ಬಳ್ಳಾರಿ/ ಕಂಪ್ಲಿ : ಪಟ್ಟಣದ ಹೊರವಲಯದಲ್ಲಿ ಹಸಿರು ತೋಟಗಳ ಮಧ್ಯೆ ವಿರಾಜಮಾನವಾಗಿರುವ ಶ್ರೀ ಶಿವಾಧ್ವೈತ ಶಿವಶರಣ ಹೇರೂರು ವಿರುಪಣ್ಣ ತಾತನವರ ಮಹಾರಥೋತ್ಸವವು ಚೈತ್ರ ಬಹಳ ಪಂಚಮಿಯ ದಿನವಾದ ಇಂದು ಸಡಗರ, ಸಂಭ್ರಮ, ಶ್ರದ್ಧೆ ಭಕ್ತಿಯಿಂದ ಜರುಗಿತು.
ಶಿವಾಧ್ವೈತ ಶಿವಶರಣ ಹೇರೂರು ವಿರುಪಣ್ಣ ತಾತನವರು ಮೂಲತಃ ಕೊಪ್ಪಳ ಜಿಲ್ಲೆ, ಗಂಗಾವತಿ ತಾಲ್ಲೂಕಿನ ಹೇರೂರು ಗ್ರಾಮದವರಾದರೂ ಸಹಿತ ಅನೇಕ ಪವಾಡಗಳನ್ನು ಮಾಡುತ್ತಾ ಕಂಪ್ಲಿಯಲ್ಲಿ ಬಂದು ನೆಲೆಸಿದ್ದರು. ಸಧ್ಭಕ್ತರ ಇಚ್ಛೆಯಂತೆ ತನ್ನ ಕಾಯವನ್ನು ಪಂಚಭೂತಗಳಲ್ಲಿ ಲೀನವಾಗಿಸಿ, ಲಿಂಗೈಕ್ಯರಾಗಿದ್ದು, ಕಂಪ್ಲಿಯಲ್ಲಿ ಸರ್ವಧರ್ಮಿಯರ ಆಸ್ತಿಕ, ಆಧ್ಯಾತ್ಮ, ತತ್ವಜ್ಞಾನಿಗಳ ಜಾಗೃತ ಕ್ಷೇತ್ರ ಕಂಪ್ಲಿ ವಿರುಪಣ್ಣ ತಾತನವರ ಮಠವಾಗಿದೆ. ತಾತನ ಮಹಾರಥೋತ್ಸವದ ಅಂಗವಾಗಿ ರಥಕ್ಕೆ ಕಂಕಣಧಾರಣೆ, ಕಳಸಧಾರಣಾ ಕಾರ್ಯಕ್ರಮಗಳು ಬುಕ್ಕಸಾಗರ ಕರಿಸಿದ್ದೇಶ್ವರ ವಿಶ್ವಾರಾಧ್ಯಾ ಶಿವಾಚಾರ್ಯರ ನೇತೃತ್ವದಲ್ಲಿ ಜರುಗಿದ್ದವು. ಇಂದು ಬೆಳಿಗ್ಗೆ ತಾತನವರ ಪ್ರತಿಮೆಗೆ ವಿವಿಧ ಅಭಿಷೇಕಗಳು, ಸಹಸ್ರ ಬಿಲ್ವಾರ್ಚನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ನಂತರ ಮಹಾಮಂಗಳಾರತಿಯನ್ನು ನೆರವೇರಿಸಿದ ನಂತರ ಸದ್ಭಕ್ತರ ನೇತೃತ್ವದಲ್ಲಿ ಮಡಿ ತೇರನ್ನು ಎಳೆಯಲಾಯಿತು. ನಂತರ ಅನ್ನಸಂತರ್ಪಣೆಗೆ ಚಾಲನೆ ನೀಡಲಾಯಿತು. ಸಂಜೆಯವರೆಗೂ ನಿರಂತರವಾಗಿ ಅನ್ನಸಂತರ್ಪಣೆ ಜರುಗಿತು.
ರಾತ್ರಿಯಿಂದಲೇ ಭಜನಾ ಮಂಡಳಿಗಳು ಭಕ್ತಿ ಪೂರ್ವಕವಾಗಿ ಭಜನೆಯನ್ನು ನಡೆಸಿದರು.
ಸಂಜೆ ಹೆಬ್ಬಾಳದ ನಾಗಭೂಷಣ ಶಿವಾಚಾರ್ಯರು ಸೇರಿದಂತೆ ವಿವಿಧ ಶಿವಾಚಾರ್ಯರ ನೇತೃತ್ವದಲ್ಲಿ ಅತ್ಯಂತ ವಿಜೃಂಭಣೆಯಿಂದ ರಥೋತ್ಸವ ಜರುಗಿದ್ದು, ಅಲಂಕಾರಗೊಂಡಿದ್ದ ರಥದಲ್ಲಿ ಹೇರೂರು ವಿರುಪಣ್ಣ ತಾತನವರ ಬೆಳ್ಳಿ ಪ್ರತಿಮೆಯನ್ನು ಇಟ್ಟು ತೇರನ್ನು ಎಳೆದರು. ರಥೋತ್ಸವದಲ್ಲಿ ಪಟ್ಟಣವಷ್ಟೇ ಅಲ್ಲದೇ ಸುತ್ತಮುತ್ತಲ ಗ್ರಾಮದ ಸಾವಿರಾರು ಸದ್ಭಕ್ತರು ರಥೋತ್ಸವದಲ್ಲಿ ಭಾಗವಹಿಸಿ ರಥಕ್ಕೆ ಹೂ ಹಣ್ಣು, ಹೂಗಳನ್ನು ಎಸೆದು ತಮ್ಮ ಹರಕೆಯನ್ನು ತೀರಿಸಿದರು. ಜಾತ್ರಾಮಹೋತ್ಸವದ ನೇತೃತ್ವವನ್ನು ವಿರುಪಣ್ಣ ತಾತನವರ ಮಠದ ಅಧ್ಯಕ್ಷರಾದ ಡಿ.ವಿ.ರಮೇಶ್ ಹಾಗೂ ಪದಾಧಿಕಾರಿಗಳು, ಅರ್ಚಕರು ವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್.
