ಶಿವಮೊಗ್ಗ: ಭದ್ರಾ ಜಲಾಶಯದಿಂದ ಯಾವುದೇ ಕ್ಷಣದಲ್ಲಿ ನದಿಗೆ ನೀರು ಹರಿಸಲಾಗುತ್ತದೆ. ಆದ್ದರಿಂದ ನದಿ ಪಾತ್ರದಲ್ಲಿ ವಾಸಿಸುತ್ತಿರುವ ಜನರು ತಮ್ಮ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಕರ್ನಾಟಕ ನೀರಾವರಿ ನಿಗಮ ಶುಕ್ರವಾರ ಮುನ್ನೆಚ್ಚರಿಕೆ ನೀಡಿದೆ.
ಕರ್ನಾಟಕ ನೀರಾವರಿ ನಿಗಮದಿಂದ ಭದ್ರಾ ನದಿ ಪಾತ್ರದ ಜನರಿಗೆ ಎಚ್ಚರಿಕೆಯ ಸಂದೇಶ ನೀಡಲಾಗಿದೆ. ಮಳೆಯಿಂದಾಗಿ ಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದು 40 ಸಾವಿರ ಕ್ಯೂಸೆಕ್ಸ್ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ಜಲಾಶಯದ ನೀರಿನ ಮಟ್ಟ 174 ಅಡಿ ಮೂರು ಇಂಚು ತಲುಪಿದೆ. ಈ ಹಿನ್ನೆಲೆಯಲ್ಲಿ ಮಳೆ ಮುಂದುವರಿದರೆ ಜಲಾಶಯ ಗರಿಷ್ಟ ಮಟ್ಟ ಬೇಗನೆ ತಲುಪುವ ಸಾಧ್ಯತೆ ಇದೆ. ಹೀಗಾಗಿ ನದಿಗೆ ನೀರು ಬಿಡುವ ಸಾಧ್ಯತೆ ಇದ್ದು ನದಿಪಾತ್ರದ ಜನರು ಎಚ್ಚರಿಕೆ ವಹಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರಕಟಣೆಯಲ್ಲಿ ಏನಿದೆ ?
ಭದ್ರಾ ನದಿ ದಂಡೆಯ ತಗ್ಗು ಪ್ರದೇಶದಲ್ಲಿ ವಾಸಿಸುವ ಜನರಿಗೆ, ಈ ಮೂಲಕ ತಿಳಿಯಪಡಿಸುವುದೇನೆಂದರೆ, ಭದ್ರಾ ಜಲಾಶಯದ ಜಲಾನಯನ ಪ್ರದೇಶದಲ್ಲಿ, ಸತತವಾಗಿ ಮಳೆ ಬೀಳುತ್ತಿದ್ದು, ಜಲಾಶಯಕ್ಕೆ ಬರುತ್ತಿರುವ ಒಳಹರಿವಿನ ಪ್ರಮಾಣ ಕ್ರಮೇಣ ಹೆಚ್ಚಾಗುತ್ತಿದೆ. ದಿನಾಂಕ:26-07-2024 ರಂದು ಜಲಾಶಯದ ನೀರಿನ ಮಟ್ಟ 174 ಆಡಿ 3 ಇಂಚುಗಳಿಗೆ ತಲುಪಿರುತ್ತದೆ. ಜಲಾಶಯಕ್ಕೆ ಹರಿದು ಬರುವ ಒಳಹರಿವಿನ ಪ್ರಮಾಣ 35000-40000 ಕ್ಯೂಸೆಕ್ಸ್ ಇದ್ದು, ಇದೇ ರೀತಿ ಮುಂದುವರೆದಲ್ಲಿ ಭದ್ರಾ ಜಲಾಶಯದ ಗರಿಷ್ಟ ನೀರಿನ ಮಟ್ಟಕ್ಕೆ ಅತೀ ಶೀಘ್ರವಾಗಿ ಭರ್ತಿಯಾಗುವ ಸಂಭವವಿದೆ.
ಆದ್ದರಿಂದ, ಅಣೆಕಟ್ಟು ಸುರಕ್ಷತೆಯಿಂದ ಹೆಚ್ಚುವರಿ ನೀರನ್ನು ಯಾವ ಸಮಯದಲ್ಲಾದರೂ ಒಳ ಹರಿವಿನ ಪ್ರಮಾಣಕ್ಕೆ ಅನುಗುಣವಾಗಿ Spill Way Gate ಮುಖಾಂತರ ನದಿಗೆ ಬಿಡಲಾಗುವುದು.
ಆದುದರಿಂದ ಭದ್ರಾ ನದಿಯ ಎಡ ಮತ್ತು ಬಲ ದಂಡೆಯ ಉದ್ದಕ್ಕೂ ತಗ್ಗು ಪ್ರದೇಶದಲ್ಲಿ ವಾಸಿಸುವ ಜನರು ಮುಂಜಾಗ್ರತೆಯಾಗಿ ಸುರಕ್ಷಿತ ಸ್ಥಳಗಳಿಗೆ ಹೋಗಬೇಕಾಗಿ ಈ ಮೂಲಕ ಕೋರಲಾಗಿದೆ. ನದಿ ಪಾತ್ರದಲ್ಲಿ ಸಾರ್ವಜನಿಕರು ತಿರುಗಾಡುವುದು, ಜಾನುವಾರುಗಳನ್ನು ನದಿ ಪಾತ್ರದಲ್ಲಿ ಮೇಯಿಸುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕೆಂದು ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಹಾಗೂ ಅಧೀಕ್ಷಕ ಅಭಿಯಂತರರು ಕ.ನೀ.ನಿ.ನಿ., ಭದ್ರಾ ಯೋಜನಾ ವೃತ್ತ. ಬಿ.ಆರ್. ಪ್ರಾಜೆಕ್ಟ್ ಸುಜಾತ ಎನ್ ಪ್ರಕಟಣೆಯ ಮೂಲಕ ಕೋರಿದ್ದಾರೆ.