ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಸಾಲಗುಂದ ಗ್ರಾಮದ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದಲ್ಲಿ ಕಾನೂನು ಬಾಹಿರವಾಗಿ ಮೂರು ಜನ ಸಿಬ್ಬಂದಿಗಳ ನೇಮಕ ಮಾಡಿಕೊಂಡ ಸಿಇಓ ಅವರನ್ನು ಅಮಾನತು ಮಾಡುವಂತೆ ಇಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ವತಿಯಿಂದ ಪತ್ರಿಕಾಗೋಷ್ಠಿ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ರೈತ ಘಟಕದ ಪ್ರಧಾನ ಕಾರ್ಯದರ್ಶಿ ನಿರುಪಾದಿ ಕೆ ಗೋಮರ್ಸಿ ಯವರು ಮೂರು ಜನ ಸಿಬ್ಬಂದಿಗಳ ಅಕ್ರಮ ನೇಮಕಾತಿಯ ಕುರಿತು ತಾಲೂಕಿನ ಸಹಕಾರಿ ಸಂಘಗಳ ಸಹಾಯಕ ನಿಬಂಧಕರಿಗೆ ದೂರು ಸಲ್ಲಿಸಿದರು ಈಗಾಗಲೇ ಕೆಲಸ ಮಾಡುತ್ತಿರುವ ಮೂರು ಜನ ಸಿಬ್ಬಂದಿಗಳನ್ನು ಕೈ ಬಿಟ್ಟು ತರಾತುರಿಯಲ್ಲಿ ಯಾವುದೇ ನೇಮಕಾತಿ ಪ್ರಕಟಣೆ ಹೊರಡಿಸದೆ ತಮ್ಮ ಆಪ್ತರನ್ನು ಮಾತ್ರ ಸಂಘದಲ್ಲಿ ಕಾರ್ಯನಿರ್ವಹಿಸಲು ನೇಮಕಾತಿ ಮಾಡಿಕೊಂಡಿರುತ್ತಾರೆ. ಈ ಅಕ್ರಮ ನೇಮಕಾತಿಯಲ್ಲಿ ಆಡಳಿತ ಮಂಡಳಿಯ ಮತ್ತು ಸಂಘದ ಸಿ.ಇ.ಓ ಕೆ ವಿರುಪಾಕ್ಷಪ್ಪ ಕೆಂಗಲ್ ಅವರು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿದ್ದು ಈ ವಿಷಯದ ಕುರಿತು ಸಹಕಾರ ಸಂಘಗಳ ಸಹಾಯಕ ನಿಬಂಧಕರು ಸಿಂಧನೂರು ಉಪ ವಿಭಾಗ ಇವರ ಕಾರ್ಯಾಲಯಕ್ಕೆ ಮನವಿ ಸಲ್ಲಿಸಲಾಗಿದ್ದು ಈ ಮನವಿಯನ್ನು ಪರಿಶೀಲಿಸಿದ ಸಹಾಯಕ ನಿಬಂಧಕರು ಮುಖ್ಯ ಕಾರ್ಯ ನಿರ್ವಾಹಕರಿಗೆ ನೇಮಕಾತಿ ತಡೆ ಹಿಡಿಯುವಂತೆ ಆದೇಶ ಹೊರಡಿಸಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ, ಈ ಕುರಿತಾಗಿ ಮಾನ್ಯ ಸಹಕಾರ ಸಂಘಗಳ ಜಿಲ್ಲಾ ಉಪನಿಬಂಧಕರು ರಾಯಚೂರು ಹಾಗೂ ಜಿಲ್ಲಾಧಿಕಾರಿಗಳು ರಾಯಚೂರು ಇವರಿಗೂ ಕೆ ಆರ್‌ಎಸ್ ಪಕ್ಷದ ವತಿಯಿಂದ ದೂರು ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಮೇಲಿನ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ರಾಜಕೀಯ ಒತ್ತಡಕ್ಕೆ ಮಣಿದು ಎಲ್ಲಾ ಹಂತದ ಅಧಿಕಾರಿಗಳು ಈ ಅಕ್ರಮ ನೇಮಕಾತಿಯಲ್ಲಿ ಪಾಲ್ಗೊಂಡಿದ್ದಾರೆ ಎಂಬುದು ಅನುಮಾನಕ್ಕೆ ಗುರಿ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಘದಲ್ಲಿ ಕಾರ್ಯ ನಿರ್ವಹಿಸಲು ಸಿಬ್ಬಂದಿಗಳ ನೇಮಕಾತಿಗೆ ಸಂಬಂಧಿಸಿದಂತೆ ಸರ್ಕಾರದ ಯಾವುದೇ ನೀತಿ-ನಿಯಮಗಳನ್ನು ಮತ್ತು ಕಾಯ್ದೆ-ಕಾನೂನುಗಳನ್ನು ಪಾಲನೆ ಮಾಡದೆ ತರಾತುರಿಯಲ್ಲಿ ಕಾನೂನು ಬಾಹಿರವಾಗಿ ಸಿಬ್ಬಂದಿಗಳನ್ನು ನೇಮಕ ಮಾಡಿಕೊಂಡಿರುತ್ತಾರೆ. ನೇಮಕಾತಿಗೆ ಸಂಬಂಧಿಸಿದಂತ ವಿದ್ಯಾರ್ಹತೆ ಇಲ್ಲದ, ಕಾರ್ಯದರ್ಶಿಯ ಸಂಬಂಧಿಗಳನ್ನು ನೇಮಿಸಿಕೊಂಡಿದ್ದು ಯಾವುದೇ ಪತ್ರಿಕಾ ಪ್ರಕಟಣೆ ಮಾಡದೇ, ಪರೀಕ್ಷೆಗಳನ್ನು ಎದುರಿಸದೆ ನಿಯಮಗಳನ್ನು ಗಾಳಿಗೆ ತೂರಿ ತಾತ್ಕಾಲಿಕವಾಗಿ ಸಿಬ್ಬಂದಿಗಳ ನೇಮಕವಾಗಿರೋದು ವಿಪರ್ಯಾಸ. ಈ ಅಕ್ರಮ ನೇಮಕಾತಿಗೆ ಸಂಬಂಧಪಟ್ಟಂತೆ ರಾಜಕೀಯ ಮತ್ತು ಅಧಿಕಾರಿಗಳ ವ್ಯಕ್ತಿಗಳ ಒತ್ತಡಕ್ಕೆ ಮಣಿದಿರುವ ಆಡಳಿತ ಮಂಡಳಿಯವರು ಸಾಲಗುಂದ ಗ್ರಾಮದ ಅರ್ಹ ವಿದ್ಯಾವಂತ ಯುವಕರಿಗೆ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇದೇ ಸಂದರ್ಭದಲ್ಲಿ ಸಾಲುಗುಂದ ವಿದ್ಯಾವಂತರಾದ ಈ ಸಿಬ್ಬಂದಿಗಳ ಅಕ್ರಮ ನೇಮಕಕ್ಕೆ ಹಲವಾರು ದಿನಗಳಿಂದ ಹೋರಾಟ ನಡೆಸಿದ ರಾಜಶೇಖರ ಗುಡಿ ಮಾತನಾಡಿ ಅಕ್ರಮ ನೇಮಕಾತಿ ಪ್ರಕ್ರಿಯೆಯನ್ನು ತಡೆಹಿಡಿದು ಮರು ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು ಅರ್ಹ ವಿದ್ಯಾವಂತರಿಗೆ ಈ ಸಿಬ್ಬಂದಿಯ ಹುದ್ದೆ ಸಿಗಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಶರಣಪ್ಪ ಬೇರಿಗಿ, ಅಜಿದ್ ಕುನ್ನಟಗಿ, ಮಾರಪ್ಪ ಬೇರಿಗೆ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.
- ಕರುನಾಡ ಕಂದ
