ಕಲಬುರಗಿ/ ಚಿತ್ತಾಪುರ: ಪಟ್ಟಣದಲ್ಲಿ ಚಿಂದಿ ಆಯುವ ಚೀಲಕ್ಕಾಗಿ ಇಬ್ಬರ ನಡುವೆ ಪ್ರಾರಂಭವಾದ ಜಗಳ ಕೊನೆಗೆ ಕೊಲೆಯಲ್ಲಿ ಅಂತ್ಯ ಕಂಡ ಘಟನೆ ಶನಿವಾರ ರಾತ್ರಿ ನಡೆದಿದ್ದು ಭಾನುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಪಟ್ಟಣದ ಹಳೆಯ ಕೋರ್ಟ್ ಎದುರುಗಡೆ ಇರುವ ಟೈರ್ ಪಂಚರ್ ಅಂಗಡಿ ಹತ್ತಿರ ವ್ಯಕ್ತಿಯೋರ್ವನ ಕೊಲೆಯಾಗಿತ್ತು. ಈ ಘಟನೆಯನ್ನು ಪೊಲೀಸರು ಬಹಳ ಗಂಭೀರವಾಗಿ ಪರಿಗಣಿಸಿ ಪತ್ತೆ ಕಾರ್ಯ ಕೈಗೊಂಡು ಒಂದೇ ದಿನದಲ್ಲಿ ಕೊಲೆ ಆರೋಪಿ ಆಶ್ರಯ ಕಾಲೋನಿಯ ಭರತ್ ನಿರಂಜನ್ ಕಾಶಿ ಎಂಬಾತನನ್ನು ಸೋಮವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ
ಕೊಲೆಯಾದ ವ್ಯಕ್ತಿಯ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ, ಹೀಗಾಗಿ ಕೊಲೆಯಾದ ವ್ಯಕ್ತಿಯ ಶವವನ್ನು ಕಲಬುರಗಿಯ ಶವಾಗಾರ ಕೋಣೆಯಲ್ಲಿ ಇರಿಸಲಾಗಿದೆ ಎಂದು ಸಿ. ಪಿ. ಐ ಚಂದ್ರಶೇಖರ ತಿಗಡಿ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಭಾನುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, ಅಡಿಷನಲ್ ಎಸ್ ಪಿ ಮಹೇಶ್ ಮೇಘಣ್ಣವರ್, ಡಿವೈಎಸ್ಪಿ ಶಂಕರಗೌಡ ಪಾಟೀಲ, ಸಿಪಿಐ ಚಂದ್ರಶೇಖರ ತಿಗಡಿ, ಪಿಎಸ್‌ಐ ಶ್ರೀಶೈಲ್ ಅಂಬಾಟಿ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ವರದಿ ಮೊಹಮ್ಮದ್ ಅಲಿ, ಚಿತ್ತಾಪುರ
