ಬದುಕ ಬಂಡಿಯ ನೂಕುತ್ತ
ಸಾಗಿರುವ ನಾವು,
ಉಂಡಿರುವೆವು ಸಹಸ್ರಾರು
ನೋವು-ನಲಿವು.
ಕಷ್ಟಗಳು ನಮಗೇನು
ಹೊಸದಲ್ಲ, ಗೆಳೆಯ,
ಅವುಗಳನೇ ಹಾಸಿ,ಹೊದ್ದವರು
ನೋವಿನಲ್ಲಿ, ಮಿಂದೆದ್ದವರು, ನೋವೇ ಬರಲಿ,ನಗುವೇ ಇರಲಿ
ಎರಡನ್ನೂ ಸಮನಾಗಿ ಕಂಡವರು ನಾವು,
ಬದುಕಿರುವ ತನಕ
ಅನುಭವಿಸಲೇ ಬೇಕಲ್ಲ,
ಬೇಂದ್ರೆ ಹೇಳಿಲ್ಲವೇ,
“ಬಡ ನೂರು ವರುಷಾನ,
ಹರುಷಾದಿ ಕಳೆಯೋಣ”
ಜೀವನದಿ ನೋಯಬೇಕು,
ಬೇಯಬೇಕು,ಆಗಲೇ
ಸಾರ್ಥಕ ಬದುಕು.
ನೊಂದವನೆಂದು,ನೀ
ಕಳೆಗುಂದಬೇಡ, ಸಮಾಧಾನಕ್ಕಿಂತ ದೊಡ್ಡ
ಬಹುಮಾನ ಬೇರೊಂದಿಲ್ಲ,
ಇರಲಿ ನಿನ್ನಲಿ ಸಹನೆ, ಪ್ರೀತಿ,
ಮರೆತು ಬಿಡು ಎಲ್ಲಾ ಜಾತಿ.
-ಶಿವಪ್ರಸಾದ್ ಹಾದಿಮನಿ ,ಕೊಪ್ಪಳ.