ಉತ್ತರ ಕನ್ನಡ/ಶಿರಸಿ: ತಾಯಿಯ ಗರ್ಭದಲ್ಲಿರುವಾಗಲೇ ಜನಿಸಲಿರುವ ಮಗುವಿಗೆ ಸುಮಾರು 80% ಸಂಸ್ಕಾರ ಪ್ರಾಪ್ತವಾಗಿರುತ್ತದೆ. ಆದ್ದರಿಂದ ಭಾವೀ ತಂದೆ ತಾಯಿಯರು ಇದನ್ನರಿತು ಆದರ್ಶ ಜೀವನ ನಡೆಸಬೇಕು; ಸದಾ ಪ್ರಸನ್ನವಾಗಿರಬೇಕು; ಅದೇ ನಮ್ಮ ಜೀವನ ಶೈಲಿಯನ್ನೂ ನಿರ್ಧರಿಸುತ್ತದೆ. 6 ರಿಂದ 7 ಗಂಟೆಯ ನಿರಾತಂಕ ನಿದ್ದೆ, ಬೇಗ ಮಲಗಿ ಬೇಗನೇ ಏಳುವುದು, ರಾತ್ರಿ ಬೇಗ ಆಹಾರ ಸೇವಿಸುವುದು ಮತ್ತು ತದ ನಂತರ ಸುಮಾರು 3 ಗಂಟೆಯ ಬಳಿಕ ಮಲಗುವುದು, ಮಧ್ಯಾಹ್ನದ ಊಟದ ಬಳಿಕ ಮಲಗಿದ್ದೇ ಆದಲ್ಲಿ ಗರಿಷ್ಟ ಅರ್ಧ ಘಂಟೆ ಮಾತ್ರ ಮಲಗುವುದು, ಸಕ್ಕರೆ-ಮೈದಾ-ಕರಿದ ಪದಾರ್ಥ-ಚಹ/ಕಾಫಿ-ಮಸಾಲೆ-ಧೂಮಪಾನ/ಮದ್ಯಪಾನ ಮತ್ತು ತಾಮಸಿಕ ಆಹಾರ ತ್ಯಜಿಸುವುದು. ಹಣ್ಣು-ತರಕಾರಿ-ಬೇಳೆಕಾಳು ಮತ್ತಿತರ ಪ್ರೋಟೀನ್ ಯುಕ್ತ ಆಹಾರ ಸೇವನೆ. ಪೂರ್ತಿ ಹೊಟ್ಟೆ ತುಂಬುವುದರೊಳಗೆ, ಅರ್ಥಾತ್ 75% ತುಂಬಿದಾಗ ಆಹಾರ ಸೇವನೆ ಮುಗಿಸುವುದು; ಹಸಿದಾಗ ಊಟ ಮತ್ತು ಬಾಯಾರಿಕೆಯಾದಾಗ ನೀರನ್ನು ಸೇವಿಸುವುದು; ಬೆವರು ಬರುವಷ್ಟು ದೈಹಿಕ ಶ್ರಮ ಮಾಡುವುದು ಮುಂತಾಗಿ ಉತ್ತಮ ಆರೊಗ್ಯಕ್ಕೆ ಬೇಕಾದ ಉಪಯುಕ್ತ ಮಾಹಿತಿಯನ್ನು ಡಾ. ಅಶ್ವಥ್ ಹೆಗಡೆ ನೀಡಿದರು. ಅವರು ಗಾಯತ್ರಿ ಗೆಳೆಯರ ಬಳಗ ಹಮ್ಮಿಕೊಂಡಿದ್ದ “ಕಾಷ್ಠ-ಚಿತ್ರ-ಛಾಯಾಚಿತ್ರ ಸಂಗಮ”* ಕಾರ್ಯಕ್ರಮವನ್ನು ಉದ್ಘಾಟಿಸಿ “ಮಧುಮೇಹ ಹಾಗೂ ಸೂಕ್ತ ಆರೋಗ್ಯಕ್ಕಾಗಿ ಜೀವನ ಶೈಲಿ ಮತ್ತು ಯೋಗ” ವಿಷಯವಾಗಿ ಆರೋಗ್ಯ ಮಾಹಿತಿ ಕುರಿತು ಮನೋಜ್ಞ ಉಪನ್ಯಾಸ ನೀಡುತ್ತಿದ್ದರು. ಮುಂದುವರಿದು, ಮನುಷ್ಯರು, ಪ್ರಾಣಿ ಮತ್ತು ಸಸ್ಯಗಳ ಜೊತೆ ಸಂಪರ್ಕವಿರಿಸಿಕೊಂಡು ಯೋಗ-ಧ್ಯಾನ ಮುಂತಾಗಿ ಉತ್ತಮ ಜೀವನ ಶೈಲಿಯೊಂದಿಗೆ ಮಧುಮೇಹ ಮುಕ್ತ ಸಮಾಜ ನಿರ್ಮಿಸೋಣ, ಆರೋಗ್ಯ ಸಮೃದ್ಧಿ ಹೊಂದೋಣ ಇದಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಆಶಿಸಿದರು.
ಸಾಹಿತಿ ಜಿ.ವಿ. ಕೊಪ್ಪಲತೋಟ ಅವರು ಗಣಪತಿ ಸ್ತುತಿ ಹಾಡಿದರೆ, ರವಿ ಹೆಗಡೆ ಗಡಿ ಹಳ್ಳಿ ಅವರು ಉಪನ್ಯಾಸಕಾರರ ಸೊಗಸಾದ ಪರಿಚಯ ನೆರವೇರಿಸಿದರು.
ಎಂ.ಎಸ್ ಹೆಗಡೆ ಕರ್ಕಿ ಅವರು ಆರೋಗ್ಯ ಸಲಹೆ ಉಪನ್ಯಾಸ ನೀಡಿದ ಡಾಕ್ಟರ್ ಅಶ್ವಥ್ ಹೆಗಡೆಯವರನ್ನು ಗೌರವಿಸಿದರು. ಜಯಪ್ರಕಾಶ್ ಹಬ್ಬು ಅವರು ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭದಲ್ಲಿ ವೈಶಾಲಿ ವಿ.ಪಿ.ಹೆಗಡೆ, ಸಾಹಿತಿಗಳಾದ ಸುಬ್ರಾಯ ಮತ್ತಿಹಳ್ಳಿ,ಮುಕ್ತಕ ಕವಿ ಕೃಷ್ಣ ಪದಕಿ,ತಾರಾ ಹೆಗಡೆ, ಶೋಭಾ ಹೆಗಡೆ, ಗ.ಮ. ತುಂಬೆಮನೆ, ವಾಸುದೇವ ಶಾನಭಾಗ, ಲಕ್ಷ್ಮಣ ಶಾನಭಾಗ್, ಡಾ.ರವಿಕಿರಣ ಪಟವರ್ಧನ, ನಾಗೇಂದ್ರ ಮತ್ತಮುರ್ಡು, ಡಿ.ಎಸ್ ಹೆಗಡೆ, ಗೀತಾ ಸಭಾಹಿತ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
ಕರುನಾಡಕಂದ ಸುದ್ದಿಪತ್ರಿಕೆ ಮತ್ತು ಆನ್‌ಲೈನ್ ತಾಣದ "ಕರುನಾಡ ಕಂದ ಜನಜಾಗೃತಿ ವೇದಿಕೆಯ ವಿಶೇಷ ಪುಟಕ್ಕೆ ಭೇಟಿ ನೀಡಿ