ಬೀದರ್ : ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಒಂದಾಗಿನಿಂದ 50ಕ್ಕಿಂತ ಹೆಚ್ಚು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರು ದೂರಿದ್ದಾರೆ.
ನಿನ್ನೆ ನಗರದ ಅಂಬೇಡ್ಕರ್ ವೃತ್ತದಲ್ಲಿ ನಡೆದ ಬಿಜೆಪಿಯ ಜನಾಕ್ರೋಶ ಯಾತ್ರೆಯ ಸಮಾರಂಭದಲ್ಲಿ ಅವರು ಮಾತನಾಡಿ ಸಿದ್ದರಾಮಯ್ಯನವರ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದೆ, ಇತ್ತೀಚಿಗೆ ಇವರು ಬಜೆಟ್ ಮಂಡನೆ ಮಾಡಿದ್ದು, ಪಾಕಿಸ್ತಾನದ್ದೋ ಅಥವಾ ಕರ್ನಾಟಕದ್ದೋ ಎಂದು ಅನುಮಾನ ಬರುತ್ತಿದೆ. ಹಾಗೆಯೇ ಸುಮಾರು 38 ಸಾವಿರ ಕೋಟಿ ರೂ. ಗಿಂತ ಹೆಚ್ಚು ದುಡ್ಡು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಸಮುದಾಯದ ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಗೋಸ್ಕರ ಮೀಸಲಿಡಬೇಕಿತ್ತು. ಆದರೆ ಆ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಹೀಗಾಗಿ ಈ ಮೂರು ಕಾರಣದಿಂದಾಗಿ ಭಾರತ ಜನತಾ ಪಾರ್ಟಿ ಜನಾಕ್ರೋಶ ಆಂದೋಲನ ಮಾಡುತ್ತಿದೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಯಡಿಯೂರಪ್ಪನವರ ಸರ್ಕಾರ ಇದ್ದಾಗ ಇಡೀ ದೇಶದಲ್ಲಿ ಗುಜರಾತ್ ನಂತರ ಕರ್ನಾಟಕ ಅಭಿವೃದ್ಧಿ ಹೆಸರಿನಲ್ಲಿ ಎರಡನೇ ಸ್ಥಾನದಲ್ಲಿತ್ತು. ಆದರೆ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದಾಗಿನಿಂದ ಕರ್ನಾಟಕ ದೇಶದಲ್ಲಿಯೇ ಭ್ರಷ್ಟಾಚಾರದಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಯ್ ರೆಡ್ಡಿ ಅವರೇ ಹೇಳಿದ್ದಾರೆ ಎಂದು ದೂರಿದರು.
ಬಜೆಟ್ ನಲ್ಲಿ ಮುಸ್ಲಿಂರಿಗೆ ಸರಕಾರಿ ಕಾಮಗಾರಿಗಳಲ್ಲಿ 4 ಪ್ರತೀಶತ ಮೀಸಲಾತಿ ಎಂದು ಹೇಳಿದ್ದಾರೆ. ಮುಸ್ಲಿಂ ಬಡ ಹೆಣ್ಣುಮಕ್ಕಳ ಮದುವೆಗೆ 50 ಸಾವಿರ ರೂ., ಮುಸಲ್ಮಾನ್ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸಕ್ಕೇಂದು ಹೊರದೇಶಕ್ಕೆ ಹೋದರೆ 30 ಲಕ್ಷ ರೂ. ನೀಡುತ್ತೇನೆ ಎಂದು ಹೇಳಿದ್ದಾರೆ. ಹಿಂದೂಗಳಲ್ಲಿ ಬಡ ವಿದ್ಯಾರ್ಥಿ, ಬಡ ಹೆಣ್ಣುಮಕ್ಕಳು ಇಲ್ವಾ ಎಂದು ಪ್ರಶ್ನೆ ಮಾಡಿದ ಅವರು, ಸಿದ್ದರಾಮಯ್ಯ ಅವರು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳೋ ಅಥವಾ ಮುಸಲ್ಮಾನರಿಗೆ ಮಾತ್ರ ಮುಖ್ಯಮಂತ್ರಿಗಳೋ ಎಂದು ಪ್ರಶ್ನೆ ಮಾಡಿದರು.
ಬಿಜೆಪಿ ಮುಸಲ್ಮಾನರ ವಿರೋಧಿ ಪಕ್ಷವಲ್ಲ. ಆದರೆ ದೇಶದ್ರೋಹಿಗಳನ್ನು ಸಹಿಸಿಕೊಳ್ಳುವುದಿಲ್ಲ. ನರೇಂದ್ರ ಮೋದಿ ಅವರು ತ್ರಿಬಲ್ ತಲಾಕ್ ಅನ್ನು ತೆಗೆದು ಹಾಕುವ ಮೂಲಕ ಮುಸಲ್ಮಾನರ ಹೆಣ್ಣುಮಕ್ಕಳಿಗೆ ಗೌರವ ಕೊಡುವ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಎನ್.ರವಿಕುಮಾರ್, ಎಂ.ಜಿ.ಮೂಳೆ, ಶಶಿಲ್ ನಮೋಷಿ, ಶಾಸಕರಾದ ಸಿದ್ದು ಪಾಟೀಲ್, ಡಾ.ಶೈಲೇಂದ್ರ ಬೆಲ್ದಾಳೆ, ಪ್ರಭು ಚೌವ್ಹಾಣ್, ಶರಣು ಸಲಗರ್, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ್ ಪಾಟೀಲ್, ಮಾಜಿ ಸಂಸದ ಭಗವಂತ್ ಖುಬಾ, ರಘುನಾಥಾರಾವ್ ಮಲ್ಕಾಪುರೆ, ಈಶ್ವರಸಿಂಗ್ ಠಾಕೂರ್ ಹಾಗೂ ಬಾಬು ವಾಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ: ರೋಹನ್ ವಾಘಮಾರೆ
