
ಬಳ್ಳಾರಿ / ಕಂಪ್ಲಿ : ತಾಲ್ಲೂಕಿನ ಪ್ರಮುಖ ವಾಣಿಜ್ಯ, ಶೈಕ್ಷಣಿಕ ಕೇಂದ್ರವಾಗಿರುವ ಕಂಪ್ಲಿ – ಕೋಟೆಯಲ್ಲಿ ಸೂಕ್ತ ಬಸ್ ತಂಗುದಾಣಗಳಿಲ್ಲದೆ ಪ್ರಯಾಣಿಕರು ಪರದಾಡಿ ಹೈರಾಣಾಗಿದ್ದಾರೆ.
ಪಟ್ಟಣ ವೇಗವಾಗಿ ಬೆಳೆಯುತ್ತಿದ್ದು, ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸಬೇಕು ಎಂಬ ಕೂಗು ಸಹ ಕೇಳಿ ಬರುತ್ತಿದೆ. ಆದರೆ, ಬಸ್ಸುಗಳಿಗಾಗಿ ಕಾಯುವ ಪ್ರಯಾಣಿಕರು ನಿಲ್ಲಲು ತಂಗುದಾಣಗಳೇ ಇಲ್ಲ. ಪ್ರಯಾಣಿಕರು ಮಳೆಯಲ್ಲಿ ನೆನೆದು, ಬಿಸಿಲಲ್ಲಿ ಬೆವರಿ ನಿಂತುಕೊಂಡೆ ಬಸ್‌ಗಳಿಗೆ ಕಾಯಬೇಕಾಗಿದೆ.
ಕೋಟೆ ಬಳ್ಳಾರಿ ಜಿಲ್ಲೆಯ ಗಡಿಭಾಗವಾಗಿದ್ದು, ಕಲ್ಯಾಣ ಕರ್ನಾಟಕ ಭಾಗವನ್ನು ಸಂಪರ್ಕಿಸುವ ಕೇಂದ್ರವಾಗಿದ್ದು, ದಿನಾಲೂ ನೂರಾರು ಸರ್ಕಾರಿ, ಖಾಸಗಿ ಬಸ್‌ಗಳು ಕೋಟೆ ಸೇತುವೆ ಮೂಲಕ ಸಂಚರಿಸುತ್ತವೆ. ಲಾರಿ, ಬೃಹತ್ ವಾಹನಗಳು ಸಹ ಇದೇ ಮಾರ್ಗದಲ್ಲಿ ಸಾಗುತ್ತವೆ. ಬೆಳಗಿನ ಜಾವದಿಂದ ರಾತ್ರಿವರೆಗೆ ಬಸ್‌ಗಳಿಗಾಗಿ ಪ್ರಯಾಣಿಕರು ಕಾದು ಕುಳಿತಿರುತ್ತಾರೆ. ಬಸ್ ನಿಲ್ದಾಣ, ತಂಗುದಾಣ ಇಲ್ಲದ ಕಾರಣ ಬಿಸಿಲು, ಮಳೆಯಲ್ಲಿಯೇ ಗಂಟೆಗಟ್ಟಲೆ ಕಾದು ಹೈರಾಣಾಗುತ್ತಿದ್ದಾರೆ.
ಕೋಟೆ ಕಂಪ್ಲಿಯ ಸೇತುವೆ ಬಳಿ, ಸುಂಕಲಮ್ಮ ದೇವಸ್ಥಾನದ ಬಳಿ ತಂಗುದಾಣ ಅವಶ್ಯವಿದೆ. ಸ್ಥಳೀಯ ಆಡಳಿತವಾಗಲಿ, ಜನಪ್ರತಿನಿಧಿಗಳಾಗಲಿ ತಂಗುದಾಣ ನಿರ್ಮಾಣಕ್ಕೆ ಮುಂದಾಗಿಲ್ಲ. ಯಾವುದಾದರೂ ಅಂಗಡಿ ಮುಂದೆ ನಿಂತರೆ ವ್ಯಾಪಾರಕ್ಕೆ ತೊಂದರೆಯಾಗುತ್ತದೆ ಎಂದು ಬೇರೆಡೆ ಹೋಗಲು ಹೇಳುತ್ತಾರೆ. ನೆರಳಿರುವ ಜಾಗದಲ್ಲಿ ನಿಂತರೆ, ಬಸ್ ಬಂದಾಗ ಓಡಿ ಹೋಗಬೇಕಿದೆ.
ಪ್ರಯಾಣಿಕರು ಬಿಸಿಲಿನಲ್ಲಿ ಅಥವಾ ಮರದ ಬುಡದಲ್ಲಿ ನಿಲ್ಲಬೇಕು. ಮಳೆಗಾಲದಲ್ಲಿ ಲಗೇಜ್ ಜತೆ ಪ್ರಯಾಣಿಸುವವರು, ಮಕ್ಕಳನ್ನು ಕರೆದುಕೊಂಡು ಹೋಗುವವರು, ವೃದ್ಧರು ಹೆಚ್ಚು ಸಂಕಷ್ಟ ಅನುಭವಿಸುತ್ತಾರೆ.
ಕಳೆದ ಐದು ದಶಕಗಳ ಹಿಂದೆ ನಿರ್ಮಿಸಿದ್ದ ತಂಗುದಾಣ ಕಟ್ಟಡದ ಚಾವಣಿ ಸಂಪೂರ್ಣ ಶಿಥಿಲಗೊಂಡು ಕೆಳಗಡೆ ಸಿಮೆಂಟ್ ಪದರು ಕಳಿಚಿ ಬಿದ್ದಿದೆ ಗೋಡೆ ಬಿದ್ದು ಹಾಳಾಗಿದೆ. ನೆಲದ ಹಾಸು ಕಿತ್ತು ಹೋಗಿದೆ, ಕುಳಿತುಕೊಳ್ಳಲು ಪ್ರಯಾಣಿಕರಿಗೆ ಆಸನಗಳಿಲ್ಲ ಕಸ ಕಡ್ಡಿ ಬಿದ್ದಿದ್ದು ಅಕ್ಷರಶಃ ತಿಪ್ಪೆಯಂತಾಗಿದೆ. ಇದರಿಂದ ಪ್ರಯಾಣಿಕರು ಬಳಸುವಂತಿಲ್ಲವಾಗಿದೆ. ಕಟ್ಟಡ ತೆರವುಗೊಳಿಸಿ ಶಿಥಿಲಗೊಂಡ ತಂಗುದಾಣ ಕಸವನ್ನು ತೆರವುಗೊಳಿಸಿ ಸುಸಜ್ಜಿತ ಕಟ್ಟಡ ನಿರ್ಮಿಸಬೇಕಾಗಿದೆ.
ಇನ್ನು ಈ ಕಟ್ಟಡದ ಎದುರಿಗೆ 2014ರಲ್ಲಿ ಸಂಸದರ ಅನುದಾನದಲ್ಲಿ ನಿರ್ಮಿಸಿದ ಬಸ್ ಶೆಲ್ಟರ್ ತಂಗುದಾಣವು ದುರಸ್ತಿಗೆ ಬಂದಿದೆ. ಆಸನಗಳು ಕಿತ್ತು ಹೋಗಿವೆ ಶೆಲ್ಟರ್ ನ ಮುಂಭಾಗ ಸುತ್ತಲಿನ ಕವರ್ ಹರಿದುಹೋಗಿದ್ದು ಹಾಳು ಬಿದ್ದ ಕೊಂಪೆಯಂತಾಗಿ ನಿರುಪಯುಕ್ತವಾಗಿದೆ. ಇದರ ರಿಪೇರಿ ಆಗಬೇಕಿದೆ.
ಧೂಳು ಮಯ:
ಡಾಂಬರ್ ಕಿತ್ತು ಹೋಗಿ ಮಣ್ಣಿನಿಂದ ಕೂಡಿರುವ ಕಾರಣ ರಸ್ತೆಯ ಪಕ್ಕದಲ್ಲಿ ನಿಲ್ಲುವ ಪ್ರಯಾಣಿಕರ ಬಟ್ಟೆ, ವಸ್ತುಗಳು ಕೆಲವೇ ನಿಮಿಷಗಳಲ್ಲಿ ದೂಳಿನಿಂದ ತುಂಬಿರುತ್ತವೆ. ಸಾರ್ವಜನಿಕರು ಧೂಳು ಸೇವಿಸಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.
ಹಲವಾರು ವರ್ಷ ಕಳೆದರೂ ಪ್ರಯಾಣಿಕರು ಕುಳಿತುಕೊಳ್ಳಲು ತಂಗುದಾಣವನ್ನು ಈವರೆಗೆ ನಿರ್ಮಿಸಿಲ್ಲ. ಪ್ರಯಾಣಿಕರು, ಸಾರ್ವಜನಿಕರು ತಂಗುದಾಣ ನಿರ್ಮಿಸುವಂತೆ ಹಲ ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
ಸ್ಥಳವಿದ್ದರೂ ನಿರ್ಮಾಣವಾಗದ ತಂಗುದಾಣ:
ತಂಗುದಾಣ ಅಥವಾ ಬಸ್ ನಿಲ್ದಾಣ ನಿರ್ಮಿಸಲು ಸಾಕಷ್ಟು ಸ್ಥಳವಿದೆ. ಆದರೆ ಇಲ್ಲಿನ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ತಂಗುದಾಣ ನಿರ್ಮಿಸಲಾಗಿಲ್ಲ ಎಂಬ ಆರೋಪ ಕೇಳಿಬರುತ್ತಿವೆ.
ಕಂಪ್ಲಿ ತಾಲ್ಲೂಕಿನ ಹೆಬ್ಬಾಗಿಲು ಆಗಿರುವ ಕೋಟೆ ಕಂಪ್ಲಿಯಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಬೇಕು. ಅಲ್ಲಿಯವರೆಗೆ ಕನಿಷ್ಠ ತಂಗುದಾಣವನ್ನಾದರೂ ನಿರ್ಮಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು ಎಂಬುದು ಸಾರ್ವಜನಿಕರು ಒತ್ತಾಯಿಸಿದರು.
ವರದಿ : ಜಿಲಾನಸಾಬ್ ಬಡಿಗೇರ್.
