ಕಲಬುರಗಿ/ಕಮಲಾಪುರ: ಮಕ್ಕಳು ಸರ್ವರ ಜೀವನದಲ್ಲಿ ತರುವ ಸಂತೋಷ, ನಗು, ಶುದ್ಧ ಚೈತನ್ಯವನ್ನು ತರುವಂತಹ ಶಕ್ತಿ ಹೊಂದಿದ್ದಾರೆ. ಅದಕ್ಕಾಗಿಯೇ ಮಕ್ಕಳು ದೇವರ ಅತ್ಯಂತ ಸುಂದರವಾದ ಸೃಷ್ಟಿ ಎಂದು ಮಕ್ಕಳ ಚಿಂತಕರು, ಬರಹಗಾರರಾದ ಸಂಗಮೇಶ ಎನ್ ಜವಾದಿ ಹೇಳಿದರು.
ತಾಲೂಕಿನ ನಾವದಗಿ ಕ್ರಾಸ್ ಹತ್ತಿರದ ದೇಶಿಕೇಂದ್ರ ವಸತಿ ಶಾಲೆ ಸಾಂಸ್ಕೃತಿಕ ಲೋಕ ಆವರಣದಲ್ಲಿ
ಹಮ್ಮಿಕೊಂಡ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳು ದೇವರಿಗೆ ಸಮಾನ, ಮಕ್ಕಳ ಮುಗ್ಧತೆ, ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನೆಹರೂರವರಿಗೆ ಮಕ್ಕಳೆಂದರೆ ಎಲ್ಲಿಲ್ಲದ ಪ್ರೀತಿ. ಮಕ್ಕಳೇ ದೇಶದ ಭವಿಷ್ಯ ಎನ್ನುತ್ತಿದ್ದರು. ಅದಕ್ಕಾಗಿಯೇ ಮಕ್ಕಳ ಮೇಲಿನ ಪ್ರೀತಿಗಾಗಿ ಈ ದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಮಕ್ಕಳ ಹಕ್ಕು, ಮಕ್ಕಳ ರಕ್ಷಣೆ ವಿಚಾರಗಳಲ್ಲಿ ಜಾಗೃತಿ ಮೂಡಿಸುವುದು. ಸುರಕ್ಷಿತ ಮತ್ತು ಆರೋಗ್ಯಕರ ಬಾಲ್ಯವನ್ನು ಉತ್ತೇಜಿಸುವುದು,, ಮಕ್ಕಳ ಹಕ್ಕುಗಳನ್ನು ಗುರುತಿಸಲು ಮತ್ತು ಎತ್ತಿಹಿಡಿಯಲು ವೇದಿಕೆಯಾಗಿ ಕಾರ್ಯನಿರ್ವಹಿಸಬೇಕು. ಶಿಕ್ಷಣ, ಪೋಷಣೆ ಮತ್ತು ಸುರಕ್ಷಿತ ಮನೆಯ ವಾತಾವರಣದೊಂದಿಗೆ ಮಕ್ಕಳ ಯೋಗಕ್ಷೇಮಕ್ಕೆ ಒತ್ತು ನೀಡಬೇಕು. ಈ ದಿನವು ವಿದ್ಯಾರ್ಥಿಗಳು ಭವಿಷ್ಯದ ಕುರಿತು ಉತ್ತಮ ಕನಸು ಕಾಣುವಂತಹ ದಿನವಾಗಿ ರೂಪಿಸಬೇಕು. ಇಂದು ನಾವು ನಮ್ಮ ಮಕ್ಕಳಿಗೆ ನೀಡುವ ಪ್ರೀತಿ ಮತ್ತು ಕಾಳಜಿಯು ನಾಳೆ ನಮ್ಮ ದೇಶದ ಭವಿಷ್ಯವಾಗಿ ಅರಳುತ್ತದೆ. ಈ ದಿನ ನಾವು ಮಕ್ಕಳ ಕಲ್ಯಾಣದ ಬಗ್ಗೆ ಕಾಳಜಿ ವಹಿಸಿ ಬದ್ಧತೆಯಿಂದ ಚಾಚಾ ನೆಹರೂ ಅವರ ಕನಸಿನಂತೆ ಮಕ್ಕಳು ಉತ್ತಮ ಗುಣಮಟ್ಟದ ಜೀವನ ನಡೆಸಲು ಅನುವಾಗುವಂತೆ ಕೆಲಸ ಮಾಡಬೇಕು. ಮಕ್ಕಳು ಯಾವಾಗಲೂ ಇತರರ ಬಗೆ ಗೌರವ ಭಾವನೆ, ಸಹನೆ, ತಾಳ್ಮೆ, ಅಕ್ಕರೆಯ ಭಾವನೆಗಳನ್ನು ಹೊಂದಬೇಕು. ಮೊಬೈಲ್ ನಿಂದ ದೂರ ಇರುವಂತೆ ಮಕ್ಕಳಿಗೆ ಕರೆ ನೀಡಿದರು.
ಅತಿಥಿಗಳಾಗಿ ಆಗಮಿಸಿದ ಸಾಹಿತಿ ಸಂಗಮೇಶ ಮುರ್ಕೇ ಮಾತನಾಡಿ ಇಂದಿನ ಮಕ್ಕಳೇ ಮುಂದಿನ ಭವಿಷ್ಯದ ನಾಯಕರು, ಮಕ್ಕಳು ಯಾವಾಗಲೂ ದೇಶಭಕ್ತಿ ಹಾಗೂ ಕಿರಿಯ, ಹಿರಿಯರ ಬಗೆ ಗೌರವ ಹೊಂದಿರಬೇಕು.
ಮಕ್ಕಳು ಸಮಾಜಕ್ಕಾಗಿ ಏನಾದರೂ ಒಳ್ಳೆಯ ಕೆಲಸ ಮಾಡಬೇಕು.ಮಕ್ಕಳೇ ಈ ದೇಶದ ಭವಿಷ್ಯ ಎಂದು ಜವಾಹರಲಾಲ್ ನೆಹರು ನಂಬಿದ್ದರು. ಅಂತೆಯೇ ಮಕ್ಕಳು ಉತ್ತಮ ಶಿಕ್ಷಣ ಪಡೆದು ಭವ್ಯ ಭಾರತದ ಅಭಿವೃದ್ಧಿಗಾಗಿ ದುಡಿಯಬೇಕು. ಜವಾಹರ್ ಲಾಲ್ ನೆಹರೂ ಅವರು ಪ್ರಧಾನಿಯಾಗಿದ್ದಾಗ ಮಕ್ಕಳ ಶಿಕ್ಷಣ ಮತ್ತು ಆರೋಗ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.
ಮಕ್ಕಳ ದಿನವು ಆಟ, ನಗು ಮತ್ತು ಬಾಲ್ಯದ ಸರಳ ಸಂತೋಷಗಳಿಂದ ತುಂಬಿರಲಿ ಎಂದು ಶುಭ ಹಾರೈಸುತ್ತೇನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಸಂಸ್ಥಾಪಕರಾದ ಡಾ ರಾಜೇಂದ್ರ ಯರನಾಳೆ ಮಾತನಾಡಿ ನವೆಂಬರ್ 14 ಭಾರತದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರು ಹುಟ್ಟಿದ ದಿನ. ಅವರ ಜನ್ಮವಾರ್ಷಿಕೋತ್ಸವವನ್ನು ಮಕ್ಕಳ ದಿನ ಎಂದು ಆಚರಿಸಲಾಗುತ್ತದೆ. ನೆಹರೂ ಮಕ್ಕಳ ಶಿಕ್ಷಣ ಮತ್ತು ಹಕ್ಕುಗಳ ಪ್ರತಿಪಾದಕರಾಗಿದ್ದರು. ಮಕ್ಕಳನ್ನು ರಾಷ್ಟ್ರದ ನಿಜವಾದ ಶಕ್ತಿ ಮತ್ತು ಸಮಾಜದ ಅಡಿಪಾಯ ಎನ್ನುತ್ತಿದ್ದರು. ಜವಾಹರ್ ಲಾಲ್ ನೆಹರೂ ಮಕ್ಕಳನ್ನು ತುಂಬಾ ಇಷ್ಟಪಡುತ್ತಿದ್ದರು. ಹೀಗಾಗಿ ಅವರ ಹುಟ್ಟುಹಬ್ಬದ ದಿನವೇ ಮಕ್ಕಳ ದಿನಾಚರಣೆಯನ್ನು ಆಚರಿಸುತ್ತಾ ಬರಲಾಗುತ್ತಿದೆ.
ಇಂದು ನಾಡಿನ ಪ್ರಜೆಗಳ ಶಿಕ್ಷಣಕ್ಕೆ ಸಾಕಷ್ಟು ಸೌಲಭ್ಯಗಳನ್ನು ನೀಡಿ ಉಚಿತ ಶಿಕ್ಷಣ ನೀಡುತ್ತಿದೆ. ಅದನ್ನು ಸದುಪಯೋಗ ಪಡಿಸಿಕೊಂಡು ಉತ್ತಮವಾಗಿ ಓದಿ, ನಮ್ಮ ಏಳಿಗೆಗೆ ಶ್ರಮಿಸಿದ ನಮ್ಮ ತಂದೆ ತಾಯಿಯನ್ನು ಮುಂದೆ ಚೆನ್ನಾಗಿ ನೋಡಿಕೊಳ್ಳುವುದರ ಜತೆಗೆ, ದೇಶಕ್ಕೂ ಒಳ್ಳೆಯ ಹೆಸರು ಬರುವ ಹಾಗೆ ಮಕ್ಕಳು ಏನಾದರೂ ಸಾಧನೆ ಮಾಡಬೇಕು. ಅಂದಾಗಲೇ ಹುಟ್ಟಿದಕ್ಕೂ ಸಾರ್ಥಕವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಸ್ಥರಾದ ಶ್ರೀಮತಿ ವಾಣಿಶ್ರೀ ಯರನಾಳೆ ಸೇರಿದಂತೆ ಶಾಲೆಯ
ಎಲ್ಲಾ ಶಿಕ್ಷಕರು – ಶಿಕ್ಷಕಿಯರು, ಮಕ್ಕಳು ಹಾಜರಿದ್ದರು.
ಮಂಗಲಾ ಗೋಗಿ ಸ್ವಾಗತಿಸಿದರು.
ಭುವನೇಶ್ವರಿ ತಟ್ಟಿ ನಿರೂಪಿಸಿ, ವಂದಿಸಿದರು.
ಇದೆ ಸಮಯದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.