ಬೆಂಗಳೂರು: ಅಕ್ಟೋಬರ್ ೪ ಮತ್ತು ೫ ರಂದು ಕೆನರಾ ಉತ್ಸವ
ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸುವ ಹಾಗೂ ಅವರಿಗೆ ಮಾರುಕಟ್ಟೆ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸಿಕೊಡಿಸುವ ದೃಷ್ಟಿಯಿಂದ ಕೆನರಾ ಬ್ಯಾಂಕ್ ವೃತ್ತ ಕಚೇರಿಯವರು ಹಮ್ಮಿಕೊಂಡಿರುವ ಕೆನರಾ ಉತ್ಸವವನ್ನು ಕೆನರಾ ಬ್ಯಾಂಕ್ ನ ಕಾರ್ಯನಿರ್ವಾಹಕ ನಿರ್ದೇಶಕರಾದ ಭವೇಂದ್ರ ಕುಮಾರ್ ರವರು ಉದ್ಘಾಟಿಸಲಿದ್ದಾರೆ. ಬೆಂಗಳೂರಿನ ಎಂ ಜಿ ರಸ್ತೆಯಲ್ಲಿರುವ ವೃತ್ತ ಕಚೇರಿಯ ಅವರಣದಲ್ಲಿ ೨೦೨೪ ಅಕ್ಟೋಬರ್ ೪ ಮತ್ತು ೫ ರಂದು ಜರುಗಲಿದೆ. ಮಹಿಳಾ ಉದ್ಯಮಿಗಳಿಂದ ತಯಾರಿಸಲ್ಪಟ್ಟ ವಿವಿಧ ಉತ್ಪನ್ನಗಳಾದ ಸಿದ್ಧ ಉಡುಪುಗಳು, ಗೃಹಲಂಕಾರ, ಟೆರಾಕೋಟ, ಪರಿಸರ ಸ್ನೇಹಿ, ಚಿತ್ರಕಲೆ, ಕುಂಭಕಲೆ, ಕರಕುಶಲ, ಆಹಾರ, ಉಣ್ಣೆ , ಪ್ರಸಾಧನ ಇತ್ಯಾದಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟವನ್ನು ಏರ್ಪಡಿಸಿದ್ದು ಈ ಉತ್ಸವದಲ್ಲಿ ೫೦ ಮಹಿಳಾ ಉದ್ಯಮಿಗಳು ಭಾಗವಹಿಸಲಿದ್ದಾರೆ.
ಏನಿದು ಕೆನರಾ ಉತ್ಸವ ?ಇದೊಂದು ಕೆನರಾ ಬ್ಯಾಂಕ್ ನ ವಿನೂತನ ಕಾರ್ಯಕ್ರಮವಾಗಿದ್ದು, ಮಹಿಳಾ ಉದ್ಯಮಿಗಳು ತಯಾರಿಸಿದ ವಿವಿಧ ಉತ್ಪನ್ನಗಳಿಗೆ ಮಾರುಕಟ್ಟೆಯನ್ನು ಒದಗಿಸುವ ದೃಷ್ಟಿಯಿಂದ ದೇಶಾದ್ಯಂತ ಪ್ರತಿ ವರುಷವೂ ಕೆನರಾ ಉತ್ಸವವನ್ನು ಆಯೋಜಿಸುತ್ತಾ ಬಂದಿದೆ. ಈ ಉತ್ಸವಕ್ಕೆ ತಗಲುವ ಎಲ್ಲಾ ವೆಚ್ಚಗಳನ್ನು ಕೆನರಾ ಬ್ಯಾಂಕ್ ಭರಿಸುತ್ತದೆ. ಮಹಿಳಾ ಉದ್ಯಮಿಗಳಿಗೆ ಪ್ರವೇಶ ಶುಲ್ಕವಿರುವುದಿಲ್ಲ. ಉತ್ಪನ್ನಗಳ ಮಾರಾಟದಿಂದ ಬಂದ ಪೂರ್ಣ ಲಾಭವು ಮಹಿಳಾ ಉದ್ಯಮಿಗಳಿಗೇ ಸಂದಾಯವಾಗುತ್ತದೆ. ಇದರ ಜೊತೆಗೆ ಉತ್ಸವದಲ್ಲಿ ಭಾಗವಹಿಸುವ ಮಹಿಳಾ ಉದ್ಯಮಿಗಳು ಗ್ರಾಹಕರು ಮತ್ತು ಬ್ಯಾಂಕ್ ಅಧಿಕಾರಿಗಳೊಂದಿಗೆ ಸಂವಹನ ನಡೆಸಲು ಮತ್ತು ಮಹಿಳಾ ಉದ್ಯಮಿಗಳ ಮಾರುಕಟ್ಟೆ ಸಾಮರ್ಥ್ಯವನ್ನು ವೃದ್ಧಿಸಲೂ ಸಹಕಾರಿಯಾಗುತ್ತದೆ.
ಈ ಉತ್ಸವದಲ್ಲಿ ಕೆನರಾ ಬ್ಯಾಂಕ್ ವೃತ್ತಕಚೇರಿಯ ಜನರಲ್ ಮ್ಯಾನೇಜರ್ ಶ್ರೀ ಮಹೇಶ್ ಪೈ ಮತ್ತು ಅಧಿಕಾರಿ ವರ್ಗದವರು ಭಾಗವಹಿಸಲಿದ್ದಾರೆ.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ