ಕಲಬುರಗಿ: ಚುನಾವಣೆಗೂ ಮುನ್ನ ಎಲ್ಲಾ ಗ್ಯಾರಂಟಿ ಫ್ರೀ ಎಂದಿದ್ದ ಕಾಂಗ್ರೆಸ್ ಈಗ, ಎಲ್ಲದರಲ್ಲೂ ದರ ಹೆಚ್ಚಳ ಮಾಡಿ ಜನರನ್ನು ಸಂಕಷ್ಟಕ್ಕೆ ದೂಡಿದೆ ಎಂದು ಮಹಾಗಾಂವ ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಮರತೂರಕರ್ ಆರೋಪಿಸಿದರು.
“ರಾಜ್ಯ ಸರಕಾರ ಯುಗಾದಿ ಹೊಸ ವರ್ಷಕ್ಕೆ ಅಗತ್ಯ ವಸ್ತುಗಳ ಬೆಲೆ ಯನ್ನು ಏರಿಕೆ ಮಾಡುವ ಮೂಲಕ ಜನರಿಗೆ ಬೆಲೆ ಏರಿಕೆ ಶಾಕ್ ನೀಡಿದೆ,” ಎಂದು ಅವರು ದೂರಿದರು.
“ವಿದ್ಯುತ್, ಬಸ್ ಟಿಕೆಟ್ ದರ, ಹಾಲು, ಮೆಟ್ರೋ, ವೈದ್ಯಕೀಯ ವೆಚ್ಚ ಮರಣ ಪ್ರಮಾಣ ಪತ್ರ, ಆಪರೇಷನ್ ವೆಚ್ಚ ರೆವಿನ್ಯೂ, ರಿಜಿಸ್ಟ್ರೇಷನ್, ಮುದ್ರಾಂಕ ಶುಲ್ಕ. ಪಾಲಿಕೆ ಟ್ಯಾಕ್ಸ್ ಸೇರಿದಂತೆ ಎಲ್ಲವನ್ನೂ ಹೆಚ್ಚಿಸಿದೆ. ಈ ಮೂಲಕ ಗ್ಯಾರಂಟಿ ಹೆಸರಲ್ಲಿ ಜನರ ದಾರಿ ತಪ್ಪಿಸಿ ಮಂತ್ರಿಗಳು ಮತ್ತು ಶಾಸಕರು ಲೂಟಿ ಹೊಡೆಯುತ್ತಿದ್ದಾರೆ,” ಎಂದರು. 662 ಕೋಟಿ ರೂ. ಹಾಲಿನ ಹಣವನ್ನು ರೈತ ರಿಗೆ ಕೊಡದೆ ಬಾಕಿ ಉಳಿಸಿಕೊಳ್ಳಲಾಗಿದೆ. ಆಸ್ಪತ್ರೆಗಳಲ್ಲಿ ವೈದ್ಯಕೀಯ ವೆಚ್ಚವನ್ನು ಶೇ. 10ರಿಂದ 15ರಷ್ಟು ಹೆಚ್ಚಳ ಮಾಡಲಾಗಿದೆ. ಸಂವಿಧಾನಕ್ಕೆ ವಿರುದ್ಧವಾಗಿ ಮುಸ್ಲಿಮರಿಗೆ ಪ್ರತ್ಯೇಕವಾಗಿ ಮೀಸಲು ಜಾರಿಗೊಳಿಸುವ ಮೂಲಕ ಕಾಂಗ್ರೆಸ್ ವಿಭಿನ್ನ ಧೋರಣೆ ತಳೆದಿದೆ. ಮೀಸಲು ಕೂಡಲೇ ಹಿಂಪಡೆಯಬೇಕು ಎಂದರು.
“ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಂದಾಗಿರುವುದರಿಂದ ಕಾಂಗ್ರೆಸ್ ಸೋಲಿನ ಭೀತಿಯಿಂದ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ನಡೆಸುತ್ತಿಲ್ಲ. ಬಿಜೆಪಿ-ಜೆಡಿಎಸ್ ಮೈತ್ರಿಯಿಂದಾಗಿ ಕಾಂಗ್ರೆಸ್‌ಗೆ ಸೋಲಿನ ಭೀತಿ ಕಾಡುತ್ತಿದೆ,” ಎಂದರು.
- ಕರುನಾಡ ಕಂದ
