ಶಿವಮೊಗ್ಗ: ಕನ್ನಡ ಭಾಷೆ ಸಂವೇದನಾಶೀಲ ಭಾಷೆಯಾಗಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಅಣ್ಣಪ್ಪ ಮಳೀಮಠ್ ಹೇಳಿದರು.
ನಗರದ ಬೆಕ್ಕಿನ ಕಲ್ಮಠದಲ್ಲಿ ಏರ್ಪಡಿಸಲಾಗಿದ್ದ ೫೪೨ನೇ ಮಾಸಿಕ ಶಿವಾನುಭವಗೋಷ್ಟಿ ಕಾರ್ಯಕ್ರಮದಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿ ವಿಷಯ ಕುರಿತು ಉಪನ್ಯಾಸ ನೀಡಿದ ಅವರ, ಎಲ್ಲಾ ಧರ್ಮವನ್ನು ಸಹಿಸಿಕೊಳ್ಳುವ ಸಹಿಷ್ಣುತೆಯುಳ್ಳ ಹೃದಯವಂತಿಕೆಯ ಭಾಷೆ ಕನ್ನಡವಾಗಿದೆ ಎಂದು ಅಭಿಪ್ರಾಯಪಟ್ಟರು.
ಕನ್ನಡ ಭಾಷೆ ಅಳಿಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಏಕೆಂದರೆ ಈ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ ಅಲ್ಲದೆ ಭವಿಷ್ಯದಲ್ಲಿಯೂ ಕೂಡ ಈ ಭಾಷೆ ಮತ್ತಷ್ಟು ಇತಿಹಾಸ ಸೃಷ್ಟಿಸಲಿದೆ ಎಂದು ಹೇಳಿದರು.
ಪ್ರತಿವರ್ಷ ಕನ್ನಡ ಭಾಷೆಯಲ್ಲಿ ಅತಿ ಹೆಚ್ಚು ಪುಸ್ತಕಗಳು ಪ್ರಕಟಗೊಳ್ಳುತ್ತದೆ ಇಷ್ಟೊಂದು ಸಂಖ್ಯೆಯ ಪುಸ್ತಕಗಳು ಇನ್ಯಾವ ಭಾಷೆಯಲ್ಲಿಯೂ ಪ್ರಕಟಗೊಳ್ಳುತ್ತಿಲ್ಲ ಇದು ಕನ್ನಡ ಭಾಷೆಗೆ ಇರುವ ಶಕ್ತಿಯನ್ನು ತೋರಿಸುತ್ತದೆ ಎಂದ ಅವರು, ಪ್ರಸ್ತುತ ದಿನಮಾನಗಳಲ್ಲಿ ಕನ್ನಡ ಮುಗಿದೆ ಹೋಯಿತು ಕನ್ನಡ ಇಲ್ಲವಾಗುತ್ತದೆ ಎಂದು ಹಲವರು ಮಾತನಾಡುತ್ತಾರೆ ಆದರೆ ಇಂದಿಗೂ ಸಹ ಕನ್ನಡ ಅಳಿಯುವುದಿಲ್ಲ ಎಂದು ಹೇಳಿದರು.
ಕನ್ನಡವನ್ನ ಕಟ್ಟುವ ಕೆಲಸ ಮನೆಯಿಂದಲೇ ಆರಂಭವಾಗಬೇಕು ನಾವು ಕಲಿಯುತ್ತಿದ್ದ ಪ್ರಾಥಮಿಕ ಹಂತದಲ್ಲೇ ಕನ್ನಡದ ಭದ್ರ ಬುನಾದಿ ಸಿಗುತ್ತಿತ್ತು ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬೆಕ್ಕಿನ ಕಲ್ಮಠದ ಡಾ. ಮಲ್ಲಿಕಾರ್ಜುನ ಮರುಘರಾಜೇಂದ್ರ ಸ್ವಾಮೀಜಿ ವಹಿಸಿದ್ದರು. ಸಮಾರಂಭದಲ್ಲಿ ಮೊಹರೇ ಹಣಮಂತ ರಾಯ ಪ್ರಶಸ್ತಿ ಪುರಸ್ಕೃತ ಹಾಗೂ ಕ್ರಾಂತಿದೀಪ ಪತ್ರಿಕೆಯ ಸಂಪಾದಕ ಎನ್ ಮಂಜುನಾಥ್‌ರವರನ್ನು ಸತ್ಕರಿಸಲಾಯಿತು.
ವರದಿ :ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ