ಬಳ್ಳಾರಿ / ಕಂಪ್ಲಿ : ರೈತರ ಹಿತಾಸಕ್ತಿಗಾಗಿ ಪಟ್ಟಣದಲ್ಲಿ ತುರ್ತಾಗಿ ಭತ್ತ ಖರೀದಿ ಕೇಂದ್ರ ಆರಂಭಿಸುವಂತೆ ನಂ.3ಸಣಾಪುರ ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷ ಅಯ್ಯೋದಿ ವೆಂಕಟೇಶ ಒತ್ತಾಯಿಸಿದರು.
ಇಲ್ಲಿನ ತಹಸೀಲ್ದಾರ್ ಎಸ್. ಶಿವರಾಜಗೆ ಶುಕ್ರವಾರ ನಂ.3 ಸಣಾಪುರ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದ ಸಂದರ್ಭದಲ್ಲಿ ಮಾತನಾಡಿ, ಭತ್ತಕ್ಕೆ ಮಾರುಕಟ್ಟೆಯಲ್ಲಿ ದರ ಇಲ್ಲದೆ ಭತ್ತ ಬೆಳೆದ ರೈತರು ಸಂಕಷ್ಟದಲ್ಲಿದ್ದಾರೆ. ದಿನೇದಿನೇ ಕೃಷಿವೆಚ್ಚ ಏರುತ್ತಿದ್ದರೂ ಭತ್ತ ದರ ಏರಿಕೆಗೊಳ್ಳುತ್ತಿಲ್ಲ. ಬೇಸಿಗೆ ಹಂಗಾಮಿನ ಸಸಿಮಡಿಗಳಲ್ಲೇ ಆನೆಕೊಂಬು, ಕೊಳವೆ ಕಾಣಿಸಿಕೊಂಡಿದ್ದರಿಂದ ಸಸಿಮಡಿ ಕೆಡಿಸಿ ಹೊಸ ಸಸಿಮಡಿ ಹಾಕಿಕೊಂಡಿದ್ದರಿಂದ ಆರಂಭದಲ್ಲಿಯೇ ಸಾವಿರಾರು ರೂಪಾಯಿ ನಷ್ಟವಾಗಿತ್ತು. ಗೊಬ್ಬರ, ಔಷಧಿ, ಕೃಷಿ ಕೂಲಿ, ಕೊಯ್ಲು ದರ, ಗುತ್ತಿಗೆ ವಿಪರೀತವಾಗಿದ್ದು ಕೃಷಿ ವೆಚ್ಚ ಹೆಚ್ಚಾಗಿದೆ. ಇದೀಗ ಬೇಸಿಗೆ ಹಂಗಾಮಿನ ಭತ್ತ ದರ ಕುಸಿತಗೊಂಡಿದೆ. ತುಂಗಭದ್ರಾ ನದಿ ಪಾತ್ರದ 2000 ಹೆಕ್ಟರ್ ಪ್ರದೇಶದ ಭತ್ತ ಕೊಯ್ಲಾಗುತ್ತಿದ್ದು, ಸದ್ಯದ ದರಕ್ಕೆ ಭತ್ತ ಮಾರಿದರೆ ರೈತ ನಷ್ಟಕ್ಕೀಡಾಗುತ್ತಿದ್ದಾನೆ. ಏ.10 ರಿಂದ ಕಾಲುವೆಯಲ್ಲಿ ನೀರು ಸ್ಥಗಿತಗೊಂಡಿದ್ದು ಸುಮಾರು 10ಸಾವಿರ ಹೆಕ್ಟರ್ ಪ್ರದೇಶದ ಭತ್ತಕ್ಕೆ ನೀರಿಲ್ಲದೆ ಶೇ.30ರಿಂದ ಶೇ. 40ರಷ್ಟು ಭತ್ತ ಇಳುವರಿ ಕುಸಿತಗೊಳ್ಳಲಿದೆ. ಇಂತಹ ಸಂದರ್ಭದಲ್ಲಿ ಭತ್ತ ಖರೀದಿ ಕೇಂದ್ರ ತೆರೆಯಬೇಕಿದೆ. ಇದರಿಂದ ಮಾರುಕಟ್ಟೆಯಲ್ಲಿ ಭತ್ತ ದರ ಏರಿಕೆಗೊಂಡು ರೈತರನ್ನು ಕೈಹಿಡಿಯಲಿದೆ. ಮುಖ್ಯಮಂತ್ರಿಗಳು ತುರ್ತಾಗಿ ಭತ್ತ ಖರೀದಿ ಕೇಂದ್ರ ತೆರೆಯುವಲ್ಲಿ ಮುಂದಾಗಬೇಕು ಎಂದು ಒತ್ತಾಯಿಸಿದರು. ಮನವಿ ಸಲ್ಲಿಸುವಲ್ಲಿ ಅಕ್ಕಿ ಗಿರಣಿಮಾಲೀಕರ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ, ನೀರು ಬಳಕೆದಾರರ ಸಂಘದ ಪದಾಧಿಕಾರಿಗಳಾದ ಅಲಬನೂರು ಬಸವರಾಜ, ಕೆ.ದೊಡ್ಡಬಸಪ್ಪ, ಸಿ.ಶರಣಗೌಡ, ಓಂಕಾರಿಗೌಡ, ಶರಣಪ್ಪ, ಎಚ್.ಡಿ.ದೊಡ್ಡಬಸಪ್ಪ, ಪ್ರಸಾದ್, ಅರುಣ್‌ಕುಮಾರ್, ಪಂಪಾಪತಿ ಇತರರಿದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ.
