ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಭಾರತೀಯ ಚಿತ್ರರಂಗದ ಪಿತಾಮಹ ದಾದಾ ಸಾಹೇಬ್ ಫಾಲ್ಕೆ

ದಾದಾಸಾಹೇಬ್ ಫಾಲ್ಕೆ ಈ ಹೆಸರನ್ನು ಕೇಳದವರು,ತಿಳಿಯದವರು ಯಾರಾದರೂ ಇದ್ದಾರೆಯೇ? ಸಾಧ್ಯವೇ ಇಲ್ಲ.ಭಾರತೀಯ ಚಿತ್ರರಂಗದಲ್ಲಿ ಉನ್ನತ ಸಾಧನೆಯನ್ನು ಮಾಡಿದ ವ್ಯಕ್ತಿಗಳಿಗೆ ಕೊಡುವ ಅತೀ ಶ್ರೇಷ್ಠ ಪ್ರಶಸ್ತಿ ಕೂಡಾ ಆಗಿದೆ ತನ್ನದೇ ಆದ ವಿಶಿಷ್ಟ ರೋಚಕ ಇತಿಹಾಸವನ್ನು ಹೊಂದಿರುವ ಈ ಪ್ರಶಸ್ತಿಯ ಕುರಿತು ಒಂದು ಚಿಕ್ಕ ಮಾಹಿತಿ ನಿಮಗಾಗಿ.
ದಾದಾಸಾಹೇಬ್ ಫಾಲ್ಕೆ ಇದು ಕೇವಲ ಪ್ರಶಸ್ತಿಯ ಹೆಸರು ಮಾತ್ರವಲ್ಲ,ಒಬ್ಬ ವ್ಯಕ್ತಿಯ ಹೆಸರು ಕೂಡಾ ಆಗಿದೆ.ಇಂದು ನಾವುಗಳು ನೋಡುತ್ತಿರುವ ಭಾರತೀಯ ಚಲನಚಿತ್ರದ ಸೃಷ್ಟಿಕರ್ತರಾಗಿದ್ದು ಮರಣವನ್ನು ಹೊಂದಿ 70 ಕ್ಕೂ ಅಧಿಕ ವರ್ಷಗಳಾಗಿದ್ದರೂ ಭಾರತದ ಬೆಳ್ಳಿ ತೆರೆಯ ಇತಿಹಾಸದಲ್ಲಿ ಇಂದಿಗೂ ಮರೆಯಲಾಗದ ವ್ಯಕ್ತಿಯಾಗಿ ವಿಜೃಂಭಿಸುತ್ತಿದ್ದಾರೆ.ಚಲನಚಿತ್ರ ರಂಗದ ಅಭಿವೃದ್ದಿಗಾಗಿ ತಮ್ಮ ಜೀವನವನ್ನೇ ಪಣಕ್ಕಿಟ್ಟ ಈ ವ್ಯಕ್ತಿಯ ಕುರಿತು ತಿಳಿಸಿಕೊಡಬೇಕು ಎನ್ನುವ ಉದ್ದೇಶದಿಂದ ಅಧ್ಯಯನ ಮಾಡಿ ಈ ಲೇಖನವನ್ನು ರಚಿಸಿದ್ದೇನೆ.1870,ಎಪ್ರಿಲ್ 30 ರಂದು ಮಹಾರಾಷ್ಟ್ರ ರಾಜ್ಯದ ನಾಸಿಕ್ ಜಿಲ್ಲೆಯ ಗೋದಾವರಿ ನದಿಯ ಉಗಮ ಸ್ಥಾನವಾದ ತೃಂಬಕೇಶ್ವರದ ವೈದಿಕ ಮನೆತನದಲ್ಲಿ ಜನಿಸಿದರು.ಇವರ ಮೂಲ ಹೆಸರು ದುಂಡಿರಾಜ್ ಗೋವಿಂದ ಫಾಲ್ಕೆ.ಇವರ ತಂದೆಯ ಹೆಸರು ಜಿ ಶಾಸ್ತಿ ಫಾಲ್ಕೆ, ಸಂಸ್ಕೃತ ವಿಷಯದ ಶಿಕ್ಷಕರಾಗಿ ಕೆಲಸವನ್ನು ನಿರ್ವಹಿಸುತ್ತಿದ್ದರು. ಚಿಕ್ಕಂದಿನಿಂದಲೂ ಇವರ ತಂದೆಯವರು ಹೇಳಿಕೊಡುತ್ತಿದ್ದ ಪಾಠಗಳಲ್ಲಿ ಕಾವ್ಯ,ಪುರಾಣ,ಕಥೆ ಮತ್ತು ಅತೀ ಅಮಾನುಷ ವಿಚಾರಗಳನ್ನು ಬಹಳ ಆಸಕ್ತಿಯಿಂದ ಕೇಳುತ್ತಿದ್ದರು.ತ್ರಯಂಬಕೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿದ್ದ ನೃತ್ಯ, ನಾಟಕಗಳು,ರಂಗ ಸಜ್ಜಿಕೆ ಮತ್ತು ವೇಷಭೂಷಣಗಳು ಇವರ ಮೇಲೆ ಅಪಾರ ಪರಿಣಾಮವನ್ನು ಬೀರಿತ್ತಲ್ಲದೇ ನಟನೆ,ಹಾವಭಾವಗಳನ್ನು ಕಂಡಾಗ ಮೈ ರೋಮಾಂಚನಗೊಳ್ಳುತ್ತಿತ್ತು.ತಂದೆ ಹೇಳಿಕೊಡುತ್ತಿದ್ದ ವೈದಿಕ,ಸಂಸ್ಕೃತ ಪಾಠಗಳಲ್ಲಿ ಮುಂಚೂಣಿಯಲ್ಲಿದ್ದರೂ ನಾಟಕ,ನೃತ್ಯ,ಚಿತ್ರಕಲೆ ಇವುಗಳಲ್ಲಿ ಇವರಿಗೆ ಆಸಕ್ತಿಯಿರುವುದನ್ನು ಗಮನಿಸಿದ ಇವರ ತಂದೆಯವರು ಸಹಜವಾಗಿ ಚಿಂತಿತರಾದರು. ಆದರೂ ಈ ಲಲಿತ ಕಲೆಯ ಈ ಆಸಕ್ತಿಯಲ್ಲಿ ಪ್ರಬುದ್ಧ ಮಾನಕ್ಕೆ ಬರಲು ತ್ರ್ಯಂಬಕೇಶ್ವರದಂತಹ ಚಿಕ್ಕ ಸ್ಥಳ ಸೂಕ್ತವಲ್ಲವೆಂದು ತಿಳಿದಿದ್ದರೂ ಅತೀ ದೂರವಿದ್ದ ಮುಂಬೈಗೆ ತಮ್ಮ ಒಬ್ಬನೇ ಮಗನನ್ನು ಕಳುಹಿಸಲು ಕೂಡಾ ಅವರಿಗೆ ಮನಸ್ಸು ಬರಲಿಲ್ಲ.
ಆದರೆ ಕೆಲ ಕಾಲದ ನಂತರ ಇವರಿಗೆ ಸರಸ್ವತಿ ಬಾಯಿ ಎಂಬ ಕನ್ಯೆಯೊಡನೆ ವಿವಾಹವಾಯಿತು ಸರಸ್ವತಿ ಬಾಯಿ ಇವರ ಪಾಲಿಗೆ ದೇವತೆ ಎಂದು ಹೇಳಿದರೆ ತಪ್ಪಾಗಲಾರದು.ಇವರು ಕೊಟ್ಟ ಸಹಕಾರ,ಪ್ರೋತ್ಸಾಹ ಮತ್ತು ಮಾಡಿದ ತ್ಯಾಗದ ಫಲ ಧುಂಡಿರಾಜರು ತಮ್ಮ ಜೀವನದಲ್ಲಿ ಒಂದು ಇತಿಹಾಸವನ್ನು ನಿರ್ಮಿಸಲು ಸಾಧ್ಯವಾಯಿತು.
15 ವರ್ಷಗಳ ನಂತರ 1885 ರಲ್ಲಿ ಇವರ ತಂದೆ ದಾಜಿಶಾಸ್ತ್ರಿಯವರಿಗೆ ಮುಂಬಯಿಯ ವಿಲ್ಸನ್ ಕಾಲೇಜಿನಲ್ಲಿ ಸಂಸ್ಕೃತ ಪ್ರಾಧ್ಯಾಪಕ ಹುದ್ದೆ ದೊರಕಿದ ಕಾರಣ ಇವರ ಕುಟುಂಬವು ಸಹ ಮುಂಬಯಿಗೆ ವಲಸೆ ಬಂದಿತು.ಇವರಿಗೆ ಇಲ್ಲಿ  ಮುಂಬೈನ ಪ್ರಸಿದ್ಧ ಜೆ.ಜೆ.ಸ್ಕೂಲ್ ಆಫ್ ಆರ್ಟ್ಸ್ ನಲ್ಲಿ ಚಿತ್ರ ಕಲಾ ತರಗತಿಗೆ ಪ್ರವೇಶ ದೊರಕಿತಲ್ಲದೇ ಇವರ ಚಿತ್ರಾಸಕ್ತಿಗೆ ಭದ್ರ ಬುನಾಧಿಗೆ ಕಾರಣವೂ ಆಯಿತು.ಅಲ್ಲಿಯ ಅಭ್ಯಾಸದ ಅವಧಿ ಮುಗಿದ ನಂತರ ಮುಂದಿನ ಅಭ್ಯಾಸಕ್ಕೆ ಬರೋಡಾದ ಲ್ಲಿರುವ ಕಲಾಭವನವನ್ನು ಸೇರಿದರು. ಇಲ್ಲಿ ಇವರ ಪ್ರಾವಿಣ್ಯ ಪಾಂಡಿತ್ಯವನ್ನು ಗುರ್ತಿಸಿದ ಪ್ರೊಪೇಸರ್ ಗುಜ್ಜರ್ ಎಂಬುವರು ಈ ಯುವಕನ ಪಾಂಡಿತ್ಯಕ್ಕೆ ಕೇವಲ ಚಿತ್ರ ಕಲೆ ಸಾಲುವುದಿಲ್ಲವೆಂದು ತಿಳಿದು ಛಾಯಾ ಚಿತ್ರ ವಿಭಾಗದ ಮೇಲ್ವಿಚಾರಕನನ್ನಾಗಿ ನೇಮಿಸಿದರು.ಆ ಸಮಯದಲ್ಲಿ ನಮ್ಮ ದೇಶದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಸ್ವದೇಶಿ ಚಳುವಳಿ ಕೂಡ ಜೋರಾಗಿ ಸಾಗಿತ್ತು.ಬ್ರಿಟಿಷ್ ಸರ್ಕಾರ ಆಯೋಜಿಸುತ್ತಿದ್ದ ಪ್ರಾಚ್ಯ ವಸ್ತು ಇಲಾಖೆಯ ವೃತ್ತಿಗೆ ರಾಜಿನಾಮೆಯನ್ನು ನೀಡಿ ತಮ್ಮ ಗೆಳೆಯರ ಸಹಕಾರದಿಂದ ಕೆತ್ತನೆ ಹಾಗೂ ಮುದ್ರಣದ ವ್ಯಾಪಾರವನ್ನು ಮಾಡಿದರಲ್ಲದೇ ಅತೀ ಕಡಿಮೆ ಅವಧಿಯಲ್ಲಿ ಆಗಿನ ಮುಂಬಯಿಯಲ್ಲಿ ಕಲಾರಂಗದ ವಿಭಾಗದಲ್ಲಿ ಅತೀ ಮೇಧಾವಿ ಎಂದೇ ಪ್ರಸಿದ್ಧಿಯನ್ನು ಪಡೆದರು.1909 ರಲ್ಲಿ ಹೊಸ ಯಂತ್ರವನ್ನು ತರಲು ಮತ್ತು ಅದರ ಮಾಹಿತಿಯನ್ನು ಪಡೆದುಕೊಳ್ಳಲು ಜರ್ಮನಿಗೆ ಪ್ರಯಾಣವನ್ನು ಬೆಳೆಸಿದರು.ಎರಡು ವರ್ಷಗಳ ನಂತರ 1911 ರಲ್ಲಿ  ಒಂದು ಕೆಟ್ಟ ಸಂದರ್ಭದಲ್ಲಿ ಉದ್ಯಮಿಗಳ ಜೊತೆಯಾದ ಭಿನ್ನಾಭಿಪ್ರಾಯದ ಫಲ ವ್ಯಾಪಾರವು ಕೂಡ ಪ್ರಗತಿಯಾಗಲಿಲ್ಲ.ಆದರೆ ಇವರ ಮಡದಿ ಸರಸ್ವತಿ ಬಾಯಿಯವರು ಪತಿಯ ಕಷ್ಟದ ದಿನಗಳಲ್ಲಿ ಕೂಡಾ ಬೇಸರಿಸಿಕೊಳ್ಳದೇ ಅವರಿಗೆ ಬೆನ್ನೆಲುಬಾಗಿ ನಿಂತು ಬಂದ ಕಷ್ಟಗಳನ್ನು ಎದುರಿಸಿ ಎಲ್ಲ ಸಹಕಾರವನ್ನು ನೀಡಿ ಇದ್ದ ಹಣದಲ್ಲಿ ಮನೆಯ ಕೆಲಸಗಳನ್ನು ಮಾಡಿಕೊಂಡು ಹೋಗುತ್ತಿದ್ದರು.

ಆದರೆ ಕಾಲ ಒಂದೇ ರೀತಿಯಲ್ಲಿರುವುದಿಲ್ಲ, ಬದಲಾಗುತ್ತಲೇ ಇರುತ್ತದೆ ಎಂಬುದಕ್ಕೆ ಸಾಕ್ಷಿಯೆಂಬಂತೆ ಇವರ ಜೀವನದಲ್ಲಿ ಒಂದು ಘಟನೆ ನಡೆಯಿತು ಹೀಗೆಯೇ ಒಂದು ದಿನ ತಮ್ಮ ಬೇಸರವನ್ನು ಕಳೆದುಕೊಳ್ಳಲು ಲೈಫ್ ಆಫ್ ಕ್ರೈಸ್ಟ್ ಎಂಬ ಇಂಗ್ಲಿಷ್ ಚಿತ್ರವನ್ನು ವೀಕ್ಷಿಸಲು ಹೋಗಿದ್ದರು. ಚಿತ್ರವನ್ನು ವೀಕ್ಷಿಸಿ ಹೊರಗಡೆ ಬಂದ ನಂತರ ಚಿತ್ರ ಮಂದಿರದ ಬಳಿ ಎಸೆದಿದ್ದ ರೀಲಿನ ಚಿಕ್ಕ ಚಿಕ್ಕ ತುಣುಕುಗಳನ್ನು ಸಂಗ್ರಹಿಸಿ ಅದನ್ನು ಮಸೂರದ ಸಹಾಯದಿಂದ ನೋಡಿದರು.ಅಲ್ಲದೇ ಕಂಪೆನಿಯೊಂದರ ಆಟಿಕೆಯ ಸಿನಿಮಾ ಪ್ರದರ್ಶಿಸುವ ಯಂತ್ರವೊಂದನ್ನು ಹಾಗೂ ಸಣ್ಣ ಪ್ರಮಾಣದ ರೀಲನ್ನು ತಂದು ಪ್ರಾಯೋಗಿಕವಾಗಿ ತಮ್ಮ ಮನೆಯ ಗೋಡೆಯ ಮೇಲೆ ಪ್ರದರ್ಶಿಸಿದರಲ್ಲದೇ ಇವರ ಮೊದಲ ಚಿತ್ರ ಕೂಡ ಆಗಿತ್ತು.ಆದರೆ ಈ ಚಿತ್ರ ಪ್ರದರ್ಶನಕ್ಕೆ ಪ್ರೇಕ್ಷಕರು ಯಾರು ಎಂದು ನಿಮಗೆ ಗೊತ್ತಾ? ಇವರ ಕುಟುಂಬದ ಸದಸ್ಯರೇ ಮೊದಲ ಪ್ರೇಕ್ಷಕರಾಗಿದ್ದರು ಆದರೆ ಮೊದಲ ಪ್ರಯತ್ನದ ಸಂತಸದ ಸಮಯದಲ್ಲಿ ದುರಾದೃಷ್ಟವಶಾತ್ ವಿಧಿಯು ಇವರ ಜೀವನದಲ್ಲಿ ಒಂದು ಕೆಟ್ಟ ಆಟವನ್ನು ಆಡಿತು.ತಮ್ಮ 40 ನೇ ವಯಸ್ಸಿನಲ್ಲಿ ಕಣ್ಣಿನ ಸಮಸ್ಯೆಯಿಂದ ಇದ್ದಕ್ಕಿದ್ದಂತೆ ಕಣ್ಣು ಸರಿಯಾಗಿ ಕಾಣಿಸದ  ಕಾರಣ ಇವರ ಆಸೆಗಳೆಲ್ಲವೂ ನುಚ್ಚು ನೂರಾಗಿತ್ತಲ್ಲದೇ ಅವರ ಪಾಲಿಗೆ ಪ್ರಪಂಚವೇ ತಲೆ ಕೆಳಗಾಗಿತ್ತು ಆದರೆ ಇವರ ವೈದ್ಯ ಮಿತ್ರ ಡಾ.ಪ್ರಭಾಕರ್ ರವರ ನಿರಂತರ ಚಿಕಿತ್ಸೆ ಹಾಗೂ ಆರೈಕೆಯ ಫಲ ಕಣ್ಣುಗಳು ಮೊದಲಿನಂತೆ ಕಾಣಲಾರಂಭಿಸಿದವು ಹುದುಗಿ ಹೋಗಿದ್ದ ಇವರ ಆಸೆ ಪುನಃ ತಲೆಯೆತ್ತಿತಲ್ಲದೇ ಅಪ್ಪಟ ಭಾರತೀಯ ಚಿತ್ರ ಮಾಡಬೇಕೆಂಬ ಹಂಬಲವು ಮತ್ತಷ್ಟು ಹೆಚ್ಚಾಯಿತು. ತಮ್ಮಲ್ಲಿದ್ದ ಸಮಸ್ತ ಆಸ್ತಿಯನ್ನು ಅಡವಿಟ್ಟು ಚಿತ್ರ ನಿರ್ಮಾಣಕ್ಕೆ ಬೇಕಾಗುವ ಯಂತ್ರಗಳನ್ನು ಖರೀದಿಸಲು ಲಂಡನ್ನಿಗೆ ತೆರಳಿದರು.ಆದರೆ 42 ವರ್ಷ ವಯಸ್ಸಿನ ಇವರಿಗೆ ಸ್ನೇಹಿತರಿಂದಾಗಲಿ, ನೆಂಟರಿಂದಾಗಲಿ ನಿರೀಕ್ಷಿತ ಮಟ್ಟದಲ್ಲಿ ನೆರವು ಸಿಗಲಿಲ್ಲ. ಅಲ್ಲಿನ ಬಯಾಸ್ಕೋಪ್ ಎಂಬ ಚಲನಚಿತ್ರ ವಾರಪತ್ರಿಕೆಯ ಸಂಪಾದಕರಾಗಿದ್ದ ಕಾರ್ಬೋನ್ ಕೂಡ ಆರಂಭದಲ್ಲಿ ಸಹಾಯ ಮಾಡಲು ಹಿಂಜರಿದರೂ ಇವರ ಅಚಲ ನಿರ್ಧಾರವನ್ನು ನೋಡಿ ಮೆಚ್ಚಿ ಚಿತ್ರ ನಿರ್ಮಾಪಕರಾದ ಸಿಸಿಲ್ ರವರನ್ನು ಪರಿಚಯಿಸಿದರು. ಇವರ ಬಳಿ ಹಲವು ತಿಂಗಳುಗಳ ಕಾಲ ಚಿತ್ರ ನಿರ್ಮಾಣದ ಎಲ್ಲ ಭಾಗಗಳನ್ನು ಅಧ್ಯಯನ ಮಾಡಿ ಚಿತ್ರವನ್ನು ನಿರ್ಮಿಸಿಯೇ ತೀರಬೇಕೆಂಬ ಅಚಲ ನಿರ್ಧಾರದೊಂದಿಗೆ ತವರಿಗೆ ಹಿಂದುರುಗಿ ಚಿತ್ರ ನಿರ್ಮಾಣಕ್ಕೆ ಕೂಡ ಸಿದ್ಧರಾದರು.  
    ವಿದೇಶದಿಂದ ಹಿಂತಿರುಗಿದ ಇವರು ಮೊದಲು ರಾಮ, ಕೃಷ್ಣ ರ ಕಥೆಯನ್ನು ಚಿತ್ರ ಮಾಡಬೇಕೆಂದಿದ್ದರೂ ಕಾರಣಾಂತರಗಳಿಂದ ಕಡೇ ಗಳಿಗೆಯಲ್ಲಿ ರಾಜಾ ಹರಿಶ್ಚಂದ್ರನ ಕಥೆಯನ್ನು ಚಿತ್ರ ಮಾಡಲು ನಿರ್ಧರಿಸಿದರು. ಆದರೆ ಚಿತ್ರ ನಿರ್ಮಾಣದ ಆರಂಭದಲ್ಲಿ ಪುನಃ ಹಣದ ಕೊರತೆಯು ಉಂಟಾಯಿತು. ಪತ್ನಿ ಸರಸ್ವತಿ ಬಾಯಿ ತಮ್ಮ ಒಡವೆಗಳನ್ನು ಅಡವಿಟ್ಟು ‌ಹಣವನ್ನು ಪಡೆದು ನಿಂತಿದ್ದ ಚಿತ್ರದ ಚಿತ್ರೀಕರಣದ ಕೆಲಸವನ್ನು ಮುಂದುವರೆಸಿದರು. ತಾಂತ್ರಿಕ ಸೌಲಭ್ಯವೇ ಇರದಿದ್ದ ಕಾಲದಲ್ಲಿ ಚಿತ್ರವನ್ನು ನಿರ್ಮಿಸುವ ಕಲೆಯು ಕೂಡ ಯಾರಿಗೂ ತಿಳಿದಿರಲಿಲ್ಲ. ಹೀಗಾಗಿ ಅನಿವಾರ್ಯವಾಗಿ ರಾಜಾ ಹರಿಶ್ಚಂದ್ರ ಚಿತ್ರದ ಕಥೆ, ನಿರ್ಮಾಣ, ನಿರ್ದೇಶನ,ನಟನೆ ಮತ್ತು ಛಾಯಾಗ್ರಹಣದ ಜವಾಬ್ದಾರಿಯನ್ನು ಏಕಾಂಗಿಯಾಗಿ ಯಶಸ್ವಿಯಾಗಿ ನಿರ್ವಹಿಸಿದ್ದರು. ಚಿತ್ರೀಕರಣದ ಸಮಯದಲ್ಲಿ ಕಾಡುತ್ತಿದ್ದ ಆರ್ಥಿಕ ಮುಗ್ಗಟ್ಟಿನ ಕಾರಣದಿಂದ ಚಿತ್ರೀಕರಣಕ್ಕಾಗಿ ಸೆಟ್ ಹಾಕಲು ಸಾಧ್ಯವಾಗಿರಲಿಲ್ಲ. ಆದರೆ ಆ ಸಮಯದಲ್ಲಿ ಇವರು ಮಾಡಿದ ಉಪಾಯ ಅದ್ಭುತವಾಗಿತ್ತು. ತಮ್ಮ ಚಿತ್ರದ ಚಿತ್ರೀಕರಣ ಸುಗಮವಾಗಿ ಸಾಗಬೇಕೆಂಬ ಉದ್ದೇಶದಿಂದ ತಮ್ಮ ಮನೆಯನ್ನೇ ಫಾಲ್ಕೆ ಫಿಲಂ ಸಂಸ್ಥೆಯಾಗಿ ಮಾರ್ಪಡಿಸಿ ಅಲ್ಲಿಯೇ ಕಾಳಗದ ದೃಶ್ಯದ ಚಿತ್ರೀಕರಣವನ್ನು ಮಾಡಿದ್ದರು. ಅಲ್ಲದೇ ಚಿತ್ರ ತಂಡದ ಸದಸ್ಯರಿಗೆ ತಮ್ಮ ಮನೆಯಲ್ಲಿ ಊಟ, ಉಪಚಾರದ ವ್ಯವಸ್ಥೆಯನ್ನು ಮಾಡಿದ್ದರು. ಆದರೂ ಬಂದ ಹಲವಾರು ಅಡೆತಡೆಗಳನ್ನು ಎದುರಿಸಿ ತಮ್ಮ ಚಿತ್ರದ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿದರು.
     1913,  ಎಪ್ರಿಲ್ 21  ರಂದು ಮುಂಬಯಿಯ ಒಲಂಪಿಯಾ ಚಿತ್ರಮಂದಿರದಲ್ಲಿ ಮುಂಬಯಿಯ ಶ್ರೀಮಂತರು, ಪತ್ರಿಕಾ ರಂಗದವರು ಮತ್ತು ಹಲವು ಮಹನೀಯರ ಮುಂದೆ ಈ ಚಿತ್ರದ ಪೂರ್ವ ಭಾವಿ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಈ ಚಿತ್ರವನ್ನು ವೀಕ್ಷಿಸಿದವರು ಒಂದು ಕ್ಷಣ ದಂಗಾಗಿದ್ದರೆ ಇವರು (ಧುಂಡಿರಾಜ್)  ತಮ್ಮ ಮಹಾತ್ವಾಕಾಂಕ್ಷೆಯ ಕನಸು ನನಸಾಯಿತೆಂದು ಸಂತಸಪಟ್ಟರು.
    1913, ಮೇ 13 ಭಾರತೀಯ ಚಲನಚಿತ್ರ ರಂಗವನ್ನು ಸುವರ್ಣಾಕ್ಷರಗಳಲ್ಲಿ ಬರೆದ ದಿನ ಕೂಡ. ಆ ದಿನ ಮುಂಬೈನ ಜನ ಸಾಗರದ ಗಮನವೆಲ್ಲ ಕಾರೋನೇಷನ್   ಚಿತ್ರಮಂದಿರದ ಕಡೆ ಕೇಂದ್ರೀಕೃತವಾಗಿತ್ತು. ಹಣವಿದ್ದವರು ಚಿತ್ರಮಂದಿರದಲ್ಲಿ ಕುಳಿತಿದ್ದರೆ ಹಣವಿಲ್ಲದವರು ಚಿತ್ರ ಮಂದಿರದ ಹೊರಗಡೆ ಕುತೂಹಲದಿಂದ ಸೇರಿದ್ದರು. ಚಿತ್ರ ಮಂದಿರದಲ್ಲಿ ಕುಳಿತ ಎಲ್ಲರಲ್ಲೂ ಒಂದು ತರಹದ ಕುತೂಹಲ,ತವಕ ಮತ್ತು ವಿಸ್ಮಯ ಲೋಕವೊಂದನ್ನು ತಮ್ಮ ಎರಡೂ ಕಣ್ಣುಗಳಲ್ಲಿ ತುಂಬಿಕೊಳ್ಳುವ ಆಸೆ ಅವರನ್ನು ಆವರಿಸಿತ್ತು. ಮೊದಲಿಗೆ ಪಾಶ್ಚಾತ್ಯ ತರುಣಿಯರಿಂದ ಮನಮೋಹಕ ನೃತ್ಯ ಮುಗಿಯುತ್ತಿದ್ದಂತೆ ತೆರೆಯ ಮೇಲೆ ನಾಯಕ, ನಾಯಕಿಯ ಆಗಮನವನ್ನು ಕಂಡರು. ಅವರೇ ಸಾಕ್ಷಾತ್ ಹರಿಶ್ಚಂದ್ರ ಮತ್ತು ಚಂದ್ರಮತಿ, ಆ ಸಮಯದಲ್ಲಿ ಚಿತ್ರ ಮಂದಿರದಲ್ಲಿ ಸಂಪೂರ್ಣ ನಿಶ್ಶಬ್ದವಿತ್ತಲ್ಲದೇ ಮಾತಿಗೂ ಕೂಡ ಅವಕಾಶವಿರಲಿಲ್ಲ. ಏಕೆಂದರೆ ನಟನೆಯೇ ಮಾತಿನ ಸ್ಥಳವನ್ನು ಆವರಿಸಿತ್ತು. ಬೆಳ್ಳಿ ತೆರೆಯ ಮೇಲೆ ಮಹಾರಾಜ ಹರಿಶ್ಚಂದ್ರ ಹಾಗೂ ರಾಣಿ ಚಂದ್ರಮತಿಯ ಸತ್ಯಾನ್ವೇಷಣೆಯ ಪರಿಯನ್ನು ಕಂಡು ಪ್ರೇಕ್ಷಕರು ಕಣ್ಣೀರಿಟ್ಟರು. ರಾಜಶ್ರೀ ವಿಶ್ವಾಮಿತ್ರ ಮತ್ತು ವಶಿಷ್ಠರ ನಡುವೆ ಆದ ವಾಗ್ವಾದದಲ್ಲಿ ಯಾವ ಪಾಪವನ್ನು ಮಾಡದ  ರಾಜ ದಂಪತಿಗಳು ಪಡುತ್ತಿರುವ ತೊಂದರೆಯನ್ನು ಕಂಡು ಚಿತ್ರ ರಸಿಕರು ಹಲುಬಿದರಲ್ಲದೇ ಕಾಲದ ಪರಿವೆಯನ್ನು ಮರೆತು ಹರಿಶ್ಚಂದ್ರ ಮತ್ತು ಚಂದ್ರಮತಿಯ ಕಷ್ಟ ಸುಖದಲ್ಲಿ ಒಂದಾದರು. ಈ ಚಿತ್ರವು ನಮ್ಮ ಭಾರತೀಯ ಚಿತ್ರರಂಗದ ಬೆಳವಣಿಗೆಯ ನಾಂದಿಗೆ ಕಾರಣವಾಯಿತು. ನಂತರ ಈ ಬೆಳವಣಿಗೆಯ ಪ್ರೇರಣೆಯಿಂದ ದಕ್ಷಿಣ ಭಾರತದಲ್ಲಿ ಮರಾಠಿ, ತಮಿಳು ಮತ್ತು ಕನ್ನಡ ಸೇರಿ ಅನೇಕ ಭಾಷೆಗಳ ಚಿತ್ರರಂಗಗಳು ಪಾದಾರ್ಪಣೆ ಮಾಡುವುದರ ಮೂಲಕ ಚರಿತ್ರೆಯನ್ನು ಸೃಷ್ಟಿಸಿದವು.
       ಚಲನಚಿತ್ರ ರಂಗದ ಅವಿಷ್ಕಾರಕ್ಕಾಗಿ ಮತ್ತು ಅಭಿವೃದ್ಧಿಗಾಗಿ ತಮ್ಮ ಜೀವನವನ್ನೇ ಪಣಕ್ಕಿಟ್ಟು ಹಗಲು ರಾತ್ರಿ ಎನ್ನದೇ ಶ್ರಮವಹಿಸಿ ಕೆಲಸವನ್ನು ನಿರ್ವಹಿಸಿ ಚಲನಚಿತ್ರ ರಂಗದ ಮಾಯಾಲೋಕವನ್ನು ಹರಿಶ್ಚಂದ್ರ ಎಂಬ ಚಿತ್ರದ ಮೂಲಕ ಭಾರತದ ಜನತೆಗೆ ನೀಡುವುದರ ಮೂಲಕ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಒಂದು ವಿಶಿಷ್ಟ ದಾಖಲೆಯನ್ನು ಬರೆದಿದ್ದರು.
      ಈ ರೀತಿಯಾಗಿ ಚಿತ್ರ ರಂಗದಲ್ಲಿ ಹಲವು ಅನನ್ಯ ಸಾಧನೆಯನ್ನು ಮಾಡಿ ತಮ್ಮದೇ ಆದ ವಿಶಿಷ್ಟ ದಾಖಲೆಯನ್ನು ನಿರ್ಮಿಸಿದ್ದ ಇವರು ಫೆಬ್ರುವರಿ 16, 1944 ರಂದು ತಮ್ಮ 73 ನೇ ವಯಸ್ಸಿನಲ್ಲಿ ಮರಣವನ್ನು ಹೊಂದುವುದರ ಮೂಲಕ ತಮ್ಮ ಬದುಕಿನ ಸಾರ್ಥಕತೆಯನ್ನು ಕಂಡರು.
    ಈ ರೀತಿಯಾಗಿ 20 ನೇ ಶತಮಾನದ ಭಾರತೀಯ ಚಿತ್ರರಂಗದ ಪಿತಾಮಹರಾದ ದಾದಾಸಾಹೇಬ್ ಫಾಲ್ಕೆಯವರ ಹೆಸರು ದೇಶಾದ್ಯಂತ ಪ್ರಸಿದ್ಧಿಯನ್ನು ಪಡೆಯಿತು. ಚಿತ್ರ ರಂಗದಲ್ಲಿ ಅನುಪಮ ಸೇವೆಯನ್ನು ಸಲ್ಲಿಸಿದವರಿಗೆ ಪುರಸ್ಕಾರಗಳನ್ನು ಘೋಷಿಸಿದರು. ಒಬ್ಬ ಕಲಾವಿದ, ತಂತ್ರಜ್ಞಾನದವರಾಗಲಿ, ಚಿತ್ರ ರಂಗಕ್ಕೆ ಸಂಬಂಧಪಟ್ಟ ಯಾರೇ ಆಗಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪಡೆದಿದ್ದಾರೆಂದರೆ ಎಲ್ಲ ಘಟ್ಟಗಳನ್ನು ದಾಟಿ ಎವರೆಸ್ಟ್ ಶಿಖರದ ತುತ್ತ ತುದಿಯನ್ನು ಮುಟ್ಟಿದರು ಎಂದೇ ಅರ್ಥ. ಈಗಾಗಲೇ ನಮ್ಮ ಭಾರತೀಯ ಚಿತ್ರರಂಗದಲ್ಲಿ ಉನ್ನತ ಸಾಧನೆಯನ್ನು ಮಾಡಿರುವ ಅನೇಕ ಶ್ರೇಷ್ಠ ಗಣ್ಯರು ಈ ಪ್ರಶಸ್ತಿಯನ್ನು ಪಡೆದಿದ್ದಾರೆ.
     1969 ನಾನೇ ಇಸ್ವಿಯು ಭಾರತೀಯ ಚಿತ್ರರಂಗದ ಪಾಲಿಗೆ ಮರೆಯಲಾಗದ ವರ್ಷ ಕೂಡ ಆಗಿದೆ. ಬಾಲಿವುಡ್ ಚಿತ್ರರಂಗದಲ್ಲಿ ಉನ್ನತ ಸಾಧನೆಯನ್ನು ಮಾಡಿ ಪ್ರಸಿದ್ಧಿಯನ್ನು ಪಡೆದಿದ್ದ ಹಿರಿಯ ನಟಿ ದೇವಿಕಾ ರಾಣಿ ರೋರಿಚ್ ರವರು ಸ್ಥಾಪನೆಯಾದ ವರ್ಷ (1969) ಪ್ರಪ್ರಥಮ ಬಾರಿಗೆ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಸ್ವೀಕರಿಸಿದ ಮೊಟ್ಟ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 1995 ನೇ ಇಸ್ವಿಯಲ್ಲಿ ಕನ್ನಡಿಗರ ಕಣ್ಮಣಿ, ಅಭಿಮಾನಿಗಳ ಆರಾಧ್ಯ ದೈವ ವರನಟ ಡಾ. ರಾಜಕುಮಾರ್ ಅವರು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪಡೆಯುವುದರ ಮೂಲಕ ನಮ್ಮ ಕನ್ನಡ ಚಿತ್ರರಂಗದ ಖ್ಯಾತಿಯನ್ನು ಮತ್ತಷ್ಟು  ಬೆಳೆಸಿದರು. ಇತ್ತೀಚಿನ ವರ್ಷಗಳಲ್ಲಿ ಕನ್ನಡದವರೇ ಆಗಿರುವ ಕ್ಯಾಮೆರಾ ತಂತ್ರಜ್ಞಾನ ವಿ.ಕೆ.ಮೂರ್ತಿಯವರು ಕೂಡ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪಡೆಯುವುದರ ಮೂಲಕ ನಮ್ಮ ಕನ್ನಡ ಚಿತ್ರರಂಗದ ಖ್ಯಾತಿ ಇನ್ನು ಎತ್ತರಕ್ಕೆ ಬೆಳೆಯಿತು.
      ಭಾರತೀಯ ಚಿತ್ರರಂಗದ ಅವಿಷ್ಕಾರಕ್ಕಾಗಿ ಮತ್ತು ಬೆಳವಣಿಗೆಗಾಗಿ  ತಮ್ಮ ಜೀವನವನ್ನೇ ಪಣಕ್ಕಿಟ್ಟ ದಾದಾ ಸಾಹೇಬ್ ಫಾಲ್ಕೆಯವರ ಸ್ಮರಣಾರ್ಥವಾಗಿ ಭಾರತ ಸರ್ಕಾರವು ಚಲನಚಿತ್ರ ರಂಗದ ಕ್ಷೇತ್ರದಲ್ಲಿ ಅಮೂಲ್ಯ ಸೇವೆಯನ್ನು ಸಲ್ಲಿಸಿದ ಭಾರತೀಯರಿಗೆ 1969 ನೇ ಇಸ್ವಿಯಿಂದ ಪ್ರತಿ ವರ್ಷ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪ್ರಧಾನ ಮಾಡುತ್ತ ಬಂದಿದೆ.
ಅಂದ ಹಾಗೆ ಬರೆಯುತ್ತ ಒಂದು ಮುಖ್ಯವಾದ ವಿಷಯ ಹೇಳುವುದನ್ನು ಮರೆತಿದ್ದೆ.
    ಈ ಲೇಖನವನ್ನು ರಚಿಸುವ ಮೊದಲು ಸಂಬಂಧಪಟ್ಟ ಮಾಹಿತಿಗಳನ್ನು ಸುಮಾರು ಮೂರು ತಿಂಗಳ ಹಿಂದೆ ಸಂಗ್ರಹಿಸಿದ್ದು ಇದನ್ನು 150, ಅಥವಾ 200ನೇ ಲೇಖನವಾಗಿ ರಚಿಸಲು ನಿರ್ಧರಿಸಿದ್ದೆ. ಆದರೆ ನನ್ನ ಮನಸ್ಸಾಕ್ಷಿ ಇದನ್ನು ಈ ಕ್ಷಣವೇ  ಕಾರ್ಯರೂಪಕ್ಕೆ ತರಲು ಪ್ರೇರೇಪಿಸಿದ ಕಾರಣ 128 ನೇ ಲೇಖನವಾಗಿ ರಚಿಸಿದ್ದೇನೆ. ಸಂದೀಪ ಜೋಶಿ. ಗಂಗಾವತಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ