ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಯರಝರಿ ಗ್ರಾ.ಪಂ ವ್ಯಾಪ್ತಿಯ ಮುದೂರ ಗ್ರಾಮದ ಸಮೀಪದ ಕೃಷ್ಣಾ ನದಿಯಲ್ಲಿ ಕಳೆದ ಒಂದು ವಾರದಿಂದ ಅಕ್ರಮವಾಗಿ ಮಣ್ಣು ಸಾಗಣೆ ನಡೆಯುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೇ ಜಾಣ ಮೌನ ವಹಿಸಿರುವುದು ಸುತ್ತಮುತ್ತಲಿನ ಗ್ರಾಮಸ್ಥರ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ.
ಹೌದು.. ಪ್ರತೀ ವರ್ಷ ಬೇಸಿಗೆ ಆರಂಭವಾಗುವ ಮೊದಲಿಗೆ ಕೃಷ್ಣಾ ನದಿಯ ನೀರಿನ ಒಡಲಿಗೆ ಕನ್ನ ಹಾಕುವ ದಂಧೆಕೋರರು, ಇದನ್ನೇ ಬಂಡವಾಳ ಮಾಡಿಕೊಂಡ ಇನ್ನೂ ಕೆಲವು ಆಸಾಮಿಗಳು ಕಳೆದ ಒಂದು ವಾರದಿಂದ ಮುದೂರ ಹಾಗೂ ಕಂದಗನೂರ, ಚಿರ್ಚನಕಲ್ ಗ್ರಾಮದ ಮಧ್ಯೆ ಅಕ್ರಮ ಮಣ್ಣು ಅಗೆದು ಇಟ್ಟಂಗಿ ತಯಾರಿಕೆ ಭಟ್ಟಿಗಳಿಗೆ ಹಾಗೂ ರೈತರಿಗೆ ಒಂದು ಟಿಪ್ಪರ್ ಗೆ ಇಂತಿಷ್ಟು ಹಣ ನಿಗದಿ ಮಾಡಿ ಜೆಸಿಬಿ ಮೂಲಕ ಅಗೆದು ಟಿಪ್ಪರ್ ಗಳ ಮೂಲಕ ಸಾಗಾಟ ಮಾಡಲಾಗುತ್ತಿದೆ.
ಕೃಷ್ಣಾ ನದಿಯಲ್ಲಿ ಮನಸ್ಸಿಗೆ ಬಂದಂತೆ ಆಳೆತ್ತರದ ಗುಂಡಿಗಳನ್ನು ತೆಗೆಯುತ್ತಿದ್ದು, ನದಿಯ ಸ್ವರೂಪವನ್ನು ಹಾಳು ಮಾಡಿದ್ದಾರೆ. ತಮಗೆ ಬೇಕಾದಂತಹ ಮಣ್ಣು ಎಲ್ಲಿ ಸಿಗುತ್ತದೆಯೋ ಅಲ್ಲಿಯೇ 3 ರಿಂದ 10 ಅಡಿ ಮಣ್ಣು ಅಗೆದು ತೆಗೆದುಕೊಂಡು ಹೋಗುತ್ತಿದ್ದಾರೆ. ಇದರಿಂದ ಮುಂಬರುವ ವರ್ಷಗಳಲ್ಲಿ ಅದರಲ್ಲೂ ಮಳೆಗಾಲದಲ್ಲಿ ನದಿಯಲ್ಲಿ ನೀರಿನ ಹರಿವು ಹೆಚ್ಚಾದರೆ ನದಿಪಾತ್ರದ ಗ್ರಾಮಗಳಿಗೆ ತಗ್ಗುಗಳಲ್ಲಿ ನೀರು ಸಂಗ್ರಹಗೊಂಡು ಅಪಾಯವಾಗುವುದರ ಜತೆಗೆ ನದಿ ಹರಿಯುವ ದಿಕ್ಕಿನಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದೆ.
ಯಾವುದೇ ಅನುಮತಿ ಇಲ್ಲದೆ ಅಕ್ರಮವಾಗಿ ಮಣ್ಣು ಸಾಗಾಣಿಕೆ ಚಟುವಟಿಕೆ ನಡೆಯುತ್ತಿದೆ. ಹತ್ತಾರು ಟಿಪ್ಪರುಗಳು ನಡೆಸುವುದರಿಂದ ಇಲ್ಲಿನ ಪ್ರತಿ ನಿತ್ಯ ಓಡಾಟದ ರಸ್ತೆಗಳು ಸಂಪೂರ್ಣ ಹಾಳಾಗಿವೆ ಅದಲ್ಲದೇ ಸುತ್ತಮುತ್ತಲಿನ ಜಮೀನಿನ ರೈತರು ಧೂಳಿನಲ್ಲಿಯೇ ಕೆಲಸ ಮಾಡಬೇಕಾದ ಸಂದರ್ಭ ಬಂದಿದ್ದು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ತಾಲೂಕ ಆಡಳಿತ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಅಕ್ರಮ ಮಣ್ಣು ಸಾಗಾಟದ ಬಗ್ಗೆ ಜನಸಾಮಾನ್ಯರು ಕೇಳಲು ಹೋದರೆ ಹೆದರಿಸುತ್ತಾರೆ ಮತ್ತು ಜನಪ್ರತಿನಿಧಿಗಳು ಈ ಅಕ್ರಮದಲ್ಲಿ ಭಾಗಿಯಾಗುತ್ತಾರೆ ಎಂದು ಹೆಸರು ಹೇಳಲು ಇಚ್ಚಿಸಿದ ವ್ಯಕ್ತಿ ತಮ್ಮ ಅಳಲು ತೋಡಿಕೊಂಡರು. ಮಣ್ಣು ತುಂಬಿದ ಟಿಪ್ಪರ್ ಗಳು ಯಮರಾಯನಂತೆ ರಸ್ತೆಗೆ ಇಳಿಯುತ್ತವೆ. ಇದರಿಂದ ಸಾರ್ವಜನಿಕರ ಓಡಾಟಕ್ಕೂ ತೊಂದರೆಯಾಗಿದೆ. ಮಕ್ಕಳು ರಸ್ತೆಗೆ ಓಡಾಡದಂತಹ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿದೆ.
ಸರ್ಕಾರಿ ನಿಯಮಗಳ ಪ್ರಕಾರ ಯಾವುದೇ ನದಿಯ ದಂಡೆಗುಂಟ ಗಣಿಗಾರಿಕೆ ನಡೆಸುವುದು ನಿಷಿದ್ಧವಾಗಿದೆ. ನದಿ ತೀರವಾಗಲೀ, ನದಿಯ ಮಣ್ಣನ್ನಾಗಲೀ ಅಕ್ರಮವಾಗಿ ಸಾಗಿಸುವುದು ಅಪರಾಧವಾಗಿದೆ.
ಇಂತಹ ಅಕ್ರಮ ಮಣ್ಣು ಗಣಿಗಾರಿಕೆಯಲ್ಲಿ ಭಾಗಿಯಾದ ಟಿಪ್ಪರ್ ಗಳನ್ನು ವಶಪಡಿಸಿಕೊಂಡು ತಕ್ಷಣವೇ ಈ ಆಕ್ರಮ ದಂಧೆಯನ್ನು ನಿಲ್ಲಿಸಿ ನದಿ ರಕ್ಷಿಸಬೇಕು ಇನ್ನೂವರೆಗೂ , ಗ್ರಾಮ ಪಂಚಾಯತ ಅಧಿಕಾರಿಗಳಿಗಾಗಲಿ, ಗ್ರಾಮ ಲೆಕ್ಕಾಧಿಕಾರಿಗಳಾಗಲಿ, ನದಿ ವ್ಯಾಪ್ತಿಯ ಭೂಮಿಯನ್ನು ಯಾತಕ್ಕೂ ಬಳಕೆಯಾಗಬಾರದು ಎಂದು ಸಾರಿ – ಸಾರಿ ಹೇಳುವ ಕೃಷ್ಣಾ ಜಲ ನಿಗಮದ ಅಧಿಕಾರಿಗಳಾಗಲಿ ಯಾವುದೇ ಕ್ರಮ ಕೈಗೋಳ್ಳಲು ಮುಂದಾಗದೇ ಇರುವುದು ದುರಂತವೇ ಸರಿ ಎಂದು ಪ್ರಜ್ಞಾವಂತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬಹುತೇಕವಾಗಿ ಕೃಷ್ಣಾ ನದಿಯ ತಟದಲ್ಲಿರುವ ಗ್ರಾಮಗಳಲ್ಲಿ ಈ ದಂಧೆ ನಡೆಯುತ್ತಿರುವುದು ಬೇಸಿಗೆ ಬಂತೆಂದರೆ ಸಾಮಾನ್ಯವಾಗುತ್ತದೆ, ಇಂತಹ ಅಕ್ರಮವನ್ನು ತಡೆಹಿಡಿಯಲು ಕೆಲವು ಗ್ರಾಮಗಳಲ್ಲಿ ಯುವಕರು ಮುಂದಾದರೆ ರಾಜಕೀಯ ನಾಯಕರ ಹೆಸರು ತಳಕು ಹಾಕಿಕೊಂಡು ನಮಗೆ ರಾಜಕೀಯ ನಾಯಕರು ಗೊತ್ತು ಅವರ ಪರವಾನಿಗೆ ತೆಗೆದುಕೊಂಡು ಮಣ್ಣನ್ನು ಅಗೆಯುತ್ತಿದ್ದೇವೆ ಎಂದು ಬೆದರಿಕೆ ಹಾಕಿದ ಘಟನೆ ಕಂಡು ಬರುತ್ತಿವೆ, ಕೂಡಲೇ ಸಂಭಂದಿಸಿದ ಅಧಿಕಾರಿಗಳು ಅಕ್ರಮಕ್ಕೆ ಮೂಗುದಾರ ಹಾಕಿ ಭೇಷ್ ಅನಿಸಿಕೊಳ್ಳುತ್ತಾರಾ ? ಅಥವಾ ಹತ್ತರಲ್ಲಿ ಹನ್ನೊಂದು ಎನ್ನುವ ರೀತಿಯಲ್ಲಿ ಇಂಗು ತಿಂದ ಮಂಗನಂತೆ ಮೂಕರಾಗುತ್ತಾರಾ ? ಕಾದು ನೋಡಬೇಕು…!
ವರದಿ: ಉಸ್ಮಾನ ಬಾಗವಾನ (ಬಳಗಾನೂರ)
