
ಕೊಪ್ಪಳ/ ಗಂಗಾವತಿ : ಪೋಷಕರು ಅಪ್ರಾಪ್ತ ಮಕ್ಕಳಿಗೆ ಬೈಕ್ ನೀಡುವ ಮುನ್ನ ಎಚ್ಚರ ವಹಿಸಬೇಕು. ಅಪ್ರಾಪ್ತ ಮಗನಿಗೆ ಬೈಕ್ ಚಾಲನೆ ಮಾಡಲು ಕೊಟ್ಟ ತಂದೆಗೆ ಕೋರ್ಟ್ 25 ಸಾವಿರ ರೂ. ದಂಡ ವಿಧಿಸಿದೆ.
ಗಂಗಾವತಿ ನಗರ ಸಂಚಾರಿ ಠಾಣೆಯ ಪಿ.ಎಸ್.ಐ ಶಾರದಮ್ಮ ಅವರು ಮಾ-23 ರಂದು ಬೆಳಿಗ್ಗೆ 11 ಘಂಟೆಯ ಸುಮಾರಿಗೆ ಪಂಪಾನಗರದ ಬಳಿ ವಾಹನಗಳ ತಪಾಸಣೆ ನಡೆಸುವಾಗ ಅಪ್ರಾಪ್ತನು ಬೈಕ್ ಚಲಾಯಿಸುತ್ತಿರುವುದು ಬೆಳಕಿಗೆ ಬಂದಿತ್ತು. ತಪಾಸಣೆ ವೇಳೆ ದ್ವಿಚಕ್ರ ವಾಹನವನ್ನು ಬಾಲಕ ಚಲಾಯಿಸಿಕೊಂಡು ಬಂದಿದ್ದ. ಅಪ್ರಾಪ್ತ ವಾಹನ ಚಾಲನೆ ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲ. ಅಲ್ಲದೇ ಅಪ್ರಾಪ್ತರಿಗೆ ವಾಹನ ಚಾಲನೆಗೆ ಕೊಡುವುದು ಕೂಡಾ ಅಪರಾಧವಾಗಿದೆ.
ಈ ಬಗ್ಗೆ ಗಂಗಾವತಿ ಸಂಚಾರಿ ಪೊಲೀಸರು ವಾಹನದ ಮಾಲೀಕರ ವಿರುದ್ಧ ಲಘು ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಈ ಕುರಿತು ಸಿಜೆ ಮತ್ತು ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶರು ಏ-3 ರಂದು ದಂಡ ವಿಧಿಸಿ ಆದೇಶಿಸಿದ್ದಾರೆ. ದ್ವಿಚಕ್ರ ವಾಹನ ಮಾಲೀಕರಾದ ಬಾಲಕನ ತಂದೆಗೆ 25 ಸಾವಿರ ರೂ. ದಂಡ ವಿಧಿಸಲಾಗಿದೆ. ಈ ಮೂಲಕ ನ್ಯಾಯಾಲಯವು ಅಪ್ರಾಪ್ತರಿಗೆ ವಾಹನ ನೀಡದಂತೆ ಪೋಷಕರಿಗೆ ಎಚ್ಚರಿಕೆ ನೀಡಿದೆ.
ವರದಿ : ಜಿಲಾನ್ ಸಾಬ್ ಬಡಿಗೇರ.




















