ಹಳ್ಳ ಹಿಡಿದ ಆಲೋಚನೆಗಳು
ಗ್ರಹಣ ಹಿಡಿದ ಸಂಬಂಧಗಳು
ಬೆಸೆಯದ ಭಾವನೆಗಳು
ಮಾರೆಯದ ಮೌಲ್ಯಗಳು
ಹೆಚ್ಚಿದ ಕಂದಕಗಳು
ಇವಾವು ಬದಲಾಗಲಿಲ್ಲ
ಬದಲಾಗಿದ್ದು ಮಾತ್ರ
ಧೂಳು ಬಿದ್ದ ಕ್ಯಾಲೆಂಡರ್.
ಮಾನವೀಯತೆ ಮಾಯವಾಯಿತು
ಹೆತ್ತವರು ಬೇಡವಾದರು
ಆಶ್ರಮಗಳು ನಕ್ಕವು
ಹಣದ ಮೋಹ ಗೆದ್ದಿತ್ತು
ಬಂಧಗಳು ಬಂಧನವಾದವು
ಆದರ್ಶಗಳು ಪುಸ್ತಕ ಹೊಕ್ಕವು
ಇವಾವು ಅರಿವಿಗೆ ಸಿಗಲಿಲ್ಲ
ಬದಲಾಗಿದ್ದು ಮಾತ್ರ
ಧೂಳು ಬಿದ್ದ ಕ್ಯಾಲೆಂಡರ್.
ಸಮಾಜದ ಕಗ್ಗೊಲೆ
ಧರ್ಮಗಳ ಬಡಿದಾಟ
ಸದ್ದಡಗಿದ ಚಳುವಳಿಗಳು
ಭ್ರಷ್ಟಾಚಾರದ ಬುಗ್ಗೆ
ಅತಂತ್ರ ಗಣತಂತ್ರ
ಸ್ತ್ರೀ ಕುಲಕ್ಕೆ ಅವಮಾನ
ಶೋಷಣೆಯೇ ಹೆಗ್ಗುರುತು
ಇದಾವುದು ಬದಲಾಗಲಿಲ್ಲ
ಬದಲಾಗಿದ್ದು ಮಾತ್ರ
ಧೂಳು ಬಿದ್ದ ಕ್ಯಾಲೆಂಡರ್.
ಕಾಡು ಉಳಿಸಲಿಲ್ಲ
ಮೋಡ ಕಟ್ಟಲಿಲ್ಲ
ಮಳೆ ಬರಲಿಲ್ಲ
ಯಂತ್ರ ಓಡಿತು
ಕೆಲಸ ಉಳಿಯಲಿಲ್ಲ
ರೋಬೋಟ್ ಗಲ್ಲಿ ಹೊಕ್ಕಿತು
ಮೋಹದ ಬಲೆ ನುಗ್ಗಿತು
ಯಾವುದು ಬದಲಾಗಲಿಲ್ಲ
ಬದಲಾಗಿದ್ದು ಮಾತ್ರ
ಧೂಳು ಬಿದ್ದ ಕ್ಯಾಲೆಂಡರ್
ಸಂಸ್ಕೃತಿ ಅನಾಥವಾಯ್ತು
ಆಚಾರಗಳು ದೂರ ನಿಂತವು
ಗೌರವ ನೆಲ ಕಚ್ಚಿತು
ಅಹಂ ನೆತ್ತಿಗೇರಿತು
ಸನಾತನ ಅಳಿಯಿತು
ಜಾತಿ ಹುಚ್ಚು ಹೆಚ್ಚಿತು
ಬಡವ ಬೆಂದನು
ಶ್ರೀಮಂತ ಮೆರೆದನು
ಇದಾವುದು ಬದಲಾಗಲಿಲ್ಲ
ಬದಲಾಗಿದ್ದು ಮಾತ್ರ
ಧೂಳು ಬಿದ್ದ ಕ್ಯಾಲೆಂಡರ್.
- ಚೌಡ್ಲಾಪುರ ಸೂರಿ.
