ಕೋಲಾರ: ಸರ್ಕಾರಗಳು ಗಡಿ ಭಾಗಗಳನ್ನು ಅಭಿವೃದ್ದಿಪಡಿಸಲು ಗ್ರಾಮ ಪಂಚಾಯಿತಿಗಳ ಮೂಲಕ ಹತ್ತಾರು ಯೋಜನೆಗಳನ್ನು ಜಾರಿಗೆ ತಂದು ಕೋಟ್ಯಾಂತರ ರೂ.ಗಳನ್ನು ಬಿಡುಗಡೆ ಸಹ ಮಾಡುತ್ತವೆ, ಆದರೆ ಗ್ರಾಮ ಪಂಚಾಯಿತಿಗಳಲ್ಲಿನ ಅಧಿಕಾರಿಗಳು ಗ್ರಾಮಗಳ ಅಭಿವೃದ್ದಿಗೆ ಬರುವ ಕೋಟ್ಯಾಂತರ ರೂ.ಗಳನ್ನು ತಮ್ಮ ಜೇಬಿಗಿಳಿಸಿಕೊಂಡು ಸರ್ಕಾರಕ್ಕೂ ವಂಚಿಸಿ, ಗ್ರಾಮೀಣ ಜನರನ್ನೂ ವಂಚಿಸುತ್ತಿದ್ದಾರೆ… ಗ್ರಾಮ ಪಂಚಾಯಿತಿಗಳಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳಿಗೆ ದೂರು ಕೊಟ್ಟರೆ ಅಂತಹವರ ಮೇಲೆ ಹಲ್ಲೆ ಮಾಡಿರುವ ಘಟನೆಗಳು ಕೂಡಾ ನಡೆದಿವೆ…
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಗಡಿ ಹಂಚಿನಲ್ಲಿರುವ ಮುದಿ ಮಡುಗು ಗ್ರಾಮ ಪಂಚಾಯಿತಿಯಲ್ಲಿ ಕೋಟ್ಯಾಂತರ ರೂ.ಗಳ ಭ್ರಷ್ಟಾಚಾರ ನಡೆದಿದ್ದು, ಆ ಭ್ರಷ್ಟಾಚಾರದ ಮೂಲ ಕಿಂಗ್ ಪಿನ್ ಪಂಚಾಯಿತಿ ಕಂಪ್ಯೂಟರ್ ಆಪರೇಟರ್ ಸೋಮಶೇಖರ್ ಎಂಬುದು ತಿಳಿದುಬಂದಿದೆ.
ಗ್ರಾಮ ಪಂಚಾಯಿತಿ ವತಿಯಿಂದ ನಡೆಸಲಾಗುವ ನರೇಗಾ ಯೋಜನೆಯಲ್ಲಂತೂ ಸತ್ತವರ ಹೆಸರಿನಲ್ಲಿ ನರೇಗಾ ಕಾಮಗಾರಿ ಮಾಡಿ ಅವರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಿ ಎಟಿಎಂ ಮೂಲಕ ಹಣ ಡ್ರಾ ಮಾಡಲಾಗಿದೆ,ಅಷ್ಟೇ ಅಲ್ಲದೆ ಹೊರ ರಾಜ್ಯದ ವ್ಯಕ್ತಿಗಳ ಹೆಸರಿನಲ್ಲಿ ಜಾಬ್ ಕಾರ್ಡ್ ಮಾಡಲಾಗಿ, ತಾಲ್ಲೂಕಿನ ಬೇರೆ ಬೇರೆ ಪಂಚಾಯಿತಿ ವ್ಯಾಪ್ತಿಯ ಜನರ ಹೆಸರಿನಲ್ಲಿಯೂ ಜಾಬ್ ಕಾರ್ಡ್ ಮಾಡಲಾಗಿ ಅವರ ಹೆಸರಿನಲ್ಲಿ ಲಕ್ಷಾಂತರ ಹಣ ಡ್ರಾ ಮಾಡಲಾಗಿದೆ.
ಮುದಿ ಮಡುಗು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2016 ರಿಂದ 2023 ರ ವರೆಗೂ 780 ಮನೆಗಳು ಮಂಜೂರಾಗಿದ್ದು ಅವುಗಳ ಪೈಕಿ 200 ಮನೆಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಮನೆ ಕೊಡದೆ ಬಿಲ್ ಡ್ರಾ ಮಾಡಿಕೊಂಡಿರುವ ಗಂಭೀರ ಆರೋಪ ಇದೆ.
ಕುರಿ ಶೆಡ್ ಗಳು ನಿರ್ಮಾಣ ಮಾಡಿ ಅವುಗಳಿಗೆ ಮನೆ ಬಿಲ್ ಮಾಡಲಾಗಿದೆ ಹೀಗೆ ಗ್ರಾಮ ಪಂಚಾಯಿತಿಗೆ ಬರುವ ಎಲ್ಲಾ ಅನುದಾನಗಳಿಗೆ ನಕಲಿ ದಾಖಲಾತಿಗಳು ಸೃಷ್ಟಿ ಮಾಡಿ ಫಲಾನುಭವಿಗಳಿಗೆ ಯೋಜನೆ ನೀಡದೆ ಹಣ ಗುಳುಂ ಮಾಡಲಾಗಿದೆ.
ಮುದಿಮಡುಗು ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಯಾಗಿ ಕೆ.ವಿ ನರೇಂದ್ರ ಬಾಬು ಕಳೆದ 11 ವರ್ಷಗಳಿಂದ ಮುದಿಮಡುಗು ಗ್ರಾಮಪಂಚಾಯಿತಿಯಲ್ಲಿಯೇ ಕರ್ತವ್ಯ ನಿರ್ವಹಿಸಿಕೊಂಡು ಬರುತ್ತಿದ್ದಾರೆ, ಪಂಚಾಯಿತಿಯಲ್ಲಿ ಅಭಿವೃದ್ದಿ ಅಧಿಕಾರಿ ನಾಮಕಾವಸ್ತೆಗೆ ಮಾತ್ರ ಇದ್ದರೂ ಪಂಚಾಯಿತಿಯ ಎಲ್ಲಾ ಯೋಜನೆಗಳನ್ನು ನೋಡಿಕೊಳ್ಳುವುದು ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಕಂಪ್ಯೂಟರ್ ಆಪರೇಟರ್ ಸೋಮಶೇಖರ್, ಪಂಚಾಯಿತಿಯಲ್ಲಿ ಎಲ್ಲಾ ರೀತಿಯ ದಾಖಲಾತಿಗಳನ್ನು ಸೋಮಶೇಖರ್ ತಯಾರು ಮಾಡಿದರೆ, ಪಿಡಿಓ ನರೇಂದ್ರ ಬಾಬು ಕೇವಲ ದಾಖಲಾತಿಗಳಿಗೆ ಸಹಿ ಮಾಡುವುದಷ್ಟೇ…ಮುದಿಮಡುಗು ಗ್ರಾಮ ಪಂಚಾಯಿತಿಯಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಚಿಂತಮಾನಿಪಲ್ಲಿ ಗ್ರಾಮದ ಆನಂದ್ ಧ್ವನಿಯೆತ್ತಿ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ದೂರು ನೀಡಿದ್ದರಿಂದ ರೊಚ್ಚಿಗೆದ್ದ ಕಂಪ್ಯೂಟರ್ ಆಪರೇಟರ್ ಸೋಮಶೇಖರ್ ಗುಂಪು ಕಟ್ಟಿಕೊಂಡು ಬಂದು ದೂರು ಕೊಟ್ಟ ಆನಂದ್ ಮೇಲೆ ಥಳಿಸಿ ಗಂಭೀರ ಗಾಯಗೊಳಿಸಿ ಬೆದರಿಕೆ ಹಾಕಿದ್ದಾರೆ.
ಇನ್ನು ಅಕ್ರಮಗಳ ಬಗ್ಗೆ ಲೋಕಾಯುಕ್ತದಲ್ಲಿ ಎಫ್ ಐ ಆರ್ ದಾಖಲಾಗಿದ್ದು ಮುದಿಮಡುಗು ಗ್ರಾಮ ಪಂಚಾಯಿತಿಯಲ್ಲಿ ಕೋಟ್ಯಾಂತರ ರೂ.ಗಳ ಭ್ರಷ್ಟಾಚಾರದ ದಾಖಲೆಗಳ ಸಮೇತ ಮೇಲಾಧಿಕಾರಿಗಳಿಗೆ ದೂರು ನೀಡಿದ್ದರೂ ಲೋಕಾಯುಕ್ತದಲ್ಲಿ ಎಫ್ ಐ ಆರ್ ದಾಖಲಾಗಿದ್ದರೂ ಮೇಲಾಧಿಕಾರಿಗಳು ಒಬ್ಬ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ವ್ಯಕ್ತಿಯ ಮೇಲೆ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಯಕ್ಷ ಪ್ರಶ್ನೆಯಾಗಿದೆ.