ಬಳ್ಳಾರಿ : ಮಹಾವೀರ ಜಯಂತಿ ಕೇವಲ ಧಾರ್ಮಿಕ ಹಬ್ಬವಲ್ಲ ಬದಲಾಗಿ ಕರುಣೆ, ನೈತಿಕತೆ, ಮತ್ತು ಭೌತಿಕತೆಯಿಂದ ಜೀವನವನ್ನು ನಡೆಸಲು ಕಲಿಸುತ್ತದೆ ಎಂದು ಮಹಾನಗರ ಪಾಲಿಕೆ ಮಹಾಪೌರರಾದ ಮುಲ್ಲಂಗಿ ನಂದೀಶ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗು ಮಹಾನಗರ ಪಾಲಿಕೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ತೇರು ಬೀಡಿ ರಸ್ತೆಯ ಶ್ರೀ ಪಾರ್ಶ್ವನಾಥ ಭವನ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮವನ್ನು ಮಹಾವೀರ ಅವರ ಭಾವಚಿತ್ರಕ್ಕೆ ಮಾಡುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಮಹಾವೀರರು ತಮ್ಮ 30ನೇ ವಯಸ್ಸಿನಲ್ಲಿ ಜ್ಞಾನೋದಯವನ್ನು ಹುಡುಕುತ್ತಾ ತಮ್ಮ ಐಷಾರಾಮಿ ಜೀವನವನ್ನು ತ್ಯಜಿಸಿ 12 ವರ್ಷಗಳ ತೀವ್ರ ಧ್ಯಾನ ಮತ್ತು ತಪಸ್ಸಿನ ನಂತರ ಅವರು ಕೇವಲ ಜ್ಞಾನ ಪಡೆದು ತಮ್ಮ ಜೀವನದ ಉಳಿದ ಭಾಗವನ್ನು ಅಹಿಂಸೆ, ಸತ್ಯ ಮತ್ತು ಸ್ವಯಂ ಶಿಸ್ತಿನ ಬೋಧನೆಗಳನ್ನು ಹರಡಲು ಕಳೆದರೂ ಎಂದು ಮಹಾವೀರರ ಜೀವನದ ಬಗ್ಗೆ ಪರಿಚಯಿಸಿದರು. ಸಾಧ್ವಜೀ ಶ್ರೀ ಸೂರ್ಯಪ್ರಭ ಶ್ರೀಜಿ ಅವರು ಕಾರ್ಯಕ್ರಮದ ವಿಶೇಷ ಉಪನ್ಯಾಸದಲ್ಲಿ ಮಾತನಾಡಿ ಜೈನ ಧರ್ಮದ 24ನೇ ತೀರ್ಥಂಕರಾದ ಭಗವಾನ್ ಮಹಾವೀರರು, ಚಿಕ್ಕ ವಯಸ್ಸಿನಲ್ಲಿಯೇ ಸನ್ಯಾಸ ಸ್ವೀಕರಿಸಿದರು. ಸಹಾನುಭೂತಿಯ ಹೊಸ ಧರ್ಮವನ್ನು ಜಗತ್ತಿಗೆ ಪರಿಚಯಿಸಿದ ಭಗವಾನ್ ಮಹಾವೀರರು ಅಹಿಂಸೆ, ಪ್ರೀತಿ ಮತ್ತು ತಪಸ್ವಿಯಾಗಿದ್ದರು ಎಂದರು. ಮಹಾವೀರ ಕ್ರಿ. ಪೂ. 599 ರಲ್ಲಿ ಬಿಹಾರದ ಲಿಚ್ಚಾ ವಿ ರಾಜವಂಶದ ಮಹಾರಾಜ ಸಿದ್ದಾರ್ಥ ಮತ್ತು ರಾಣಿ ತ್ರಿಶೀಲ ದಂಪತಿಗೆ ಜನಿಸಿದರು ಎಂದು ಇತಿಹಾಸದ ಪುಟಗಳು ಹೇಳುತ್ತವೆ. ಬಾಲ್ಯದಲ್ಲಿ ಮಹಾವೀರರ ಹೆಸರು ವರ್ಧಮಾನ್ , ಮಹಾವೀರರು ಸಮೃದ್ಧ ಜೀವನ ಮತ್ತು ಶಾಂತಿಯ ಮಾರ್ಗಕ್ಕಾಗಿ ಐದು ತತ್ವಗಳನ್ನು ನೀಡಿದ್ದಾರೆ. ಆ ತತ್ವಗಳೆಂದರೆ ಅಹಿಂಸೆ, ಸತ್ಯ, ಅಸ್ತಿತ್ವ, ಬ್ರಹ್ಮಚರ್ಯ, ಮತ್ತು ಬೌತಿಕವಲ್ಲದ ವಸ್ತುಗಳಿಂದ ದೂರವಿರುವುದು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಬಳ್ಳಾರಿ ಕೆ. ಸುಧಾ ತಂಡದಿಂದ ಭಗವಾನ್ ಮಹಾವೀರರ ಕುರಿತ ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿದರು ಮತ್ತು ಜೈನ ಸಮುದಾಯದ ಮಕ್ಕಳಿಂದ ಸಾಂಸ್ಕೃತಿಕ ನೃತ್ಯ ಪ್ರದರ್ಶನ ನಡೆಯಿತು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಸದಸ್ಯರಾದ ಗಾದೆಪ್ಪ. ಪಿ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಜೈನ ಸಂಘದ ಅಧ್ಯಕ್ಷ ಉತ್ಸವ ಲಾಲ್ ಜಿ, ಸೇರಿದಂತೆ ಜೈನ ಸಮುದಾಯದ ಮುಖಂಡರು ಸಂಘ ಸಂಸ್ಥೆಗಳ ವಿವಿಧ ಮಂಡಲಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಇದಕ್ಕೂ ಮುಂಚೆ ಸಂಭ್ರಮದ ಮೆರವಣಿಗೆ ಜರಗಿತ್ತು. ಮಹಾವೀರ ಜಯಂತಿ ಅಂಗವಾಗಿ ಮಹಾವೀರ ಜಯಂತಿ ಅಂಗವಾಗಿ ಏರ್ಪಡಿಸಿದ ಮೆರವಣಿಗೆಯು ವಿವಿಧ ಸಾಂಸ್ಕೃತಿಕ ಕಲಾತಂಡಗಳನ್ನೊಳಗೊಂಡ ಜನ ಸಂಸ್ಕೃತಿಯ ಮೆರವಣಿಗೆ ಸಂಭ್ರಮದಿಂದ ಮೆರವಣಿಗೆಯು ನಗರದ ಶ್ರೀ ಪಾರ್ಶ್ವನಾಥ ಭವನದಿಂದ ಆರಂಭವಾಗಿ ತೇರುಬೀದಿ, ಕಾಳಮ್ಮ ಬೀದಿ, ಬೆಂಗಳೂರು ರಸ್ತೆ, ಬ್ರೂಸ್ ಪೇಟೆ ಪೊಲೀಸ್ ಠಾಣೆ ರಸ್ತೆಯ ಮೂಲಕ ಶ್ರೀ ಪಾರ್ಶ್ವನಾಥ ಭವನ ಸಭಾಂಗಣಕ್ಕೆ ತಲುಪಿ ಸಂಪನ್ನಗೊಂಡಿತು.
ವರದಿ : ಜಿಲಾನ್ ಸಾಬ್ ಬಡಿಗೇರ.
