ಕಲಬುರಗಿ/ ಚಿತ್ತಾಪುರ: ಬಿಜೆಪಿ ಮುಖಂಡರ ಲಾರಿ ನಂಬರ ಕೆ.ಎ-32, ಎಬಿ-2200 ವಾಹನವನ್ನು ಓರಿಯಂಟ್ ಸಿಮೆಂಟ್ ಕಂಪನಿಯವರು ಲೋಡಿಂಗ್ ಮಾಡದೆ ವಿನಾ ಕಾರಣ ಕಿರುಕುಳ ನೀಡುತ್ತಿರುವ ಅಧಿಕಾರಿಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಚಿತ್ತಾಪುರ ಬಿಜೆಪಿ ಮಂಡಲದ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ಅವರ ನೇತೃತ್ವದಲ್ಲಿ ಮುಖಂಡರು ಕಂಪೆನಿ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.
ಕಂಪೆನಿ ಗೇಟ್ ಮುಂದೆ ಹೋರಾಟ ಮಾಡಲು ಹೊರಟಿದ್ದ ಬಿಜೆಪಿ ಮುಖಂಡರನ್ನು ಪೆಟ್ರೋಲ್ ಬಂಕ್ ಹತ್ತಿರ ಪೊಲೀಸ್ ಅಧಿಕಾರಿಗಳು ತಡೆ ಹಿಡಿದರು. ಈ ಮಧ್ಯೆ ಮುಖಂಡರ ಹಾಗೂ ಪೊಲೀಸರ ನಡುವೆ ಕೆಲ ಹೊತ್ತು ಮಾತಿನ ಚಕಮಕಿ ನಡೆಯಿತು. ಶಹಾಬಾದ ಡಿವೈಎಸ್ಪಿ ಶಂಕರಗೌಡ ಪಾಟೀಲ ಆಗಮಿಸಿ ಸಿಪಿಐ ಕಚೇರಿಯ ನಕಲಿ ಪತ್ರದ ಕುರಿತು ಒಂದು ವಾರ ಕಾಲಾವಕಾಶ ನೀಡಿ ತನಿಖೆ ಕೈಗೊಳ್ಳಲಾಗುವುದು ಎಂದು ಹೋರಾಟಗಾರರ ಮನವೊಲಿಸಿದರು, ನಂತರ ಮುಖಂಡರು ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರಿಗೆ ಮನ ಪತ್ರ ಸಲ್ಲಿಸಿದರು.
ಬಿಜೆಪಿ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೋರ್ ಮಾತನಾಡಿ ನಮ್ಮ ಪಕ್ಷದ ಮುಖಂಡರ ಲಾರಿ ವಾಹನ ಸಂಖ್ಯೆ ಕೆಎ-32, ಎಬಿ-2200 ವಾಹನದ ಲೋಡಿಂಗ್ ಅನ್ ಲೋಡಿಂಗ್ ಮಾಡದೆ ವಿನಾಕಾರಣ ಸದರಿ ಮುಖಂಡನ ವಾಹನವನ್ನು ಕಂಪನಿಯಲ್ಲಿ ನಡೆಯದಂತೆ ತಕರಾರು ಮಾಡುತ್ತಿದ್ದಾರೆ. ಆದರೆ ಇವರ ವಾಹನ ಬಿಟ್ಟು ಇತರೆ ವಾಹನಗಳು ಕಂಪನಿಯಲ್ಲಿ ನಡೆಯುತ್ತಿವೆ. ಸದರಿ ವಿಷಯದಲ್ಲಿ ಪೊಲೀಸರ ಯಾವುದೇ ಅಧಿಕಾರ ಇಲ್ಲದಿದ್ದರೂ ಪೊಲೀಸ್ ಇಲಾಖೆಯ ಪತ್ರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸದರಿ ಲಾರಿಗಳನ್ನು ಬ್ಲಾಕ್ ಮಾಡುವ ಅಧಿಕಾರ ಆರ್.ಟಿ.ಓ ಇಲಾಖೆಯವರಿಗೆ ಇರುತ್ತದೆ. ಆದರೆ ಉದ್ದೇಶಪೂರ್ವಕವಾಗಿ ಈ ರೀತಿ ಕಂಪನಿಯ ಅಧಿಕಾರಿಗಳು ಕಿರುಕುಳ ನೀಡುತ್ತಿರುವ ಕಾರಣ ಸದರಿ ಸಂಬಂಧಪಟ್ಟ ಅಧಿಕಾರಿಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬಿಜೆಪಿ ನಗರಾಧ್ಯಕ್ಷ ಆನಂದ ಪಾಟೀಲ ನರಿಬೋಳ, ಮುಖಂಡರಾದ ಅಶ್ವಥ್ ರಾಠೋಡ, ದೀಪಕ್ ಹೊಸ್ಸುರಕರ್, ಮಹ್ಮದ್ ಯೂನೋಸ್, ಶ್ಯಾಮ್ ಮೇಧಾ, ಪಂಕಜ್ ಗೌಡ್, ಪ್ರಭು ಗಂಗಾಣಿ, ಶಾಂತಕುಮಾರ್ ಮಳಖೇಡ, ಮಲ್ಲಿಕಾರ್ಜುನ ಅಲ್ಲೂರಕರ್, ಶಿವರಾಮ್ ಚವ್ಹಾಣ, ಗೂಳಿ ಡಿಗ್ಗಿ, ಸಂಜು ರಾಠೋಡ, ವಿನೋದ ಚವ್ಹಾಣ, ರಾಜು ರಾಠೋಡ, ಸಂಗು ಯರಗಲ್ ಸೇರಿದಂತೆ ಇತರರು ಇದ್ದರು.
ವರದಿ ಮೊಹಮ್ಮದ್ ಅಲಿ ಚಿತ್ತಾಪುರ
