ವಿಜಯನಗರ :ಕಳೆದ ವರ್ಷ ಆಗಸ್ಟ್ 10 ರಂದು ರಾತ್ರಿ 105.788 ಟಿಎಂಸಿ ಸಂಗ್ರಹ ಸಾಮರ್ಥ್ಯದ ಡ್ಯಾಮ್ ಗರಿಷ್ಠ ಸಂಗ್ರಹ ಮಟ್ಟ ದಾಖಲಾಗಿದ್ದ ದಿನವೇ 19ನೇ ಕ್ರಸ್ಟ್ ಗೇಟ್ ಕೊಚ್ಚಿಕೊಂಡು ಹೋಗಿತ್ತು. ಆ ಬಳಿಕ ಇಡೀ ಜಲಾಶಯದ ಸದೃಢತೆ ಬಗ್ಗೆಯೇ ಅನುಮಾನದ ಮಾತುಗಳು ಕೇಳಿ ಬಂದಿದ್ದವು. ಅದೇ ವಾರದಲ್ಲಿ 19ನೇ ಗೇಟ್‌ಗೆ ತಾತ್ಕಾಲಿಕವಾಗಿ ಸ್ಟಾಪ್ ಲಾಗ್ ಅಳವಡಿಸಿ ನೀರು ಪೋಲಾಗುತ್ತಿರುವುದನ್ನು ತಡೆಯಲಾಗಿತ್ತು. ಆ ನಂತರ ಮತ್ತೆ ಜಲಾಶಯ ಭರ್ತಿಯಾಗಿದ್ದರಿಂದ ಗೇಟ್ ಕಳಚಿ ಬೀಳಲು ಕಾರಣಗಳೇನು ಮತ್ತು ಸದ್ಯ ಡ್ಯಾಮ್ ಸ್ಥಿತಿಗತಿ ಕುರಿತು ತಜ್ಞರ ತಂಡಗಳಿಂದ ಅಧ್ಯಯನ ನಡೆಸಲಾಗಿತ್ತು. ಪ್ರಸ್ತುತ ಗೇಟ್‌ಗಳ ಅಳವಡಿಕೆಗೆ ಕಾರ್ಯ ಚುರುಕು ನಡೆದಿದೆ.
ಕರ್ನಾಟಕ-ಆಂಧ್ರ ಪ್ರದೇಶ ರಾಜ್ಯಗಳ ರೈತರ ಜೀವನಾಡಿ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಸೇರಿದಂತೆ ಎಲ್ಲಾ 33 ಗೇಟ್‌ಗಳನ್ನು ಇದೇ ವರ್ಷದಲ್ಲಿ ಬದಲಿಸಲು ತುಂಗಭದ್ರಾ ಮಂಡಳಿ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಈಗಾಗಲೇ ಟೆಂಡರ್ ಪ್ರಕ್ರಿಯೆ ಆರಂಭಿಸಿದೆ.
ಅಚ್ಚುಕಟ್ಟು ಪ್ರದೇಶದ ರೈತರಿಗೆ ಎರಡು ಬೆಳೆಗಳಿಗೆ ಸಮರ್ಪಕವಾಗಿ ನೀರು ನೀಡಿದ ನಂತರ ಇದೀಗ ಡ್ಯಾಮ್ ಒಡಲು ಖಾಲಿಯಾಗಿದ್ದು, ಪ್ರಸ್ತುತ ಗೇಟ್‌ಗಳ ಬದಲಾವಣೆ ಬಗ್ಗೆ ಚುರುಕಿನ ಕೆಲಸಗಳು ನಡೆಯುತ್ತಿವೆ.
ಹೊಸ ಗೇಟ್ ಅಳವಡಿಕೆ ಪ್ರಕ್ರಿಯೆ ಶುರು:
ಟಿಬಿ ಡ್ಯಾಮ್‌ನ 19ನೇ ಕ್ರಸ್ಟ್ ಗೇಟ್‌ಗೆ ಟೆಂಡರ್ ನೀಡಲಾಗಿದ್ದು, ಇದೀಗ ಉಳಿದ 32 ಗೇಟ್‌ಗಳನ್ನು ಬದಲಿಸಿ ನೂತನ ಗೇಟ್ ಅಳವಡಿಸುವ ಪ್ರಕ್ರಿಯೆ ಆರಂಭವಾಗಿದೆ. ಜಲಾಶಯ ಗೇಟ್ ತಜ್ಞ ಕನ್ಹಯ್ಯ ನಾಯ್ಡು ಅವರ ಮಾರ್ಗದರ್ಶನದಲ್ಲಿ ತುಂಗಭದ್ರಾ ಮಂಡಳಿ ಅಧಿಕಾರಿಗಳು 80 ಕೋಟಿ ರೂ.ಗೆ ಟೆಂಡರ್ ಆಹ್ವಾನಿಸಿದ್ದಾರೆ. ಏ.19ರಿಂದ 25ರವರೆಗೆ ಟೆಂಡರ್ ದಾಖಲಿಸಲು ಅವಕಾಶ ನೀಡಲಾಗಿದೆ. ಏ.28ರಂದು ಟೆಂಡರ್ ಓಪನ್ ಮಾಡಿ ಮೇ 2ರಂದು ಕಾಮಗಾರಿಗಳನ್ನು ಗುತ್ತಿಗೆದಾರರಿಗೆ ನೀಡಲಿದ್ದಾರೆ.
ಟಿಬಿ ಡ್ಯಾಮ್‌ನ 33 ಕ್ರಸ್ಟ್ ಗೇಟ್‌ಗಳ ಪೈಕಿ 19ನೇ ಕ್ರಸ್ಟ್ ಗೇಟ್ ನಿರ್ಮಾಣಕ್ಕೆ ಈಗಾಗಲೇ ಅಹಮದಾಬಾದ್ ಮೂಲದ ಕಂಪನಿಗೆ ಟೆಂಡರ್ ನೀಡಲಾಗಿದೆ. ಇನ್ನೇನು ಇನ್ನೊಂದು ವಾರದಲ್ಲಿ 1.98 ಕೋಟಿ ರೂ. ಮೊತ್ತದ ಟೆಂಡರ್ ಪಡೆದಿರುವ ಹಾರ್ಡ್ ವೇರ್ ಟೂಲ್ಸ್ ಮಿಷನರಿ ಅಂಡ್ ಪ್ರೊಜೆಕ್ಟ್ ಪ್ರೈವೇಟ್ ಲಿಮಿಟಡ್ ಕಂಪನಿ ನೂತನ ಗೇಟ್ ಅಳವಡಿಕೆಗೆ ಸಂಬಂಧಿಸಿದ ಕೆಲಸಗಳನ್ನು ಶುರು ಮಾಡಲು ಅಗತ್ಯ ಪ್ರಕ್ರಿಯೆ ಆರಂಭಿಸಿದೆ. ಮೇ-ಜೂನ್‌ನೊಳಗಾಗಿ ಕಾಮಗಾರಿ ಮುಗಿಸಬೇಕೆಂದು ಒಪ್ಪಂದ ಮಾಡಿಕೊಳ್ಳಲಾಗಿದೆ.
ಉಳಿದ 32 ಗೇಟ್‌ಗಳನ್ನು 2026 ಜೂನ್ ಒಳಗೆ ಬದಲಿಸಲು ಕೆಲಸ ನಡೆದಿದೆ. ಕಳೆದ 70 ವರ್ಷಗಳ ಹಿಂದೆ ನಿರ್ಮಾಣ ಮಾಡಿರುವ 33 ಕ್ರಸ್ಟ್ ಗೇಟ್ ಈಗಾಗಲೇ ಶೇ. 30ರಿಂದ 50ರಷ್ಟು ಬಲಹೀನಗೊಂಡಿರುವುದು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮೂಲಕ ತಜ್ಞರು ಗುರುತಿಸಿರುವುದು ಈಗಾಗಲೇ ತಿಳಿದಿರುವ ವಿಚಾರ. ಈಗ ಒಟ್ಟಾರೆ ಎಲ್ಲ ಗೇಟ್‌ಗಳನ್ನು ಬದಲಿಸಿ ನೂತನ ಅಳವಡಿಕೆ ಕಾಮಗಾರಿಯನ್ನು ಮುಂದಿನ 15 ತಿಂಗಳ ಒಳಗೆ ಮುಗಿಸಲು ಚಿಂತನೆ ನಡೆದಿದೆ ಎಂದು ತುಂಗಭದ್ರಾ ಮಂಡಳಿ ಮೂಲಗಳಿಂದ ತಿಳಿದು ಬಂದಿದೆ.
ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಕಾಮಗಾರಿಗೆ ಈಗಾಗಲೇ ಟೆಂಡರ್ ನೀಡಿದ್ದು, ಉಳಿದ 32 ಕ್ರಸ್ಟ್ ಗೇಟ್‌ನ್ನು ನೂತನವಾಗಿ ಅಳವಡಿಸಲು ಟೆಂಡರ್ ಆಹ್ವಾನಿಸಲಾಗಿದೆ ಎನ್ನುತ್ತಾರೆ ನಾರಾಯಣ ನಾಯ್ಕ್, ಎಸ್‌ಇ, ತುಂಗಭದ್ರಾ ಮಂಡಳಿ.
ವರದಿ : ಜಿಲಾನಸಾಬ್ ಬಡಿಗೇರ್.
