ಕನ್ನಡ ಶಾಲೆಗಳಲ್ಲಿ ಮರಾಠಿ ಶಿಕ್ಷಕರ ನೇಮಕಾತಿ ಇದು ಕನ್ನಡ ಶಾಲೆಗಳಿಗೆ ಬಹುದೊಡ್ಡ ಮಾರಕ…
ಕನ್ನಡ ಶಾಲೆಗಳ ಅಸ್ಥಿತ್ವಕ್ಕೆ ಧಕ್ಕೆ..
ಜತ್ತ:ಮಹಾರಾಷ್ಟ್ರ ಸರಕಾರವು ಕನ್ನಡ ಶಾಲೆಗಳಲ್ಲಿ ಮರಾಠಿ ಮಾಧ್ಯಮದ ಶಿಕ್ಷಕರ ನೇಮಕ ಮಾಡಿ ಆದೇಶ ಹೊರಡಿಸಿದೆ ಸಾಂಗಲಿ ಹಾಗೂ ಸೊಲ್ಲಾಪುರ ಜಿಲ್ಲೆಗಳಲ್ಲಿ ಸುಮಾರು ೪೦ ಸಾವಿರಕ್ಕಿಂತ ಹೆಚ್ಚಿನ ಮಕ್ಕಳು ಕನ್ನಡ ಭಾಷೆಯಲ್ಲಿ ಶಿಕ್ಷಣ ಪಡೆಯುತ್ತಾರೆ. ಸುಮಾರು ೩೦೦ ಕ್ಕಿಂತಲೂ ಹೆಚ್ಚಿಗೆ ಕನ್ನಡ ಶಾಲೆಗಳಿವೆ.ಕಳೆದ ಹಲವು ವರ್ಷಗಳಿಂದ ಶಿಕ್ಷಕರ ನೇಮಕಾತಿ ಮಾಡಿರಲಿಲ್ಲ ಈ ವರ್ಷ ನೇಮಕಾತಿ ಮಾಡಲಾಗಿದೆ.
ಸಾಂಗಲಿ ಹಾಗೂ ಸೊಲ್ಲಾಪುರ ಜಿಲ್ಲೆಯಲ್ಲಿ ಒಟ್ಟು ೨೪ ಶಿಕ್ಷಕರ ನೇಮಕಾತಿ ಮಾಡಿ ಆದೇಶ ಹೊರಡಸಲಾಗಿದೆ. ಅದರಲ್ಲಿ ಕೇವಲ ೭ ಜನರು ಮಾತ್ರ ಕನ್ನಡ ಕಲಿತವರು ಆಗಿದ್ದಾರೆ.ಉಳಿದೆಲ್ಲಾ ನೇಮಕ ಶಿಕ್ಷಕರು ಮರಾಠಿ ಹಾಗೂ ಉರ್ದು ಮಾಧ್ಯಮದಿಂದ ಬಂದವರಿದ್ದಾರೆ. ಈ ನೇಮಕ ಶಿಕ್ಷಕರಿಗೆ ಕನ್ನಡ ಭಾಷೆಯ ಗಂಧಗಾಳಿಯು ಗೊತ್ತಿಲ್ಲ.
ಈ ಕುರಿತು ಇಲ್ಲಿನ ಕನ್ನಡಿಗರು ದೊಡ್ಡ ಪ್ರಮಾಣದಲ್ಲಿ ವಿರೋಧ ಮಾಡುತ್ತಿದ್ದಾರೆ. ಆದರೆ ಸರಕಾರ ಯಾವುದೆ ರೀತಿಯಲ್ಲಿ ಹಿಂಜರಿಯುವ ಮಾತೇ ಇಲ್ಲ ಅನ್ನುತ್ತಿದೆ. ಕರ್ನಾಟಕ ಸರಕಾರ ತುರ್ತಾಗಿ ಇಲ್ಲಿನ ಕನ್ನಡಿಗರ ಬೆನ್ನೆಲಬಾಗಿ ನಿಲ್ಲಬೇಕಿದೆ.ಇಲ್ಲವಾದಲ್ಲಿ ಈ ಭಾಗದಲ್ಲಿ ಕನ್ನಡ ಶಾಲೆಗಳು ನಶಿಸಿ ಹೋಗುತ್ತವೆ. ಅಲ್ಲಿನ ಕನ್ನಡಿಗರ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದಾರೆ.
ಕನ್ನಡ ಮಾಧ್ಯಮದಲ್ಲಿ ಮರಾಠಿ ಹಾಗೂ ಉರ್ದು ಭಾಷೆಯ ಶಿಕ್ಷಕರ ನೇಮಕಾತಿಯಿಂದ ಆಗುವ ಅಪಾಯಗಳು..
೧.ಭವಿಷ್ಯದಲ್ಲಿ ಕನ್ನಡ ಮಾಧ್ಯಮದ ಶಾಲೆಗಳು ಸಾವಕಾಶವಾಗಿ ನಾಶವಾಗುವವು.
೨.ಅನ್ಯ ಮಾಧ್ಯಮದ ಶಿಕ್ಷಕರು ಕನ್ನಡ ಶಾಲೆಗಳಲ್ಲಿ ಭೋದನೆ ಮಾಡಿದರೆ ಮಕ್ಕಳ ಕಲಿಕೆಯ ಮೇಲೆ ವಿಪರೀತ ಪರಿಣಾಮ ಆಗುವವದು.ಈ ಧೋರಣೆಯ ವಿಪರೀತ ಪರಿಣಾಮ ನೇರವಾಗಿ ಕನ್ನಡ ಕಲಿಯುವ ಮಕ್ಕಳ ಮೇಲಾಗುವದು.ಮಕ್ಕಳಿಗೆ ಭೋದನೆ ಅರ್ಥವಾಗುವದಿಲ್ಲ.
೩.ಮಕ್ಕಳ ಮಾತೃಭಾಷೆ ಕನ್ನಡವಿದ್ದಾಗ ಆಂಗ್ಲ ಅಥವಾ ಹಿಂದಿ ಭಾಷೆ ಕಲಿಕೆ ಸುಲಭಿಕರಣ ಮಾಡಲು ಸಾಧ್ಯವಿಲ್ಲ ಹೀಗಾಗಿ ಅಧ್ಯಯನ ಕುಂಠಿತವಾಗುತ್ತದೆ. ಇದರಿಂದ ಕನ್ನಡ ಮಕ್ಕಳ ಪಾಲಕರು ತಮ್ಮ ಮಕ್ಕಳನ್ನು ಬೇರೆ ಶಾಲೆಗಳಿಗೆ ಕಳುಹಿಸಲು ಪ್ರಾರಂಭ ಮಾಡುವರು.
೪.ಇದೊಂದು ರೀತಿಯ ‘ಈಸ್ಟ ಇಂಡಿಯಾ ಕಂಪನಿ ಧೋರಣೆ’ಯಂತಿದೆ.ಅಂದರೆ ಸಹಾಯಕ ಸೈನ್ಯ ಪದ್ಧತಿಯಂತೆ.ಸಾವಕಾಶ ಕನ್ನಡ ಶಾಲೆಗಳಲ್ಲಿ ಹೊಕ್ಕು ಕನ್ನಡ ಶಾಲೆಗಳನ್ನು ಸರ್ವನಾಶ ಮಾಡುವದು.
೫.ಭವಿಷ್ಯದಲ್ಲಿ ಕನ್ನಡ ಡಿ.ಎಡ್.ಕಲಿತ ಅಭ್ಯರ್ಥಿಗಳಿಗೆ ನೌಕರಿ ಇಲ್ಲದಂತಾಗುವುದು.ಕನ್ನಡ ಏಳಿಗೆಗೆ ಸಂಪೂರ್ಣ ಹೊಡೆತ ಬೀಳುವದು.
ಕನ್ನಡ ಶಾಲೆಯಲ್ಲಿಯ ಮಕ್ಕಳಿಗೆ ಮರಾಠಿ ಶಿಕ್ಷಕರು ಹೇಗೆ ಕಲಿಸಲು ಸಾಧ್ಯ..?ಇದೊಂದು ತಪ್ಪು ಧೋರಣೆ. ಸಂಪೂರ್ಣವಾಗಿ ಅವೈಜ್ಞಾನಿಕವಾಗಿದೆ.ಇದರಿಂದ ಕನ್ನಡ ಮಕ್ಕಳ ಕಲಿಕೆಯ ಮೇಲೆ ಗಂಭೀರ ಪರಿಣಾಮ ಆಗುತ್ತದೆ. ಇದನ್ನು ನಾನು ಸಂಪೂರ್ಣವಾಗಿ ವಿರೋಧಿಸುತ್ತೇನೆ.ನನಗೆ ಕನ್ನಡ-ಮರಾಠಿ ಭಾಷಾ ಬಾಂಧ್ಯವ್ಯ ಮುಖ್ಯ.ಮರಾಠಿ ಭಾಷೆಯವರನ್ನು ಪ್ರೀತಿಸುಷ್ಟು ಕನ್ನಡ ಭಾಷೆಯರನ್ನು ಪ್ರೀತಿಸುತ್ತೇನೆ. ಕನ್ನಡ ಶಾಲೆಗಳ ಉನ್ನತಿಗಾಗಿ ಪ್ರಯತ್ನಿಸುತ್ತೇನೆ ಹಾಗೂ ಜತ್ತ ತಾಲ್ಲೂಕಿನ ಕನ್ನಡಿಗರ ಹಿತ ಕಾಪಾಡುತ್ತೇನೆ ಎಂದು ಮಾನ್ಯ ಶ್ರೀ ವಿಕ್ರಮದಾದಾ ಸಾವಂತ,ಶಾಸಕರು,ಜತ್ತ ಇವರು ತಿಳಿಸಿದರು.
ಕನ್ನಡ ಶಾಲೆಗಳಲ್ಲಿ ಮರಾಠಿ ಶಿಕ್ಷಕರನ್ನು ನೇಮಕ ಮಾಡಿದ್ದು ತುಂಬಾ ಕಳವಳಕಾರಿಯಾಗಿದೆ.ನಾವು ಕನ್ನಡ ಮಾಧ್ಯಮದ ಡಿ ಎಡ್ ಅಭ್ಯರ್ಥಿಗಳಿದ್ದು ಟಿ.ಇ.ಟಿ ಪಾತ್ರರಾಗಿದ್ದೇವೆ.ಆದರೆ ನಮ್ಮನ್ನು ನೇಮಕ ಮಾಡದೆ,ಸರಕಾರ ಕನ್ನಡ ಶಾಲೆಗಳ ಮೇಲೆ ನಮ್ಮನ್ನು ನೇಮಕ ಮಾಡದೆ ಇದ್ದದ್ದು ನಮ್ಮ ಮೇಲೆ ಮಾಡಿದ ಬಹುದೊಡ್ಡ ಅನ್ಯಾಯವಾಗಿದೆ.ಕನ್ನಡ ಕಲಿತರು ನಾವು ನಿರುದ್ಯೋಗಿಗಳಾಗುತ್ತೇವೆ. ಕರ್ನಾಟಕ ಸರಕಾರ ಬೇಗನೆ ಈ ಸಮಸ್ಯೆ ಕಡೆ ಗಮನ ಹರಿಸಬೇಕು ಎಂದು
ಶ್ರೀ ಅನೀಲ ಚೌಗುಲೆ,ಕನ್ನಡ ಮಾಧ್ಯಮ ಟಿ.ಇ.ಟಿ ಪಾತ್ರ ಅಭ್ಯರ್ಥಿ, ಜತ್ತ ಇವರು ತಿಳಿಸಿದರು.
ಮರಾಠಿ ಶಿಕ್ಷಕರ ನೇಮಕಾತಿ ಕನ್ನಡ ಶಾಲೆಗಳ ಅವನತಿ ಆಗಿದೆ.ಇದಕ್ಕಾಗಿ ನಾವೆಲ್ಲಾ ಕನ್ನಡಿಗರು ಒಟ್ಟಾಗಿ ಹೋರಾಟ ಮಾಡುತ್ತೇವೆ.ಈ ಕುರಿತು ಅಲ್ಪ ಸಂಖ್ಯಾತ ಆಯೋಗದ ಗಮನಕ್ಕೆ ಕೂಡಾ ತಂದಿದ್ದೇವೆ. ಇದೊಂದು ಅನ್ಯಾಯಕಾರಕ ಧೋರಣೆ ಕನ್ನಡ ಮುಗಿಸುವ ಕುತಂತ್ರ. ದಯವಿಟ್ಟು ಕರ್ನಾಟಕ ಮುಖ್ಯಮಂತ್ರಿಯವರು ಬೇಗ ನಮ್ಮ ಸಹಾಯಕ್ಕೆ ನಿಲ್ಲಬೇಕು ಎಂದು ಕೇಳಿಕೊಳ್ಳುತ್ತೇನೆ.
-ಶ್ರೀ ಮಲ್ಲೇಶಪ್ಪಾ ತೇಲಿ,ಕನ್ನಡ ಹೊರಾಟಗಾರರು,ಜತ್ತ