ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ತಾಲೂಕು ಕಛೇರಿಯ ಮಹಾತ್ಮಾ ಗಾಂಧೀಜಿ ಸಭಾಂಗಣದಲ್ಲಿ ಆದ್ಯ ವಚನಕಾರರಾದ ದೇವರ ದಾಸಿಮಯ್ಯ ಜಯಂತಿಯನ್ನು ಆಚರಿಸಲಾಯಿತು. ದಾಸಿಮಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಜೇಡರ ದಾಸಿಮಯ್ಯ ಮತ್ತು ದೇವರ ದಾಸಿಮಯ್ಯ ಬೇರೆ ಬೇರೆ ಅಲ್ಲ. ಎರಡೂ ಹೆಸರಿನ ವ್ಯಕ್ತಿ ಒಬ್ಬರೇ. ಇವರು ಆದ್ಯ ವಚನ ಕಾರರಾಗಿದ್ದು, “ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ, ಸುಳಿದು ಬೀಸುವ ವಾಯು ನಿಮ್ಮ ದಾನ, ನಿಮ್ಮ ದಾನವನುಂಡು ಅನ್ಯರ ಹೊಗಳುವ ಕುನ್ನಿಗಳನೇನೆಂಬೆ ರಾಮನಾಥ” ಎಂದು ಎಲ್ಲವೂ ಆ ಭಗವಂತನ ಸೃಷ್ಟಿಯೇ ಅಗಿದ್ದು, ಬೇರೆಯವನ್ನು ಹೊಗಳುವರ ಕಂಡು ಟೀಕಿಸಿದ್ದಾರೆ. ದುಗ್ಗಳೆ ದಾಸಿಮಯ್ಯನ ಹೆಂಡತಿ. ದಾಸಿಮಯ್ಯ ಹಾಕಿದ್ದ ಪರೀಕ್ಷೆಯಲ್ಲಿ ಗೆದ್ದು ಕೈಹಿಡಿದವಳು ದೈವ ಭಕ್ತೆಯಾಗಿದ್ದಳು. “ಸತಿ-ಪತಿಗಳು ಒಂದಾಗಿಪ್ಪ ಭಕ್ತಿ ಹಿತವಾಗಿಪ್ಪುದು ಶಿವಂಗೆ” ಎನ್ನುವಂತೆ ದಾಸಿಮಯ್ಯ ದಂಪತಿ ಬದುಕಿದ್ದರು ಎಂದು ನಿವೃತ್ತ ಶಿಕ್ಷಕರಾದ ಕೊಪ್ಪಳದ ಬಸವರಾಜಪ್ಪ ಇವರು ದಾಸಿಮಯ್ಯರ ಬದುಕನ್ನು ಸ್ಮರಿಸಿದರು.
ದಾಸಿಮಯ್ಯನವರ ಬದುಕು ಮುಂದಿನ ಪೀಳಿಗೆಗೆ ಅಳಿಯದೇ ಉಳಿಯಬೇಕೆಂದರೆ ಪ್ರತಿಯೊಬ್ಬರೂ ಅವರ ವಚನಗಳ ಸಂಗ್ರಹವನ್ನು ಮನೆಯಲ್ಲಿಟ್ಟು ಕೊಳ್ಳಬೇಕು. ಮಕ್ಕಳಿಗೆ ವಚನಗಳ ಬಾಯಿಪಾಠ ಮಾಡಿಸಬೇಕು. ಆಗ ದಾಸಿಮಯ್ಯನವರ ವಚನ ಸಾಹಿತ್ಯ ಮನೆ ಮಾತಾಗುತ್ತದೆ ಎಂದು ಸಾಹಿತಿಗಳು, ಪತ್ರಕರ್ತ ಉಜ್ಜಿನಿ ರುದ್ರಪ್ಪನವರು ಹೇಳಿದರು.
ಬಸವಾದಿ ಪ್ರಮುಖರು ವಚನ ಸಾಹಿತ್ಯವನ್ನು ಕ್ರಾಂತಿಯ ರೀತಿಯಲ್ಲಿ ಬಳಸಿ ಉಳಿಸಿದ್ದಾರೆ. ವಚನ ಸಾಹಿತ್ಯ ಕ್ರಾಂತಿಯ ಜೊತೆಗೆ ಸಾಮಾಜಿಕ ಕ್ರಾಂತಿಯನ್ನು ಮಾಡಿ ಎಲ್ಲರಿಗೂ ಸಮಾನವಾಗಿ ಬದುಕುವ ಹಕ್ಕನ್ನು ಕಲ್ಪಿಸಿಕೊಟ್ಟಿದ್ದಾರೆ. ಈ ಎಲ್ಲಾ ವಚನಕಾರರಿಗೆ ಭದ್ರ ತಳಪಾಯವನ್ನು ಹಾಕಿಕೊಟ್ಟವರು ಜೇಡರ ದಾಸಿಮಯ್ಯನವರು. ಇವರು ಆದ್ಯ ವಚನಕಾರರಾಗಿದ್ದು, ಸಮಾಜದಲ್ಲಿ ನಾವೆಲ್ಲಾ ಹೇಗೆ ಬದುಕಬೇಕೆಂಬುದನ್ನು ತಮ್ಮ ವಚನಗಳ ಮೂಲಕ ತಿಳಿಸಿಕೊಟ್ಟಿದ್ದಾರೆ ಎಂದು ತಹಶೀಲ್ದಾರರಾದ ಅಮರೇಶ ಜಿ ಕೆ ಇವರು ತಿಳಿಸಿದರು.
ದಿವ್ಯ ಸಾನಿದ್ಯವನ್ನು ವಹಿಸಿದ್ದ ಷ. ಬ್ರ. ಶ್ರೀ ಯೋಗಿರಾಜೇಂದ್ರ ಶಿವಾಚಾರ್ಯರ ಮಹಾಸ್ವಾಮಿಗಳು, ಹಿರೇಮಠ ಇವರು ಮನುಷ್ಯ ತನ್ನ ಬದುಕಿನ ಮೂಲಕ, ಸಾಧನೆ ಮೂಲಕ ಉಳಿಯುತ್ತಾನೆ. ಜೇಡರ ದಾಸಿಮಯ್ಯ ದೈವಗುಣವನ್ನು ಹೊಂದಿ ಬದುಕಿದ್ದರಿಂದ ದೇವರ ದಾಸಿಮಯ್ಯನಾಗಿ ಬದಲಾಗಿದ್ದಾನೆ. ಇಂದು ಅವರ ದಿನಾಚರಣೆಯ ಮೂಲಕ ನಾವೆಲ್ಲ ಸ್ಮರಿಸಿಕೊಂಡು ಅವರ ಆದರ್ಶಗಳನ್ನು ಸ್ಮರಿಸಿಕೊಳ್ಳೋಣ. ಜಯಂತಿ ಕಾರ್ಯಕ್ರಮವು ಅರ್ಥಪೂರ್ಣವಾಗಿ ಆಚರಣೆಯಾಗಿದ್ದು ಸಂತೋಷವನ್ನುಂಟುಮಾಡಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಸಮುದಾಯದವರ ಜೊತೆಗೂಡಿ ಹೆಚ್ಚಿನ ಮಟ್ಟದಲ್ಲಿ ನಡೆಸೋಣ ಎಂದು ಆಶೀರ್ವಚನವನ್ನು ನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕು ನೇಕಾರ ಸಮಾಜದ ಅಧ್ಯಕ್ಷರಾದ ರಾಂಪುರ ಮೂಗಣ್ಣ, ಪಟ್ಟಣ ಪಂಚಾಯಿತಿ ಸದಸ್ಯ ರಾಜೀವ, ರಾಂಪುರ ಬಸವರಾಜ, ಬಂಟನಾಳ ಗುರುಬಸಪ್ಪ, ಗಂಜಿ ಪ್ರವೀಣ, ಬಿ ಶಂಕ್ರಪ್ಪ, ಎಂ ವೀರಭದ್ರಪ್ಪ, ಬಾಚಿನಳ್ಳಿ ಗುರುಬಸವರಾಜ, ಹಳ್ಳಿ ಕೊಟ್ರೇಶ, ಗಂಜಿ ಪ್ರವೀಣ, ಗಂಜಿ ಪ್ರಶಾಂತ, ಮುಂತಾದ ಮುಖಂಡರು, ಉಪತಹಶೀಲ್ದಾರ್ ಅನ್ನದಾನೇಶ ಬಿ ಪತ್ತಾರ, ಕಂದಾಯ ನಿರೀಕ್ಷಕರು ಹಾಲಸ್ವಾಮಿ , ಗ್ರಾಮ ಆಡಳಿತ ಅಧಿಕಾರಿ ಹರೀಷ, ಇತರೆ ಸಿಬ್ಬಂದಿ ಇದ್ದರು. ಸಿ.ಮ. ಗುರುಬಸವರಾಜ ಸ್ವಾಗತಿಸಿ ನಿರೂಪಿಸಿದರು.
- ಕರುನಾಡ ಕಂದ
