ಬಳ್ಳಾರಿ/ ಸಿರುಗುಪ್ಪ: ‘ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಜೀವನದ ಮೌಲ್ಯಗಳು ಸ್ತ್ರೀಕುಲಕ್ಕೆ ಅಮೂಲ್ಯ ಕಾಣಿಕೆಯಾಗಿವೆ’ ಎಂದು ಸಿರುಗುಪ್ಪದ ಶ್ರೀಗುರು ಬಸವ ಮಹಾಮಠದ ಬಸವಭೂಷಣ ಸ್ವಾಮೀಜಿ ತಿಳಿಸಿದರು.
ತಾಲ್ಲೂಕಿನ ನಾಗರಹಾಳು ಗ್ರಾಮದ ಶ್ರೀಬೃಹನ್ಮಠದಲ್ಲಿ ಶರಣ ದೊಡ್ಡಯ್ಯಶಾಸ್ತ್ರಿಗಳ, ಬಸವಮ್ಮ ಅವ್ವನವರ ಪುಣ್ಯಾರಾಧನೆ ಅಂಗವಾಗಿ ಶುಕ್ರವಾರದಿಂದ ಹಮ್ಮಿಕೊಂಡಿರುವ ಹೇಮರೆಡ್ಡಿ ಮಲ್ಲಮಾಂಬೆಯ ಜೀವನದರ್ಶನ ಪುರಾಣ ಪ್ರವಚನ ಉದ್ಘಾಟಿಸಿ, ಅರ್ಥಪೂರ್ಣ ಬದುಕು ಸಾಗಿಸಿದ ಮಲ್ಲಮ್ಮನ ವಿಚಾರಧಾರೆಗಳು ಮನೆ-ಮನಕ್ಕೆ ತಲುಪುವಂತಾಗಬೇಕು ಎಂದರು.
ಶ್ರೀಮಠದ ಬಸವರಾಜಯ್ಯ ತಾತನವರು ಮಾತನಾಡಿ, ಏ.26ರಂದು ಶಾಸ್ತ್ರಿಗಳ, ಬಸವಮ್ಮನವರ ಪುಣ್ಯಸ್ಮರಣೆ ಅಂಗವಾಗಿ ಕರ್ತೃ ಗದ್ದುಗೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಉಚಿತ ಸಾಮೂಹಿಕ ವಿವಾಹಗಳು, ಮಹಾರಥೋತ್ಸವ ಜರುಗಲಿದೆ ಎಂದು ವಿವರಿಸಿದರು.
ಗಡಿನಾಡ ಕನ್ನಡ ಸಾಹಿತಿ ನಾ.ಮ. ಮರುಳಾರಾಧ್ಯರ ಪುರಾಣ ಪ್ರವಚನಕ್ಕೆ ಎನ್. ಎಂ. ಜಗದೀಶ ಗವಾಯಿಗಳ ಪುರಾಣ ವಾಚನ ಮತ್ತು ಹಾರ್ಮೋನಿಯಂ, ಶಾಂತವೀರಯ್ಯಸ್ವಾಮಿ ದಿಲ್‍ರುಬಾ, ಅದವಾನಿ ಸಂತೋಷ್ ಕುಮಾರ್ ತಬಲಾಸಾಥ್ ನೀಡಿದರು.
ಶರಣ ಶ್ರೀಕಂಠಯ್ಯಶಾಸ್ತ್ರಿಗಳು, ಶರಣ ಕಲಿಗಣನಾಥಸ್ವಾಮಿ, ಪೇಸಲಬಂಡೆ ವೀರಭದ್ರಗೌಡ, ಶ್ರೀಶರಣ ದೊಡ್ಡಯ್ಯತಾತನವರ ಶಿವಾನುಭವ ಟ್ರಸ್ಟ್ ಪದಾಧಿಕಾರಿಗಳು, ಗ್ರಾಮ ಸೇರಿದಂತೆ ಸುತ್ತಲಿನ ಹಳ್ಳಿಗಳ ಶ್ರೀಮಠದ ಭಕ್ತರು ಭಾಗವಹಿಸಿದ್ದರು.
ವರದಿ ಜಿಲಾನಸಾಬ್ ಬಡಿಗೇರ್
