ಜಾಗೃತಿ ಕಾರ್ಯಕ್ರಮ ಮೆಚ್ಚಿದ ಶಾಸಕ ಹೆಚ್.ವಿ.ವೆಂಕಟೇಶ್
ಪಾವಗಡ:ಶಾಲಾ ಕಾಲೇಜು ಮಕ್ಕಳಿಗೆ ನೈತಿಕ ಮೌಲ್ಯ,ಪರೀಕ್ಷೆ ಭಯ,ಪೋಕ್ಸೋ ಸಂಬಂಧಿತ ಅರಿವಿನ ಕಾರ್ಯಕ್ರಮ ನಡೆಸುತ್ತಿರುವ ಸಮಾಜ ಸೇವಕ ಪಾವಗಡ ನವೀನ್ ಕಿಲಾರ್ಲಹಳ್ಳಿಯವರಿಗೆ ಶಾಸಕರು ಹೆಚ್.ವಿ.ವೆಂಕಟೇಶ್ ಅವರು ಬುಧವಾರ ಅವರ ನಿವಾಸಕ್ಕೆ ತೆರಳಿ ಅಭಿನಂದಿಸಿ ಗೌರವ ಸಲ್ಲಿಸಿದ ಕಾರ್ಯ ಸಮಾಜದಲ್ಲಿ ಪ್ರಶಂಸೆಗೆ ಪಾತ್ರವಾಯಿತು.
ಯಾವುದೇ ಹಣದ ನಿರೀಕ್ಷೆ ಮಾಡದೆ ಸ್ವಂತ ಖರ್ಚಿನಲ್ಲಿ ಕರ್ನಾಟಕ ರಾಜ್ಯದ ಶಾಲಾ ಕಾಲೇಜು ಮಕ್ಕಳಿಗೆ ಜಾಗೃತಿ ಕಾರ್ಯ ಮಾಡುತ್ತಿರುವ ಮಾದರಿ ಕಾರ್ಯಕ್ರಮ ಅದೆಷ್ಟೋ ಮಕ್ಕಳ ಬದುಕಿನಲ್ಲಿ ಬದಲಾವಣೆ ತಂದಿದೆ ಎಂದು ತಾಲ್ಲೂಕಿನ ಜನತೆ ಈಗಾಗಲೇ ಮೆಚ್ಚುಗೆಯ ಮಹಾಪೂರವೇ ಹರಿಸಿದ್ದಾರೆ.
ಈ ವೇಳೆ ಪ್ರತಿಕ್ರಿಯಿಸಿದ ಶಾಸಕ ಹೆಚ್.ವಿ.ವೆಂಕಟೇಶ್ ಅವರು ನವೀನ್ ಮಾಡುತ್ತಿರುವ ಸೇವೆ ಅನ್ಯರಿಗೆ ಪ್ರೇರಣೆಯಾಗಿದೆ.ಜೊತೆಗೆ ಅದ್ಭುತವಾಗಿ ಮೂಡಿ ಬರುತ್ತಿದೆ. ಕಾರ್ಯಕ್ರಮದ ಬಳಿಕ ಮಕ್ಕಳು ತಮ್ಮ ಅನುಭವಗಳನ್ನು ಹೇಳುತ್ತಿರುವುದನ್ನು ಕಣ್ಣಾರೆ ಕಂಡು ನನಗೆ ತುಂಬಾ ಇಷ್ಟವಾಯಿತು.ಇಂತಹ ಕಾರ್ಯಕ್ರಮವನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಮಾಡುತ್ತಿರುವುದು ನಮ್ಮ ತಾಲ್ಲೂಕಿಗೆ ಹೆಮ್ಮೆಯೆಂದರು. ನನ್ನಿಂದ ಯಾವುದೇ ರೀತಿಯ ಸಹಕಾರ ನೀಡಬೇಕೋ ನೀಡುತ್ತೇನೆ ಎಂದು ಪಾವಗಡ ತಾಲ್ಲೂಕಿನ ಜನತೆ ಪರವಾಗಿ ಶುಭ ಹಾರೈಸಿದರು.
ಕಾರ್ಯಕ್ರಮವನ್ನು ಕಣ್ಣಾರೆ ಕಂಡು ಶಾಸಕರು ತಾವೇ ಖುದ್ದು ಮನೆಗೆ ಬಂದು ಪ್ರೋತ್ಸಾಹಿಸಿ ಅಭಿನಂದಿಸಿದ್ದು ನನಗೆ ಸಂತೋಷದ ಜೊತೆಗೆ ಇನ್ನಷ್ಟು ಕಾರ್ಯಕ್ರಮ ಮಾಡಲು ಪ್ರೇರಣೆಯಾಯಿತು.ಹದಿ ಹರೆಯದ ಮಕ್ಕಳ ಬದುಕಿನಲ್ಲಿ ಹೆತ್ತವರ ಕಷ್ಟ, ಗುರು ಹಿರಿಯರ ಮೌಲ್ಯ, ಭವಿಷ್ಯದ ಬದುಕು,ಪೋಕ್ಸೋ ಕಾಯ್ದೆ, ಕ್ಷಣಿಕ ಆಕರ್ಷಣೆ ಕುರಿತಾಗಿ ಹೆಚ್ಚೆಚ್ಚು ಜಾಗೃತಿ ಕಾರ್ಯಕ್ರಮವನ್ನು ರಾಜ್ಯದೆಲ್ಲೆಡೆ ಮಾಡುತ್ತೇನೆ ಎಂದು ಸಮಾಜ ಸೇವಕ ನವೀನ್ ಕಿಲಾರ್ಲಹಳ್ಳಿ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು ಹಾಗೂ ಕುಟುಂಬಸ್ಥರು ಇದ್ದರು.
ವರದಿ: ಕೆ.ಮಾರುತಿ ಮುರಳಿ