹನುಮಂತರಾಯನ ಸೇವೆಯನ್ನು ಇನ್ನಷ್ಟು ವಿಶಿಷ್ಟವಾಗಿ ಆಚರಿಸಲು ಟ್ರಸ್ಟ್ ಸಿದ್ಧತೆ ನಡೆಸಿದೆ. ಎಲ್ಲ ಮಾಲಾಧಾರಿಗಳು ನಡೆಸಲಿರುವ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಚಟುವಟಿಕೆಗಳಿಗೆ ಉತ್ತಮ ವೇದಿಕೆ ಸಿದ್ಧಪಡಿಸಲಾಗುತ್ತದೆ. ಉಪಹಾರ, ಊಟೋಪಚಾರದ ಜೊತೆಗೆ ಜನರಲ್ಲಿ ಧಾರ್ಮಿಕ ಭಾವನೆಗಳನ್ನು ಮೂಡಿಸುವುದಲ್ಲದೇ, ಸೌಹಾರ್ದತೆ ಹಾಗೂ ಐಕ್ಯತೆ ಮೂಡಿಸಲು ಟ್ರಸ್ಟ್ ಹಲವಾರು ಯೋಜನೆಗಳನ್ನು ಹಾಕಿಕೊಂಡಿದೆ. ಕ್ಷಣಭಂಗುರವಾದ ಈ ಜೀವನದಲ್ಲಿ ಆಧ್ಯಾತ್ಮಿಕತೆಯ ಸೆಳಕು ಪ್ರತಿಯೊಬ್ಬರಿಗೂ ಜೀವಸ್ಫೂರ್ತಿ ನೀಡುತ್ತದೆ. ಇಂಥ ಆಚರಣೆಗಳು ಮನುಷ್ಯನ ಅಭ್ಯುದಯಕ್ಕೆ ಪ್ರೇರಕವಾಗಲಿವೆ ಎಂದು ಟ್ರಸ್ಟ್ ಪದಾಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ವೀರಣ್ಣ ಕೋಮಲಾಪುರ-78997 82281 ಮತ್ತು ವಸಂತ್ ಕೆರೆಹಳ್ಳಿ-96638 33914