ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವೃತ್ತಿ, ಪ್ರವೃತ್ತಿಗಳೆರಡರಲ್ಲಿಯೂ ಸೈ ಎನಿಸಿಕೊಂಡ ಬಯಲಬೆಳಕಿನ ಕವಿ – ಎ. ಎಸ್. ಮಕಾನದಾರ

ನೋವಿನ ಸೆಳಕಿನಲ್ಲಿಯೇ ಒಸರುವ ಅದಮ್ಯ ಜೀವನ ಪ್ರೀತಿ, ಬಡತನದ ಬದುಕಿನಲ್ಲಿ ದೊರೆತ ಶ್ರೀಮಂತ ಅನುಭವಗಳ ಬುತ್ತಿ, ಬದುಕಿನ ಬಂಡಿಯ ಸಾಗಿಸಿ ತುತ್ತಿನ ಚೀಲವ ತುಂಬಿಸಲು ಮಾಡಿದ ಹತ್ತು ಹಲವು
ಕೆಲಸಗಳು ಹೊಟ್ಟೆ ತುಂಬಿಸಿದ್ದಕ್ಕಿಂತ ತಲೆಯಲ್ಲಿ ಬದುಕಿನ ವೈವಿಧ್ಯಮಯ ಆಯಾಮಗಳ ವಿವಿಧ ವಿಚಾರಗಳನ್ನು ಭಾವಕೋಶದಲ್ಲಿ ತುಂಬಿಸಿಕೊಂಡವರು. ಸಾಹಿತ್ಯದ ಭಂಡಾರವನ್ನು ಓದಿ ಹೊಸ ವಿಷಯಗಳನ್ನು ಅರಿತು ಕಥೆ, ಕವನಗಳ ರಚನೆಗೆ ಹಾದಿಯನ್ನು ತೋರಿ ಮಸ್ತಕವನ್ನು ತುಂಬಿದ್ದ ಹತ್ತು ಹಲವು ವಿಷಯ ವೈವಿಧ್ಯಗಳು… ಬರೆದಿದ್ದಕ್ಕಿಂತ ಬರೆಸಿದ್ದೇ ಹೆಚ್ಚು ಎಂಬಂತೆ ಪ್ರೋತ್ಸಾಹಿಸುವ ವ್ಯಕ್ತಿತ್ವ, ಜೀವ ಭಾವಗಳ ತಂತಿಯನ್ನು ನುರಿತ ವೈಣಿಕನಂತೆ
ಮಿಡಿದು ಜನರಿಗೆ ಸಾಹಿತ್ಯ ಸುಧೆಯನ್ನು ತುಂಬಿಕೊಟ್ಟವರು, ಅಂತಿಮವಾಗಿ ತಮ್ಮೆಲ್ಲಾ ಕನಸುಗಳನ್ನು ನನಸಾಗಿಸುವ ಸಾಹಿತ್ಯ ಪ್ರಕಾಶನ ಸಂಸ್ಥೆಯನ್ನು ಕಟ್ಟಿ, ಔದ್ಯೋಗಿಕವಾಗಿ ಸರಕಾರಿ ನೌಕರಿಯಲ್ಲಿ ನೆಮ್ಮದಿಯ ಬದುಕನ್ನು, ಇದೀಗ ಪದೋನ್ನತಿಯ ಗೌರವವನ್ನು ಪಡೆದುಕೊಂಡವರು ಎಲ್ಲರ ಅಕ್ಕರೆಯ ಸಕ್ಕರೆಯ ಬಯಲ ಬೆಳಕಿನ ಸಾಹಿತಿ, ಅಕ್ಕಡಿ ಸಾಲಿನ ಕವಿ ಎಂದೇ ಖ್ಯಾತರಾಗಿರುವ ಕಥೆಗಾರ, ಅಂಕಣ ಬರಹಗಾರ, ಪ್ರಕಾಶನಕಾರ, ಸಂಪಾದಕ, ಉಪನ್ಯಾಸಕ ಹೀಗೆ ಹತ್ತು ಹಲವು ಉಪಾದಿಗಳನ್ನು ತಮ್ಮ ಸಾಹಿತ್ಯ ಸೇವೆಯ ಕಿರೀಟದ ಗರಿಗೆ ಸೇರಿಸಿಕೊಂಡವರು ಎ. ಎಸ್.ಮಕಾನದಾರ.

ಮಾನವೀಯ ಸೂಕ್ಷ್ಮ ಸಂವೇದನೆಗಳನ್ನು ಹೊಂದಿದ, ಬದುಕಿನ ಕುರಿತು ಭವ್ಯವಾದ ಕನಸುಗಳನ್ನು ಹೊತ್ತು ಪ್ರೀತಿ-ಪ್ರೇಮ, ಜೀವ-ಭಾವಗಳ ಶುದ್ಧ ಅಂತಃಕರಣವನ್ನು ಓದುಗ ದೊರೆಗಳಿಗೆ ಕಲ್ಪಿಸಿಕೊಟ್ಟ, ತಾನು ಬಡತನವನ್ನು ಉಂಡರೂ ಅದರ ಬೇಗೆಯನ್ನು ತೋರದೆ ಸಾಹಿತ್ಯದ ಮೂಲಕ ಮೃಷ್ಟಾನ್ನದ ಸವಿಯನ್ನು ಉಣ ಬಡಿಸಿದವರು ಮಕಾನದಾರ.

ಇಂದಿನ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬೇಲೂರಿನಲ್ಲಿ ಜನಿಸಿದ ಮಕಾನದಾರ ಅವರ ತಾಯಿ ಮೆಹಬೂಬ ಬಿ ತಂದೆ ಸಯ್ಯದಸಾಬ ಹನ್ನೆರಡು ಜನ ಮಕ್ಕಳಲ್ಲಿ ಒಂಬತ್ತನೆಯವರು ಸದ್ಯ ಓರ್ವ ಅಣ್ಣ, ಅಕ್ಕ, ತಮ್ಮ ಮತ್ತು ತಂಗಿಯರನ್ನು ಹೊಂದಿದ ತುಂಬಿದ ಕುಟುಂಬದ ಮಧ್ಯದ ಮಗ. ತಂದೆ ಹಮಾಲಿ ಕೆಲಸ ಮಾಡಿದರೆ ತಾಯಿ ಮನೆ ಕೆಲಸ ಮಾಡುತ್ತಿದ್ದರು. ಮನೆ ತುಂಬಾ ಮಕ್ಕಳಿರುವ ತುಂಬು ಕುಟುಂಬದ ಮನೆಯಲ್ಲಿ ಒಂದು ಹೊತ್ತಿನ ಊಟಕ್ಕೂ ಒದ್ದಾಡುವಂತಹ ಕಿತ್ತು ತಿನ್ನುವ ಬಡತನ, ತುತ್ತಿನ ಚೀಲ ತುಂಬಿಸಲು ತಮಗೆ ಪಾಠ ಹೇಳಿಕೊಡುತ್ತಿದ್ದ ಶಾಲಾ ಮಾಸ್ತರರ ಮನೆಯಲ್ಲಿ ಮತ್ತು ಹೊಲದಲ್ಲಿ ಚಿಕ್ಕ ವಯಸ್ಸಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಮಕಾನದಾರ ಅವರು ಮುಂದೆ ಯಲಬುರ್ಗಾದ ಅಂಗವಿಕಲ ಟೇಲರ್ ಬಾಶು ಮಿಯಾನ ಅಂಗಡಿಯಲ್ಲಿ ಕಾಜಿಗುಂಡಿ ಮಾಡುವ ಕೆಲಸಕ್ಕೆ ಇದ್ದು ಸರಿಯಾಗಿ ಕಾಜಿ ಗುಂಡಿ ಮಾಡುವ ಕೆಲಸ ನಿರ್ವಹಿಸದೆ ಮಾಲೀಕನ ಸಿಟ್ಟು ಹೊಡೆತಗಳಿಗೆ ಈಡಾಗಿ ಕಣ್ಣೀರಿಟ್ಟದ್ದೂ ಉಂಟು.

ಗಂಗಾವತಿಯ ಮುಲ್ಲಾ ಮೇಸ್ತ್ರಿ ಅವರ ಬಳಿಯಲ್ಲಿ ಮೋಟರ್ ಸೈಕಲ್ ರಿಪೇರಿ ಕೆಲಸ ಕಲಿತು ಕಾರ್ಯನಿರ್ವಹಿಸಿದರು. ಶಾಲೆಯ ರಜಾ ದಿನಗಳಲ್ಲಿ ಹಗಲು ಹೊತ್ತು ಕೂಲಿಯ ಕೆಲಸ ಮಾಡಿದರೆ ಸಂಜೆಯ ಹೊತ್ತು ಮಕ್ಕಳಿಗೆ ಮನೆ ಪಾಠ ಮಾಡಿ ಸಂಪಾದಿಸುತ್ತಿದ್ದರು. ತಾಯಿ ಮತ್ತು ಸಹೋದರಿಯರ ಜೊತೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಮೌಲವ್ವ ಮದಗಾರ್ ಎಂಬವರ ಮನೆಯಲ್ಲಿ ಕಂಡಕಿ ಸುತ್ತುವ ಕೆಲಸವನ್ನು ಕೂಡ ಅವರು ಮಾಡಿದ್ದರು. ಮದಗಾರ ಇಮಾಮ್ ಸಾಬ್ ಮತ್ತು ಹವಾಲ್ದಾರ್ ಮಹಮ್ಮದ್ ಸಾಬ್ ಅವರ ಮನೆಯಲ್ಲಿ ನೇಕಾರಿಕೆಯ ಮೊದಲ ಪಾಠಗಳನ್ನು ಕಲಿತು ಕಾರ್ಯ ನಿರ್ವಹಿಸಿದರು.

ರೈತರ ಕಣಗಳಲ್ಲಿ ಧಾನ್ಯಗಳನ್ನು ಭಿಕ್ಷೆಯಾಗಿ ಕೇಳುವ ಆಯಗಾರರ ಕೆಲಸ, ಎಳನೀರು, ಹಣ್ಣಿನ ವ್ಯಾಪಾರ ಹೀಗೆ ಮನೆಯ ಬಡತನ ನೀಗಲು ಇವರು ಮಾಡಿದ ಕೆಲಸಗಳು ಹಲವಾರು. ವಿದ್ಯಾರ್ಥಿ ದೆಸೆಯಲ್ಲಿಯೇ ಬದುಕಿನ ಪಾಠದ ಜೊತೆಗೆ ಬಡತನ ಕಲಿಸಿದ ಪಾಠಗಳನ್ನು ಅರಗಿಸಿಕೊಂಡು ನೋವು, ಅವಮಾನಗಳನ್ನು ನುಂಗಿ ಬೆಳೆದರು.

ಬಡತನ ಕಲಿಸುವ ಪಾಠಗಳು ಒಂದಲ್ಲ ಎರಡಲ್ಲ…

ಯಾವುದೇ ಶಾಲೆ ಕಾಲೇಜುಗಳು ಕಲಿಸದ ಔದ್ಯೋಗಿಕ ಪಾಠಗಳನ್ನು ಬದುಕಿನ ಅನುಭವಗಳನ್ನು, ಮಾನವೀಯ ಮೌಲ್ಯಗಳನ್ನು, ಮ್ಯಾನೇಜ್ಮೆಂಟ್ ತಂತ್ರಗಳನ್ನು ವ್ಯವಹಾರ ಕೌಶಲ್ಯವನ್ನು
ಬಡತನದ ಬದುಕು ಅವರಿಗೆ ಕಲಿಸಿದೆ ಎಂದರೆ ತಪ್ಪಿಲ್ಲ.

ಗಜೇಂದ್ರಗಡದ ರಾಯಬಾಗಿ ಸಹೋದರರು ಮತ್ತು ಚಾವಡಿಮನೆ ಅವರ ಫ್ಯಾಕ್ಟರಿಯಲ್ಲಿ ಸೀರೆಗೆ ನೂಲು ಹಚ್ಚುವ, ನೂಲಿಗೆ ಬಣ್ಣ ಹಾಕುವ, ಕಂಡಕಿ ಮಾಡುವ ವೈಪಣಿ ಮಾಡುವ ಸೀರೆಯನ್ನು ಘಳಿಗೆ ಮಾಡಿ ಮಡಚುವ ಕೆಲಸಗಳನ್ನು ಕಲಿಯುತ್ತಾ ಮಾಡುತ್ತಾ ತಮ್ಮ ಬದುಕಿನ ಬವಣೆಯ ಹತ್ತು ಹಲವು ಚಿತ್ತಾರಗಳ ಒಂದೊಂದಾಗಿ ಜೋಡಿಸಿ ನಯವಾಗಿ ಹೊಂದಿಸಿ ಸುಂದರವಾಗಿ ನೇಯುತ್ತಾ ಚಂದದ ಬದುಕನ್ನು ಘಳಿಗೆ ಮಾಡಿ ಕಟ್ಟಿಕೊಂಡು ಸದ್ದಿಲ್ಲದ ಸಾಧನೆಯ ಮೂಲಕ, ತಮ್ಮ ಸಾಧನೆ ಅಂದ ಚಂದವನ್ನು ಜಗತ್ತಿಗೆ ಉಣ ಬಡಿಸುತ್ತಿರುವ ಮಕಾನದಾರರ ಜೀವನ ಪ್ರೀತಿ ಅಪಾರ.

ಮುಂದೆ ಕಾಲೇಜು ವಿದ್ಯಾಭ್ಯಾಸಕ್ಕೆ ಅವರು ವೈನ್ ಶಾಪನಲ್ಲಿ, ಬಾರ್ ಗಳಲ್ಲಿ ಕೆಲಸ ಮಾಡಿದರು. ಐಸ್ ಕ್ರೀಮ್ ವ್ಯಾಪಾರವನ್ನು ಕೂಡಾ ಮಾಡಿರುವ ಇವರು ಮನಿಯಾರ ಅವರ ಪುಸ್ತಕದ ಅಂಗಡಿಯವರು ಊಟಕ್ಕೆ ಹೋದಾಗ ಅಲ್ಲಿ ಅಂಗಡಿಯನ್ನು ಕಾಯುತ್ತಾ ಕುಳಿತುಕೊಳ್ಳುವುದರ ಜೊತೆಗೆ ಅಲ್ಲಿದ್ದ ಪುಸ್ತಕಗಳ ಓದಿನಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದರು.
ಪುಟ್ಟ ಯುವಕ ತನ್ನೆಲ್ಲಾ ಬವಣೆಗಳನ್ನು ಪುಸ್ತಕದ ಭಾವ ಲೋಕದಲ್ಲಿ ಮುಳುಗಿ ಮರೆಯುತ್ತಿದ್ದನು.

ಇದಲ್ಲದೆ ಫೈನಾನ್ಸ್ ಗಳಲ್ಲಿ ಪಿಗ್ಮಿ ತುಂಬುವ, ಕಾರಕೂನರಾಗಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ ಅಂತಿಮವಾಗಿ ಮ್ಯಾನೇಜರ್ ಹುದ್ದೆಯನ್ನು ಕೂಡಾ ನಿರ್ವಹಿಸಿದರು.

ಮತ್ತೆ ಕೆಲ ಸಮಯ ಖಾನಾವಳಿಯಲ್ಲಿ, ಸೋಡಾ ಫ್ಯಾಕ್ಟರಿಯಲ್ಲಿ ಕೂಡ ಕಾರ್ಯನಿರ್ವಹಿಸಿದ ಇವರು
ಆಫೀಸರ್ಸ ಕ್ಲಬ್ ಮತ್ತು ಅಬಕಾರಿ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅಬಕಾರಿ ಗುತ್ತಿಗೆದಾರರ ಸಾರಾಯಿ ಪ್ಯಾಕೆಟ್ ವಿತರಣೆಯನ್ನು ಕೂಡ ಮೊರಬ, ಅಣ್ಣಿಗೇರಿ, ನವಲಗುಂದ ಗ್ರಾಮಗಳಲ್ಲಿ ಮಾಡಿರುವ ಇವರು ಕಳ್ಳಬಟ್ಟಿ ಸಾರಾಯಿ ತಯಾರಿಕೆಯನ್ನು ಕೂಡ ಪತ್ತೆ ಹಚ್ಚಿ ಪೊಲೀಸ್ ಇಲಾಖೆ, ಅಬಕಾರಿ ಇಲಾಖೆಯ ಬಾತ್ಮಿದಾರರಾಗಿಯೂ ಕೆಲಸ ಮಾಡಿದ್ದಾರೆ.

ಎ ಗ್ರೇಡ್ ಸ್ಟ್ಯಾಂಪ್ ವೆಂಡರ್ ಆಗಿಯೂ ಕೆಲ ಕಾಲ ದುಡಿದಿದ್ದಾರೆ.
ಹೀಗೆ ಬದುಕು ತನ್ನತ್ತ ಎಸೆದ ಎಲ್ಲಾ ಮೊನಚು ಬಾಣಗಳನ್ನು ಆಯ್ದು ತಮ್ಮ ಬತ್ತಳಿಕೆಯಲ್ಲಿ ಇರಿಸಿಕೊಂಡು ಬದುಕಿನ ವೈವಿಧ್ಯಮಯ ಅನುಭವಗಳು ಕಟ್ಟಿಕೊಟ್ಟ ಎಂದೂ ಮುಗಿಯದ ಬುತ್ತಿಯನ್ನು ಕಥೆ, ಕವನ, ಲೇಖನಗಳ ಮೂಲಕ ಸುಂದರವಾದ ಸಾಹಿತ್ಯವಾಗಿಸಿ ಅದರ ರಸದೌತಣವನ್ನು ಸಾಹಿತ್ಯಾಸಕ್ತರಿಗೆ ಉಣಬಡಿಸಿದ್ದಾರೆ.

‘ಬಡತನದ ಅನುಭವವನ್ನು ಕವಿ ಬರೆಯಬೇಕು, ಹಾಡುಗಾರ ಹಾಡಬೇಕು ಮತ್ತು ಕಲಾವಿದ ನಟನೆಯ ಮೂಲಕ ಅಭಿವ್ಯಕ್ತಿಸಬೇಕು’ ಎಂಬ ರೀತಿಯಲ್ಲಿ ತಮ್ಮ ಬದುಕಿನ ಗಾಢ ಅನುಭವದ ಸಾರವನ್ನು ವೈವಿಧ್ಯಮಯ ಸಾಹಿತ್ಯಕ ಹಿನ್ನೆಲೆಗಳಲ್ಲಿ ಒದಗಿಸಿರುವ
ಮಕಾನದಾರ ಅವರು ಮಾನವೀಯ ಮೌಲ್ಯಗಳನ್ನು ಬಿತ್ತುವ, ಮೃದು ಮತ್ತು ಮಿತ ಭಾಷಿಯಾದ ಭರವಸೆಯ ಬರಹಗಾರರಾಗಿ ರೂಪುಗೊಂಡರು.

ತಂಗಿಯ ಮದುವೆಗಾಗಿ ಸ್ನೇಹಿತರ ಸಹಾಯ ಪಡೆದ ಇವರಿಗೆ ಬೂಂದಿ ತಯಾರಿಸಲು ಸಕ್ಕರೆಯನ್ನು ಉಚಿತವಾಗಿ ಕೊಟ್ಟ ಅಶೋಕ್ ರಂಗ್ರೇಜಿ, ಹಣ ಸಹಾಯ ಮಾಡಿದ ಸ್ನೇಹಿತರನ್ನು
ನೆನೆಯುವ ಇವರು ತಮ್ಮ ಶಿಕ್ಷಕರಾದ ಕೆ.ಎಸ್. ಗಾರವಾಡ ಹಿರೇಮಠ ಅವರ ಮಾರ್ಗದರ್ಶನದಲ್ಲಿ ಉದ್ಯೋಗ ವಿನಿಮಯ ಕಚೇರಿಯಲ್ಲಿ ತಮ್ಮ ಹೆಸರನ್ನು ನೋಂದಣಿ ಮಾಡಿಸಿದರು. ಮುಂದೆ ಕಾಲೇಜು ವಿದ್ಯಾಭ್ಯಾಸವನ್ನು ಪೂರೈಸಿದ ನಂತರ ಪ್ರತಿ ನೌಕರಿಯ ಸಂದರ್ಶನಕ್ಕೆ ಹೋಗಲು ಹಾಸ್ಟೆಲ್ ನ ಅಡುಗೆಯವರಾಗಿದ್ದ ಎನ್. ಎಸ್. ಪಾಟೀಲ ಎತ್ತಿನ ಗುಡ್ಡ, ಸಹೋದರಿ ಸ್ವರೂಪ ರೇಣುಕಾ ಮಾದಗುಂಡಿ ಮತ್ತು ಇನ್ನೋರ್ವ ಹಿರಿಯ ಸ್ನೇಹಿತ ಉಡಚಪ್ಪ ಆರ್. ಚನ್ನಮ್ಮನವರ್ ಸಹಾಯ, ಮಾರ್ಗದರ್ಶನಗಳನ್ನು ಮರೆಯಲು ಸಾಧ್ಯವಿಲ್ಲ ಎಂದು ನೆನೆಯುತ್ತಾರೆ.

ಇವೆಲ್ಲದರ ನಡುವೆ ಇವರ ವಿವಾಹ ನಿಷ್ಕರ್ಶೆಯಾದಾಗ ಮದುಮಗನ ಬಟ್ಟೆಗಳನ್ನು ಖರೀದಿಸಲು ಕೂಡ ಹಣವಿಲ್ಲದೆ ಸ್ನೇಹಿತನ ಹೊಸ ಬಟ್ಟೆಗಳನ್ನು ಧರಿಸಿ, ಹಳೆಯ ವಾಚನ್ನು ಪಾಲಿಶ್ ಮಾಡಿಸಿ ಅದನ್ನೇ ಹಾಕಿಕೊಂಡರು. ಆತ್ಮೀಯ ಸ್ನೇಹಿತ ಚೆನ್ನಮ್ಮನವರ್ ಅವರ ಒಂದು ತೊಲೆ ತೂಕದ ಚಿನ್ನದ ಚೈನನ್ನು ಧರಿಸಿ ನಿಖಾಹ ಮಾಡಿಕೊಂಡದ್ದು ಅವರ ಜೀವನದ ಅವಿಸ್ಮರಣೀಯ ಘಟನೆ.

ಇಷ್ಟೆಲ್ಲಾ ಕಷ್ಟ ನೋವುಗಳ ನಡುವೆ ಹತ್ತು ಹಲವು ಕೆಲಸಗಳ ನಡುವೆ ಓದನ್ನು ಪೂರೈಸಿ ಅಂತಿಮವಾಗಿ ನ್ಯಾಯಾಂಗ ಇಲಾಖೆಯ ಆದೇಶಿಕ ಜಾರಿಕಾರನಾಗಿ ಸರ್ಕಾರಿ ಹುದ್ದೆ ದೊರೆತಾಗ ನೆಮ್ಮದಿಯ ನಿಟ್ಟುಸಿರು ಬಿಟ್ಟರು.

ಸೂಫಿ ಸಂತರ ಪ್ರೇಮ ತತ್ವ ಮತ್ತು ಶರಣ,ಮಹಾಂತರ
ಮಾನವೀಯ ತತ್ವಗಳ ಸಮನ್ವಯತೆಯನ್ನು ತಮ್ಮ ಕವನಗಳಲ್ಲಿ ಒಡಮೂಡಿಸಿರುವ ಮಕಾನದಾರರು ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಪ್ರದೇಶ ಮುಂತಾದ ರಾಜ್ಯಗಳಲ್ಲಿ ನಡೆದಿರುವ ಹಲವಾರು
ಸಾಹಿತ್ಯ ಸಮ್ಮೇಳನಗಳಲ್ಲಿ ಗೋಷ್ಠಿಗಳಲ್ಲಿ ತಮ್ಮ ಕವನಗಳನ್ನು ವಾಚಿಸುವ ಮೂಲಕ ಕಾವ್ಯಪ್ರಿಯರ ಗಮನ ಸೆಳೆದಿದ್ದಾರೆ.

ಹದಿಮೂರು ಸ್ವತಂತ್ರ ಕೃತಿಗಳನ್ನು ಇಪ್ಪತ್ತೆರಡು ಸಂಪಾದಿತ ಕೃತಿಗಳನ್ನು ರಚಿಸಿರುವ ಮಕಾನದಾರರು ಪ್ರೀತಿ ಪ್ರೇಮ, ಭಗ್ನತೆ, ವಿರಹ ತಾಯಿ, ಬಡತನಗಳ ಕುರಿತು ರಚಿಸಿರುವ ಹಲವಾರು ಕವನಗಳು ಸಹೃದಯರ ಮನಸ್ಸನ್ನು ಸೆಳೆದಿದೆ. ಭಗ್ನ ಪ್ರೇಮವನ್ನು ಹೀಗೂ ವರ್ಣಿಸಬಹುದೇ ಎಂಬ ಭಾವವನ್ನು ಮೂಡಿಸಿವೆ. ತನ್ನೊಳಗಿನ ನೋವನ್ನು ಹಸಿರಾಗಿಸುವ ಪುಟ್ಟ ಹನಿಗವಿತೆಗಳನ್ನು ನೇಯ್ದಿರುವ ಕವಿಯ ಜಾಣ್ಮೆಯನ್ನು ಎಷ್ಟು ಹೊಗಳಿದರೂ ಸಾಲದು.

ಪ್ರೇಮ ಕಾವ್ಯವನ್ನು ಮರಳಿನಲ್ಲಿ ಬರೆದೆ ಎಂಬ ಕವಿಯ
ಅದ್ಭುತ ಶಬ್ದಗಳ ಚಮತ್ಕಾರಿಕ ಗಾರುಡಿ ಕವನಗಳ ಶ್ರೀಮಂತಿಕೆಗಳನ್ನು ಹೆಚ್ಚಿಸಿದೆ. ಕಾವ್ಯದ ಔನ್ನತ್ಯದ ಎಲ್ಲಾ ಮಗ್ಗುಲುಗಳನ್ನು ಯಥೋಚಿತವಾಗಿ ಬಳಸಿಕೊಂಡಿರುವ ಕವಿಯ ಕೌಶಲ್ಯ ಅದ್ಭುತವಾದದ್ದು.

ಹಾಯ್ ಬೆಂಗಳೂರು, ಕರ್ಮವೀರ, ಪ್ರಜಾವಾಣಿ, ವಿಶ್ವವಾಣಿ, ಹೊಸತು ಮತ್ತು ಸಾಹಿತ್ಯ ಅಕಾಡೆಮಿಯಿಂದ ಪ್ರಕಟವಾಗುವ ಅನಿಕೇತನ ಮುಂತಾದ ಪತ್ರಿಕೆಗಳಲ್ಲಿ ಇವರ ಕಥೆ,ಕವನ ಮತ್ತು ಲೇಖನಗಳು ಪ್ರಕಟವಾಗಿವೆ.

ಎದೆಯ ಸುಡುವ ನೆನಪುಗಳು, ಸಖೀ ಸಖ, ಕೆಳಗಲ ಮನಿ ಮಾಬವ್ವ ಮತ್ತು ಇತರ ಕವಿತೆಗಳು, ಒಂದು ಮೌನದ ಬೀಜ, ಅಕ್ಕಡಿ ಸಾಲು, ಮೂರು ದಶಕದ ಕಾವ್ಯ, ಪ್ಯಾರಿ ಪದ್ಯ. ದರ್ವೇಶಿ ಪದ್ಯ, ಉಸಿರ ಗಂಧ ಸೋಕಿ ಇವುಗಳು ಮಕಾನದಾರರ ಕಾವ್ಯ ಸಂಕಲನಗಳಾಗಿವೆ.
ಬೆಳಕಿನ ಹಾಡು, ಸೌಹಾರ್ದ ಸಂಗಮ, ಬೊಗಸೆ ತುಂಬಾ ಬಯಲು, ಕತ್ತಲೂರಿನ ಬೆಳಕು (ರಾಜ್ಯಮಟ್ಟದ ಪ್ರಾತಿನಿಧಿಕ ಕಥಾ ಸಂಕಲನಗಳು), ಅಲಿಯವರ ಮಕ್ಕಳ ನೀತಿ ಕಥೆಗಳು ಸಂಪಾದಿತ ಕೃತಿಗಳಾಗಿವೆ.
ಮನುಷ್ಯ ಪ್ರೇಮ ಕದ ತೆರೆಯುವ ಹೊತ್ತಿಗೆ ( ವಿಮರ್ಶೆ), ಸೂಫಿ ಸಾಹಿತ್ಯ (ಅಭಿನಂದನಾ ಗ್ರಂಥ) ಗಳನ್ನು ಕೂಡ ಸಂಪಾದಿಸಿದ್ದಾರೆ.

ಗದಗ. ಧಾರವಾಡ ಮತ್ತು ಮಡಿಕೇರಿಗಳಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ, ಆಳ್ವಾಸ್ ನುಡಿಸಿರಿಯಲ್ಲಿ, ಚಾಲುಕ್ಯ ಉತ್ಸವ ಹಂಪಿ ಉತ್ಸವ ಮೈಸೂರು ದಸರಾ ಉತ್ಸವ, ಲಕ್ಕುಂಡಿ ಉತ್ಸವ, ಇಟಗಿ ಉತ್ಸವ ಹೀಗೆ ನೂರಕ್ಕೂ ಹೆಚ್ಚು ಕವಿಗೋಷ್ಠಿಯಲ್ಲಿ ಭಾಗವಹಿಸಿ ಕವನ ವಾಚನ ಮಾಡಿರುವ ಮಕಾನದಾರ ಅವರ ಅಮ್ಮನ ಬಿಕ್ಕಳಿಕೆ ನಿಲ್ಲಿಸುವಿರಾ?
ಎಂಬ ಕವನ ಕುವೆಂಪು ವಿಶ್ವವಿದ್ಯಾಲಯದ ಬಿ ಎ, ಬಿಎಸ್ಸಿ, ಬಿ ಕಾಂ ಮತ್ತು ಬಿ ಎಸ್ ಡಬ್ಲ್ಯೂ ಪದವಿ ತರಗತಿಯ ಮೊದಲ ಸೆಮಿಸ್ಟರಿಗೆ ಪಠ್ಯವಾಗಿದೆ. ಬಳ್ಳಾರಿಯ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಮತ್ತು ಕಲ್ಬುರ್ಗಿ ವಿಶ್ವವಿದ್ಯಾಲಯದ ಎಂ ಬಿ ಎ ಎರಡನೇ ವರ್ಷಕ್ಕೆ ಸಂಬಂಧ ಪತ್ರಿಕೆಯಲ್ಲಿ ಪ್ರಕಟವಾದ ‘ಹೆಕ್ಕಿ ತೆಗೆದ ಮುತ್ತುಗಳು’ ಎಂಬ ಪತ್ರ ಲೇಖನ ಪಠ್ಯವಾಗಿದೆ.

ನಿರಂತರ ಪ್ರಕಾಶನವನ್ನು ಆರಂಭಿಸಿರುವ ಮಕಾನದಾರರು ಯುವ ಬರಹಗಾರರ ಪುಸ್ತಕಗಳನ್ನು ಪ್ರಕಟಿಸಿ ಪ್ರೋತ್ಸಾಹಿಸಿದ್ದಾರೆ. ಮಕಾನದಾರ ಸಾಹಿತ್ಯ ಪ್ರತಿಷ್ಠಾನವನ್ನು ಸ್ಥಾಪಿಸಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಗುರುತಿಸಿ ಸನ್ಮಾನಿಸಿದ್ದಾರೆ.

ವಿಶೇಷವಾಗಿ ಸೂಫಿ ಸಂತರ ಕುರಿತ ಹಲವಾರು ಉಪನ್ಯಾಸಗಳನ್ನು ಮಾಡಿರುವ ಮಕಾನದಾರ ಅವರು ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಇವರ ಸಾಹಿತ್ಯ ಸೇವೆಯನ್ನು ಗುರುತಿಸಿ ಸಂಕ್ರಮಣ ಪ್ರಶಸ್ತಿ, ಜಿಲ್ಲಾ ಸರ್ವೋತ್ತಮ ಪ್ರಶಸ್ತಿ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯಮಟ್ಟದ
ಅಣಿಮಾನಂದ ಸದ್ಭಾವನ ಸಾಹಿತ್ಯ ಪ್ರಶಸ್ತಿ, ಸಂತ ಶಿಶುನಾಳ ಭಾವೈಕ್ಯತಾ ಪುರಸ್ಕಾರ, ಕರುನಾಡ ಸಿರಿ ರಾಷ್ಟ್ರೀಯ ಯುವ ಸಂಸ್ಕೃತಿ ಅಕಾಡೆಮಿ ಪುರಸ್ಕಾರ, ವೀರರಾಣಿ ಕಿತ್ತೂರು ಚೆನ್ನಮ್ಮ ಪ್ರಶಸ್ತಿ, ಸುವರ್ಣ ಕರ್ನಾಟಕ ಪ್ರಶಸ್ತಿ, ಕರುನಾಡ ಪದ್ಮಶ್ರೀ ಮುಂತಾದ ಪ್ರಶಸ್ತಿಗಳು ಇವರ ಮಡಿಲನ್ನು ಸೇರಿವೆ.

ಸಾಹಿತ್ಯದ ಜೊತೆ ಜೊತೆಗೆ ಗದಗ ಜಿಲ್ಲಾ ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿರುವ ಅಬ್ದುಲ್ ಸಾಬ್ ಸೈಯದ್ ಸಾಬ್ ಮಕಾನದಾರ ಅವರು ಈ ಹಿಂದೆ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಪುರಸ್ಕೃತರಾಗಿ ಆಯ್ಕೆಯಾಗಿದ್ದರು. ವೃತ್ತಿ ಮತ್ತು ಪ್ರವೃತ್ತಿಗಳೆರಡರಲ್ಲಿಯೂ ಅವರು ಸಮನ್ವಯವನ್ನು ಸಾಧಿಸಿ ತಮ್ಮ ವೃತ್ತಿಪರ ಜವಾಬ್ದಾರಿಗಳನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ. ತಮ್ಮ ಎಲ್ಲ ಯಶಸ್ಸಿನ ಹಿಂದೆ ತಮ್ಮ ಪಾಲಕರ ಆಶೀರ್ವಾದ ಪತ್ನಿ ಮತ್ತು ಇಬ್ಬರು ಮಕ್ಕಳ ನಿರಂತರ ಸಹಕಾರವನ್ನು, ವೃತ್ತಿ ಮತ್ತು ಪ್ರವೃತ್ತಿಯಲ್ಲಿ ತಮಗೆ ಸಹಾಯ, ಸಹಕಾರ ನೀಡುವ ವೃತ್ತಿಬಾಂಧವರನ್ನು ನೆನೆಯುವ ಮಕಾನದಾರರು ತಮ್ಮ ಬಡತನದ ನೋವಿನ ದಿನಗಳಲ್ಲಿ ತಮಗೆ ಆರ್ಥಿಕವಾಗಿ, ಭಾವನಾತ್ಮಕವಾಗಿ ಸಹಾಯ ಸಹಕಾರ ನೀಡಿದ ಎಲ್ಲರನ್ನೂ ನೆನೆದು ಅವರೆಲ್ಲರ ಋಣ ನನ್ನ ಮೇಲಿದೆ ಎಂದು ಪ್ರಾಂಜಲ ಮನಸ್ಸಿನಿಂದ ನೆನೆಯುತ್ತಾರೆ. ಕೌಟುಂಬಿಕವಾಗಿಯು ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಬದುಕುವ ಮಕಾನದಾರರು
ಒಂದೊಮ್ಮೆ ಮನೆಯಲ್ಲಿ ನಡೆದ ಕೌಟುಂಬಿಕ ಜಗಳ ವೈಪರೀತ್ಯಕ್ಕೆ ಹೋದಾಗ ಡಾಕ್ಟರ್ ರಾಜಕುಮಾರ್ ಅಭಿನಯದ ಜೀವನ ಚೈತ್ರದ ಚಲನಚಿತ್ರ ಮಾದರಿಯಲ್ಲಿ ಮನೆಯಿಂದ ಹೊರಬಂದು ತಮ್ಮನ್ನು ತಾವು ಸಂತೈಸಿಕೊಂಡರು.

ಬದುಕಿನ ಬವಣೆಗಳ ಒಟ್ಟು ಮೊತ್ತವನ್ನು ಅನುಭವಿಸುತ್ತಲೇ ಸುಂದರವಾದ ಸಾಹಿತ್ಯಕ ಬದುಕನ್ನು ಕಟ್ಟಿಕೊಂಡವರು ಮಕಾನದಾರರು. ಬದುಕಿನಲ್ಲಿ ಆದರ್ಶಗಳನ್ನು ಇಟ್ಟುಕೊಂಡು ಹೊಸ ಸಮಾಜವನ್ನು ಕಟ್ಟುವ ನಿಟ್ಟಿನಲ್ಲಿ ಸಾಹಿತ್ಯ ಸೃಷ್ಟಿಸಿದ ಮಕಾನದಾರರು. ಹಲವಾರು ಒತ್ತಡಗಳ ನಡುವೆಯೂ ಮೌಲ್ಯಗಳೊಂದಿಗೆ ರಾಜಿಯಾಗದೆ ತಮ್ಮತನವನ್ನು ಬಿಟ್ಟುಕೊಡದೆ ಸೃಜನಶೀಲ ವ್ಯಕ್ತಿತ್ವವನ್ನು ಹಾಸಿ ಹೊದ್ದುಕೊಂಡವರು. ಮಕಾನದಾರರು ಕೇವಲ ತಾವು ಮಾತ್ರ ಬೆಳೆಯಲಿಲ್ಲ, ತಮ್ಮ ಸುತ್ತ ಇರುವವರನ್ನು ಪ್ರೋತ್ಸಾಹಿಸಿ ಬೆನ್ನು ತಟ್ಟಿ ಬರೆಸಿ ಬೆಳೆಸಿದರು. ಅವರ ಲೇಖನಗಳನ್ನು ಪ್ರಕಾಶನ ಸಂಸ್ಥೆಯ ಮೂಲಕ ಹೊರ ತಂದರು.

ವೃತ್ತಿ ಪ್ರವೃತ್ತಿಗಳ ಜೊತೆ ಜೊತೆಗೆ ಸಾಮಾಜಿಕ ಸೇವೆಯಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಮಕಾನದಾರರು ಕಳೆದ ಏಳು ತಿಂಗಳಿಂದ ಪ್ರತಿ ವಾರ ಹಲವು ಜನರಿಗೆ ಊಟದ ಕಿಟ್ ಗಳನ್ನು ಬಸ್ ಸ್ಟ್ಯಾಂಡ್ ರೈಲ್ವೆ ಸ್ಟೇಷನ್, ಆಸ್ಪತ್ರೆ ಮುಂತಾದ ಜನನಿಬಿಡ ಪ್ರದೇಶಗಳಲ್ಲಿ ನ್ಯಾಯವಾದಿ ಎಸ್ ಕೆ ನದಾಫ್, ಎಂ.ಜಿ.ಮುಲ್ಲಾ, ಧರ್ಮ ಗುರುಗಳಾದ ರಫೀಕ್ ಮೌಲಾನ ರಾಜೇಸಾಬ್ ಅಣ್ಣಿಗೇರಿ ಮತ್ತು ಮಕ್ತುಮ್ ಜೋಹರಂ ಅವರ ಮಾರ್ಗದರ್ಶನ ಮತ್ತು ಸಹಕಾರದೊಂದಿಗೆ ನಿರಂತರವಾಗಿ ವಿತರಿಸುವ ಕಾರ್ಯದಲ್ಲಿ ಕೈ
ಜೋಡಿಸಿದ್ದಾರೆ.
ನ್ಯಾಯಾಂಗ ಇಲಾಖೆಯ ನೌಕರ ಬಂಧುಗಳ ಮುಖವಾಣಿ ಸಂಬಂಧ ಪತ್ರಿಕೆಯ ಅಂಕಣ ಬರಹಗಾರರಾಗಿ ಮುತ್ತಿನ ತೆನೆ ಸಂಕಲನ, ನ್ಯಾಯಾಂಗ ಇಲಾಖೆಯ ಪ್ರಾತಿನಿಧಿಕ ಕವನ ಸಂಕಲನ ‘ಕಣ್ಣ ಹಿಗ್ಗಿನ ತ್ವಾಟ’ ಡಾ. ಎಸ್ ಟಿ ಸೋಮಶೇಖರ್ ಅವರ ಜೊತೆಗೂಡಿ ಮತ್ತು ಕಥಾ ಸಂಕಲನ ‘ಬಂಧನದಿಂದ ಬಯಲಿಗೆ’ ಈ ಮೂರು ಮಹತ್ವ ದ ಸಂಕಲನಗಳು ಇಲಾಖೆಯ ಸಾಧಕ ಬರಹಗಾರರಿಗೆ ವೇದಿಕೆ ಕಲ್ಪಿಸಿ ಕೊಟ್ಟ ಶ್ರೇಯಸ್ಸು ಮಕಾನದಾರ ಅವರಿಗೆ ಸಲ್ಲುತ್ತದೆ

ಇದೀಗ ಅತ್ಯುತ್ತಮವಾಗಿ ಕರ್ತವ್ಯವನ್ನು ನಿರ್ವಹಿಸಿರುವ ರಾಜ್ಯ ಸರಕಾರಿ ನೌಕರರಿಗೆ ನೀಡುವ 2023 ನೇ ಸಾಲಿನ ರಾಜ್ಯಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಯು ಮಕಾನದಾರರಿಗೆ ಲಭಿಸಿದ್ದು ಅರ್ಹತೆಗೆ ಸಂದ ಗೌರವವಾಗಿದೆ.
ಅವರ ಸಾಹಿತ್ಯಕ ಮತ್ತು ವೈಯುಕ್ತಿಕ ಸಾಧನೆಗಳು ಹೀಗೆ ನಿತ್ಯ ನಿರಂತರವಾಗಿ ನಡೆಯುತ್ತಿರಲಿ ಎಂದು ಹಾರೈಸುವ…

  • ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ, ಗದಗ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ