ಬೆಂಗಳೂರು: ಪ್ರಸಕ್ತ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (CET) ಗುರುವಾರ ಮುಗಿದಿದ್ದು, ಶುಕ್ರವಾರವೇ ಎಲ್ಲ ನಾಲ್ಕು ವಿಷಯಗಳ 16 ವರ್ಷನ್‌ಗಳ ಕೀ ಉತ್ತರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
ಭೌತವಿಜ್ಞಾನ, ರಸಾಯನವಿಜ್ಞಾನ, ಗಣಿತ ಮತ್ತು ಜೀವ ವಿಜ್ಞಾನ ವಿಷಯಗಳ ಕೀ ಉತ್ತರಗಳನ್ನು ಪ್ರಕಟಿಸಿದ್ದು, ಆಕ್ಷೇಪಣೆಗಳು ಇದ್ದಲ್ಲಿ ಏ. 22ರ ಸಂಜೆ 5 ಗಂಟೆ ಒಳಗೆ ಆನ್‌ಲೈನ್ ಮೂಲಕ ಸಲ್ಲಿಸಬಹುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆಕ್ಷೇಪಣೆ ಸಲ್ಲಿಸುವ ಸಂದರ್ಭದಲ್ಲಿ ಪತ್ರಿಕೆಯ ವಿವರ, ಪರೀಕ್ಷಾ ದಿನಾಂಕ, ವರ್ಷನ್ ಕೋಡ್, ಪ್ರಶ್ನೆ ಸಂಖ್ಯೆ ಹಾಗೂ ಪೂರಕ ದಾಖಲೆಗಳನ್ನು ಪಿಡಿಎಫ್ ರೂಪದಲ್ಲಿ ಸಲ್ಲಿಸಬೇಕು. ಈ ಮಾಹಿತಿ ಸರಿ ಇಲ್ಲದಿದ್ದಲ್ಲಿ ಅಂತಹ ಆಕ್ಷೇಪಣೆಗಳನ್ನು ಪರಿಗಣಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸಿಇಟಿ: ಅರ್ಜಿ ತಿದ್ದುಪಡಿಗೆ ಅವಕಾಶ
ಸಿಇಟಿ ಅರ್ಜಿಯಲ್ಲಿ ಏನಾದರೂ ತಪ್ಪುಗಳಿದ್ದು, ಅವುಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಇಚ್ಛಿಸುವವರಿಗೆ ಮೇ 2ರವರೆಗೆ ಅವಕಾಶ ನೀಡಲಾಗಿದೆ. ಮೀಸಲಾತಿ, ವಿಶೇಷ ಪ್ರವರ್ಗ, ಶೈಕ್ಷಣಿಕ ವಿವರಗಳು, ಕ್ಲಾಸ್ ಕೋಡ್‌ಗಳಲ್ಲಿ (ಎ,ಬಿ,ಸಿ,ಡಿ.. ಇತ್ಯಾದಿ) ತಪ್ಪಾಗಿದ್ದರೆ ಅವುಗಳನ್ನು ಸರಿಪಡಿಸಿಕೊಳ್ಳಬಹುದು. ಅಭ್ಯರ್ಥಿಗಳ ಹೆಸರು, ತಂದೆ–ತಾಯಿ ಹೆಸರು, ಜನ್ಮ ದಿನಾಂಕ, 10ನೇ ತರಗತಿ ಹಾಗೂ 12ನೇ ತರಗತಿಯ ನೋಂದಣಿ ಸಂಖ್ಯೆ ತಪ್ಪಾಗಿದ್ದರೆ ದಾಖಲೆ ಸಹಿತ ಪ್ರಾಧಿಕಾರಕ್ಕೆ ಬಂದು ಮನವಿ ಸಲ್ಲಿಸಬೇಕು ಎಂದು ಸೂಚಿಸಿದ್ದಾರೆ.
ಕೃಷಿಕರ ಕೋಟಾದಡಿ ಪ್ರಾಯೋಗಿಕ ಪರೀಕ್ಷೆ ಬರೆಯಲು ಸಿಇಟಿ ಅರ್ಜಿಯಲ್ಲಿ ನಮೂದಿಸದೇ ಇದ್ದಲ್ಲಿ ಏ.20ರೊಳಗೆ ತಿದ್ದುಪಡಿ ಮಾಡಿಕೊಳ್ಳಬೇಕು.
ಹೊಸದಾಗಿ ಕೃಷಿಕರ ಕೋಟಾ ನಮೂದಿಸಿದವರು ಏ.21ರಂದು ತಮ್ಮ ದಾಖಲೆಗಳನ್ನು ಕೆಇಎ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್.
