ನಿನ್ನೆ ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶ್ರೀ ಗ್ರಾಮ ದೇವತೆ ಊರಮ್ಮ ದೇವಿಯ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಶಾಸಕ ಎನ್.ಟಿ. ಶ್ರೀನಿವಾಸ್ ಮಾತನಾಡಿದರು.
ಜಾತ್ರಾ ಮಹೋತ್ಸವಕ್ಕೆ ಮೆರಗು ಬರಬೇಕಾದರೆ ಸಾಮರಸ್ಯ, ಸಹ ಬಾಳ್ವೆ ಐಕ್ಯತೆಯಿಂದ ಎಲ್ಲರೂ ಸೇರಿ ಒಟ್ಟಾಗಿ ಜಾತ್ರೆ ಮಾಡೋಣ, ಪಟ್ಟಣದ ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪ ಅಲಂಕಾರ, ಕುಡಿಯುವ ನೀರು, ಭದ್ರತೆ, ವಾಹನ ನಿಲ್ಲುಗಡೆ ವ್ಯವಸ್ಥೆ, ಸಾರ್ವಜನಿಕರ ಕುಂದು ಕೊರತೆಗಳ ಸಹಾಯವಾಣಿ, ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ತುರ್ತು ಸೇವೆಗಾಗಿ ಆಂಬುಲೆನ್ಸ್ ವ್ಯವಸ್ಥೆ, ಮನೋರಂಜನೆಗಾಗಿ ಸಂಗೀತ ಕಾರ್ಯಕ್ರಮಗಳು ಸೇರಿದಂತೆ ಇನ್ನಿತರ ಕಾರ್ಯಗಳನ್ನು ಅಚ್ಚುಕಟ್ಟಾಗಿ ಮಾಡೋಣ, ಜೆಸ್ಕಾಂ ಇಲಾಖೆಯವರು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗದಂತೆ ನೋಡಿಕೊಳ್ಳಬೇಕು ಎಂದರು. ಇದೇ ತಿಂಗಳು 23 ರಂದು ನಡೆಯುವ ಶ್ರೀ ಗುಳೇ ಲಕ್ಕಮ್ಮ ಜಾತ್ರೆ ಸಂದರ್ಭದಲ್ಲಿ ಪಟ್ಟಣದ ಜನರೆಲ್ಲರೂ ಊರು ಹೊರಗಿನ ಹೊಲ ತೋಟಗಳಲ್ಲಿ ಬಿಡಾರ ಹೂಡುವುದರಿಂದ ಎಲ್ಲೂ ಕೂಡಾ ಅಹಿತಕರ ಘಟನೆ ನಡೆದಂತೆ ಪೊಲೀಸ್ ರಕ್ಷಣಾ ಇಲಾಖೆ ನೋಡಿಕೊಳ್ಳಬೇಕು, ಕುಡಿಯುವ ನೀರು ಸಮಸ್ಯೆಯಾಗದಂತೆ ಪ. ಪಂಚಾಯಿತಿಯವರು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕು ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ನಿರ್ವಹಿಸಬೇಕು ಎಂದರು. ಈ ಸಂದರ್ಭದಲ್ಲಿ ಕೂಡ್ಲಿಗಿ ಪಟ್ಟಣದ ಸಕಲ ದೈವಸ್ಥರು, ತಹಶೀಲ್ದಾರರು ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಉಪಸ್ಥಿತರಿದ್ದರು.
ವರದಿ : ಗುರುರಾಜ್ ಎಲ್, ಕಲ್ಲಹಳ್ಳಿ ಟಿ
