
ಚಾಮರಾಜನಗರ/ ಹನೂರು: ಪ್ರಜಾಪ್ರಭುತ್ವದ ಆಶಯದಂತೆ ಜನರಿಂದ ಜನರಿಗೋಸ್ಕರ ಎಂದು ತಮ್ಮ ಜೀವನವನ್ನೇ ಕ್ಷೇತ್ರದ ಜನರಿಗಾಗಿ ಮುಡಿಪಾಗಿಟ್ಟವರು ಮಾಜಿ ಸಚಿವ ದಿ.ರಾಜೂಗೌಡರವರು. ಅವರ ರಾಜಕೀಯ ಹಾದಿಯಲ್ಲಿ ಮಾಜಿ ಶಾಸಕ ಆರ್. ನರೇಂದ್ರ ಅವರು ಮುನ್ನಡೆಯುತ್ತಿದ್ದಾರೆ ಎಂದು ಸಾಲೂರು ಬೃಹನ್ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ತಿಳಿಸಿದರು.
ತಾಲೂಕಿನ ದೊಡ್ಡಿಂದುವಾಡಿಯಲ್ಲಿ ಮಾಜಿ ಸಚಿವ ದಿ.ಜಿ. ರಾಜೂಗೌಡರವರ 21ನೇ ಪುಣ್ಯಸ್ಮರಣೆ ಅಂಗವಾಗಿ ನಡೆದ ಆರೋಗ್ಯ ಶಿಬಿರದಲ್ಲಿ ಮಾತನಾಡಿದರು.
ವಿಧಾನಸಭಾ ಕ್ಷೇತ್ರದ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುವುದರ ಮೂಲಕ ಶಿಕ್ಷಣ ಕ್ರಾಂತಿ ಮಾಡಿದ್ದಾರೆ. ತಮ್ಮ ಸ್ವಗ್ರಾಮದಲ್ಲಿ 3 ಎಕರೆ ಜಮೀನು ನೀಡುವುದರ ಮೂಲಕ ಪ್ರೌಢಶಾಲೆ ತೆರೆದು ಈ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದರು.
ನಂತರ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಮಾತನಾಡಿ, ರಾಜೂಗೌಡರ ಶಿಷ್ಯರಲ್ಲಿ ನಾನು ಕೂಡ ಒಬ್ಬನಾಗಿದ್ದೇನೆ.
ಅವರದು ನೇರ ನುಡಿ, ನಿಷ್ಟುರವಾದಿಯಾಗಿದ್ದರು, ಸೇವಾ ಮನೋಭಾವ ಹೊಂದಿದವರಾಗಿದ್ದರು. ಕ್ಷೇತ್ರದ ಜನರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ, ಜಿಲ್ಲಾ ಕ್ರೀಡಾಂಗಣ ಹಾಗೂ ಜಿಲ್ಲಾಡಳಿತ ಭವನ ನಿರ್ಮಾಣದಲ್ಲಿ ಅವರ ಪರಿಶ್ರಮವಿದೆ ಎಂದು ತಿಳಿಸಿದರು.
ಬಳಿಕ ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಮಾತನಾಡಿ, ಆರೋಗ್ಯವೇ ಭಾಗ್ಯ ಆರೋಗ್ಯ ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಸದೃಢ ದೇಹ ಮತ್ತು ಸದೃಢ ದೇಶ ನಿರ್ಮಾಣಕ್ಕಾಗಿ ಆರೋಗ್ಯ ಬಹಳ ಮುಖ್ಯವಾಗಿದೆ. ಇಂತಹ ಮಹಾನ್ ಕಾರ್ಯಕ್ಕೆ ರಾಜೂಗೌಡರ ಸ್ಮರಣೆ ಸಾಕ್ಷಿಯಾಗಿರುವುದು ಸಂತಸದ ವಿಚಾರವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗೋಪಾಲ್ ಗೌಡ ಆಸ್ಪತ್ರೆಯ ನರರೋಗ ತಜ್ಞ ಡಾ. ಪುಶ್ರುತ್, ಮಾಜಿ ಶಾಸಕರಾದ ಆರ್. ನರೇಂದ್ರ, ಆಶಾ ನರೇಂದ್ರ, ನವನೀತ್ ಗೌಡ, ನಿಖಿತಾಗೌಡ, ಎಂಸಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಪ್ರವೀಣ್ ಕುಮಾರ್, ಹೊನ್ನೇಗೌಡ ನಾಗರಾಜು ಸೇರಿದಂತೆ ಇನ್ನಿತರರು ಹಾಜರಿದ್ದರು.
ವರದಿ ಉಸ್ಮಾನ್ ಖಾನ್
