12ನೇ ಶತಮಾನದಲ್ಲಿ ಬಸವಣ್ಣನವರು ಸಾರಿದ ಕಾಯಕವೇ ಕೈಲಾಸ ಎಂಬ ಮಾತು ಇಂದಿಗೂ ಜನರ ಮನದಲ್ಲಿ ಹಸಿರಾಗಿರುವ ನುಡಿಮುತ್ತಾಗಿದೆ. ಮಾಡುವ ಕೆಲಸ ಚಿಕ್ಕದಾದರೂ ಸರಿಯೇ ದೊಡ್ಡದಾದರೂ ಸರಿ ಅದರಲ್ಲಿ ಪ್ರಾಮಾಣಿಕ ಪ್ರಯತ್ನ ಬೇಕು, ಮಾಡುವ ಕೆಲಸದಲ್ಲಿ ಕೈಲಾಸವನ್ನು ಕಾಣಬೇಕು ಎಂದು ಬಸವಣ್ಣನವರ ವಚನಸಾರವಾಗಿದೆ. ಕುಳಿತು ಉಂಡರೆ ಕುಡಿಕೆ ಹೊನ್ನು ಸಾಲದು, ಆಳಾಗಿ ದುಡಿ ಅರಸನಾಗಿ ಉಣ್ಣು ಎಂಬ ಕನ್ನಡ ಗಾದೆಗಳಲ್ಲಿಯ ಕಾಯಕದ ಮಹತ್ವವನ್ನು ತಿಳಿಸಲಾಗಿದೆ. ಆದರೆ ಪ್ರಸ್ತುತ ಜಗತ್ತಿನಲ್ಲಿ ಒಂದು ಕೆಲಸ ಮಾಡುವ ಮೊದಲೇ ಅದರಿಂದ ತಮಗಾಗುವ ಪ್ರಯೋಜನೆ ಏನು ಎಂಬ ಮನೋಭಾವ ಇರುವ ವ್ಯಕ್ತಿಗಳು ಅವರು ಯಾವ ಕೆಲಸವನ್ನು ನಿಷ್ಠೆಯಿಂದ ಮಾಡಲಾರರು. ಕಾರ್ಯವನ್ನು ಮಾಡುವುದು ನಮ್ಮ ಕರ್ತವ್ಯ ಫಲಾನುಫಲ ಅವನದು ಎಂದು ದುಡಿಯುವವರನ್ನು ಕಾಣುವುದೇ ಅಪರೂಪ. ನಾವು ಮಾಡುವ ಕೆಲಸದಿಂದ ಸಮಾಜದಲ್ಲಿ ಒಳ್ಳೆಯ ಹೆಸರಿನೊಂದಿಗೆ ನಾಲ್ಕಾರು ಜನಕ್ಕೆ ಒಳ್ಳೆಯದಾಗುವ ರೀತಿಯಲ್ಲಿ ನಡೆದುಕೊಂಡು ಸ್ವಾವಲಂಬಿ ಜೀವನವನ್ನು ನಡೆಸಿದಾಗ ಸತ್ಯವಾಗಿಯೂ ಕಾಯಕದಲ್ಲಿ ದೇವರನ್ನು ಕಾಣಬಹುದು. ಪ್ರತಿಯೊಬ್ಬರೂ ಕಾಯಕದ ಈ ಮಹತ್ವವನ್ನು ಅರಿತಾಗ ಕುಟುಂಬ, ಊರು, ನಾಡು, ಅವರಿದ್ ಅಭಿವೃದ್ಧಿ ಹೊಂದಲು ಸಾಧ್ಯ. ನಾನು ನನ್ನದು ಎಂಬ ಸ್ವಾರ್ಥದ ಮಾತುಗಳನ್ನು ತೆಗೆದುಹಾಕಿ ನಾವು ನಮ್ಮದು ಎಂಬ ವಿಶಾಲ ಮನೋಭಾವದೊಂದಿಗೆ ಒಗ್ಗಟ್ಟಾಗಿ ಕಾಯಕವನ್ನು ಮಾಡಿದರೆ ನಮ್ಮ ದೇಶ ಮುಂದುವರೆದ ರಾಷ್ಟ್ರಗಳಲ್ಲಿ ಸೇರ್ಪಡೆಯಾಗುವುದರಲ್ಲಿ ಸಂದೇಹವಿಲ್ಲ.
- ರೇಣುಕಾ .ಮಾ. ಕಾಚಾಪುರ