ಮೈಸೂರು: ಈ ಬಾರಿ ಮೈಸೂರಿನ ಹೊರ ವಲಯದಲ್ಲಿ ಯುವ ದಸರಾ ಆಯೋಜನೆ ಮಾಡಿರುವ ಜಿಲ್ಲಾಡಾಳಿತದ ಕ್ರಮವನ್ನು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗಸ್ವಾಮಿ ಸ್ವಾಗತಿಸಿದ್ದಾರೆ.
ಯುವ ದಸರಾ ಕಾರ್ಯಕ್ರಮದ ವೇದಿಕೆ ಬದಲಾಗಿದ್ದು, ಮೈಸೂರು ನಗರದ ಹೊರ ವಲಯದ ಉತ್ತನಹಳ್ಳಿ ಬಳಿ ಆಯೋಜನೆ ಮಾಡಲಾಗಿದೆ.
ದಸರಾದ ಪ್ರಮುಖ ಆಕರ್ಷಣೆಯಾಗಿರುವ ಯುವ ದಸರಾ ಕಾರ್ಯಕ್ರಮಕ್ಕೆ ಮೈಸೂರು ಜಿಲ್ಲಾಡಳಿತ ಬದಲಿ ಜಾಗವನ್ನು ಗುರುತಿಸುವುದು ಸ್ವಾಗತಾರ್ಹವಾಗಿದೆ ಎಂದು ಅವರು ತಿಳಿಸಿದ್ದಾರೆ.
ಇಷ್ಟು ವರ್ಷ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ಲಕ್ಷಾಂತರ ಮಂದಿ ಯುವ ಸಮೂಹ ಸೇರಿ ಸಂಭ್ರಮಿಸುತ್ತಿತ್ತು. ಆದರೆ ಈ ಬಾರಿ ನಗರದೊಳಗೆ ಸಂಚಾರ ದಟ್ಟಣೆ ತಗ್ಗಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸ್ಥಳ ಬದಲಾವಣೆ ಮಾಡಿರುವುದು ನಿಜಕ್ಕೂ ಒಳ್ಳೆಯದು ಎಂದು ಹೇಳಿದ್ದಾರೆ.
ಈ ಬಾರಿ ಲಲಿತಾದ್ರಿಪುರ-ಉತ್ತನಹಳ್ಳಿ ನಡುವಿನ ಖಾಲಿ ಜಾಗದಲ್ಲಿ ಯುವ ದಸರಾ ಕಾರ್ಯಕ್ರಮವನ್ನ ಆಯೋಜಿಸಲಾಗಿದೆ. ಸುಮಾರು 100 ಎಕರೆ ಕೃಷಿ ಭೂಮಿ ಜಾಗದಲ್ಲಿ ಯುವ ದಸರಾ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, 150 ಅಡಿ ಬೃಹತ್ ವೇದಿಕೆ ನಿರ್ಮಿಸಲು ಚಿಂತನೆ ನಡೆಸಿರುವುದು ಸ್ವಾಗತಾರ್ಹ ಎಂದು ತೇಜಸ್ವಿ ನಾಗಲಿಂಗ ಸ್ವಾಮಿ ತಿಳಿಸಿದ್ದಾರೆ.