ಕಂಪ್ಲಿ ತಾಲೂಕಿನಲ್ಲಿ 36 ಡಿಗ್ರಿ ಸೆಲ್ಸಿಯಸ್ ತಾಪಮಾನ ಏರಿಕೆ ಮನೆಯಿಂದ ಹೊರಬರದ ಜನ ವ್ಯಾಪಾರ ವಹಿವಾಟಿಗೆ ದೊಡ್ಡ ಹೊಡೆತ ಬಿದ್ದಿದೆ.
ಬಳ್ಳಾರಿ / ಕಂಪ್ಲಿ : ಉರಿ ಬಿಸಿಲಿಗೆ ಹೆಸರು ವಾಸಿಯಾಗಿರುವ ಗಣಿನಾಡಿನ ಕಂಪ್ಲಿ ತಾಲೂಕು ಸದ್ಯ ಬಿಸಿಲನಾಡಾಗಿ ಪರಿವರ್ತನೆಯಾಗಿದೆ.
36 ರಿಂದ 37 ಡಿಗ್ರಿ ಸೆಲ್ಸಿಯಸ್ ಬಿಸಿಲಿನ ತಾಪಮಾನ ದಾಖಲಾಗಿದ್ದು ಈ ಉಷ್ಣಾಂಶಕ್ಕೆ ಜನ ತತ್ತರಿಸಿದ್ದಾರೆ.
ಈಗಾಗಲೇ ಒಂದು ವಾರದಿಂದ ಸೂರ್ಯನ ಪ್ರಖರತೆ ಹೆಚ್ಚಾಗಿದ್ದು ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ.
ಬಿಸಿಲಿನ ಜಳಕ್ಕೆ ಕೆರೆ – ಕಟ್ಟೆಗಳು ಬತ್ತಿ ಹೋಗಿವೆ. ಪ್ರಾಣಿ – ಪಕ್ಷಿಗಳಿಗೆ ಕುಡಿಯುವ ನೀರಿಗೂ ಹಾಹಾಕಾರ ಎದುರಾಗಿದೆ. ಬಿಸಿಲ ತಾಪ ತಾಳಲಾಗದೆ ಜನತೆ ನೀರಿಗೂ ಪರದಾಡುವಂತಾಗಿದೆ. ಬಿಸಿಲ ತಾಪ ತಳ್ಳಲಾಗದೆ ಸಾರ್ವಜನಿಕರು ತಮ್ಮ ಬಾಯಾರಿಕೆಯ ನೀಗಿಸಿಕೊಳ್ಳಲು ಕಲಂಗಡಿ ಹಣ್ಣು, ಜ್ಯೂಸ್, ಐಸ್ ಕ್ರೀಮ್, ತಂಪು ಪಾನೀಯಗಳಿಗೆ ಮುಗಿಬಿದ್ದಿದ್ದಾರೆ. ದಿನದಿಂದ ದಿನಕ್ಕೆ ಬೇಸಿಗೆಯ ಬಿಸಿಲಿನ ಝಳ ಏರಿಕೆಯಾಗುತ್ತಿದೆ ಇದರಿಂದ ಮಕ್ಕಳು, ವೃದ್ಧರು ಹಾಗೂ ರೋಗಿಗಳಿಗೆ ತುಂಬಾ ತೊಂದರೆಯಾಗಿದೆ. ಬಿಸಿಲಿನ ಬೇಗೆಗೆ ಬೆವರಿನ ಸ್ನಾನದ ಭಾಗ್ಯ ಪ್ರಾಪ್ತಿಯಾಗಿದೆ.
ಸೂರ್ಯನು ತನ್ನ ತಾಪಮಾನ ಹೆಚ್ಚಿಸಿಕೊಂಡು ನೆತ್ತಿ ಮೇಲೆ ಬರುತ್ತಿದ್ದಂತೆ ಮಧ್ಯಾಹ್ನದ ವೇಳೆಗೆ ಅಬ್ಬಬ್ಬಾ ಎಂತಹ ಬಿಸಿಲು ಎನ್ನುವ ಜನತೆ ಮಳೆ ಬಂದರೆ ಸಾಕಪ್ಪ ಎಂದು ವರುಣನ ಆಗಮನದ ನಿರೀಕ್ಷೆಯಲ್ಲಿದ್ದಾರೆ.
ಕಾಂಕ್ರೀಟ್ ರಸ್ತೆ, ಕಾಂಕ್ರೀಟ್ ಕಟ್ಟಡಗಳು ಹಾಗೂ ಮನೆಯ ಛಾವಣಿ ಬಿಸಿಲಿಗೆ ಕಾದ ಕಾವಲಿಯಾಗಿದೆ ಇನ್ನೂ ಡಾಂಬರ ರಸ್ತೆಗಳು ಬಿಸಿಲಿನ ತಾಪಕ್ಕೆ ಬಿಸಿ ಬುಗ್ಗೆಗಳಾಗಿವೆ. ಈ ಉಷ್ಣಾಂಶಕ್ಕೆ ಫ್ಯಾನು, ಎಸಿಗಳು ತಂಪಾಗದಂತಾಗಿವೆ, ಇದರಿಂದ ಜನರು ಮನೆಯ ಒಳಗೆ ಇರಲಾಗದೆ ಹೊರಗೂ ಬರಲಾಗದೆ ಜನತೆ ಪರಿತಪಿಸುವಂತಾಗಿದೆ.
ರಾತ್ರಿಯಾದರೆ ಸಾಕು ಮನೆಯೊಳಗೆ ಮಲಗಲು ಒದ್ದಾಡುತ್ತಾ, ಬಿರು ಬಿಸಿಲಿನಲ್ಲಿ ಬಸ್ ನಲ್ಲಿ ಸಂಚಾರ ಮಾಡುವುದೇ ಪ್ರಯಾಣಿಕರ ದೊಡ್ಡ ಸಾಹಸವಾಗಿದೆ ಸ್ಥಳೀಯ ಊರು ಸೇರಿದಂತೆ ದೂರದ ಊರುಗಳಿಗೆ ಪ್ರಯಾಣಿಸಲು ಬಸ್ ನಲ್ಲಿ ಕೊಂಚ ದೂರ ಸಾಗಿದರೂ ಸಾಕು ದೇಹ ಪೂರ್ತಿ ಒದ್ದೆಯಾಗುತ್ತದೆ.
ನೀರು ಅರಸಿ ಬಂದ ಪಕ್ಷಿಗಳು ಮೊಸಳೆ ಬಾಯಿಗೆ :
ಈ ಬಾರಿಯ ಬಿಸಿಲಿನ ಹೊಡೆತಕ್ಕೆ ಹಳ್ಳ ಕೊಳ್ಳಗಳು ಬರಿದಾಗಿದ್ದು ಇಲ್ಲಿನ ಕಂಪ್ಲಿ ಕೋಟೆ ಪ್ರದೇಶದ ನದಿಗೆ ನಾನಾ ಪಕ್ಷಿಗಳು ಹಾರಿ ಬರುತ್ತಿದ್ದು ನೀರು ಕುಡಿಯ ವೇಳೆ ಇಲ್ಲಿನ ಮೊಸಳೆಗಳ ಬಾಯಿಗೆ ಆಹಾರವಾಗುತ್ತಿರುವುದು ಕಂಡು ಬಂತು.
ಗಿಡ ಮರಗಳ ನೆರಳಿಗೋಸ್ಕರ ಜನರು ಹುಡುಕುವಂತಾಗಿದೆ! ಒಟ್ಟಿನಲ್ಲಿ ಬೇಸಿಗೆ ಜಳಕ್ಕೆ ತಾಲೂಕಿನ ಜನರು ಬಸವಳಿದಿದ್ದು
ಬಾರೋ ಮಳೆರಾಯ – ಮಳೆರಾಯ ಬಾಳೇ ತೋಟಕೆ ನೀರಿಲ್ಲಾ – ನೀರಿಲ್ಲಾ
ಹುಯ್ಯೋ ಹುಯ್ಯೋ ಮಳೆರಾಯಾ – ಮಳೆರಾಯಾ ಹೂವಿನ ತೋಟಕೆ ನೀರಿಲ್ಲಾ – ನೀರಿಲ್ಲಾ
ತೋರೋ ತೋರೋ ಮಳೆರಾಯಾ – ಮಳೆರಾಯಾ ತೆಂಗು ಅಡಿಕೆ ತಣಿದಿಲ್ಲಾ – ತಣಿದಿಲ್ಲಾ
ಕರೆಯೋ ಕರೆಯೋ ಮಳೆರಾಯಾ – ಮಳೆರಾಯಾnಕಬ್ಬಿನ ಗದ್ದೆ ನೆನೆದಿಲ್ಲಾ – ನೆನೆದಿಲ್ಲಾ
ಸುರಿಯೋ ಸುರಿಯೋ ಮಳೆರಾಯಾ – ಮಳೆರಾಯಾ
ಸೂರ್ಯನ ಸ್ನಾನನೇ ಆಗಿಲ್ಲಾ – ಆಗಿಲ್ಲಾ
ಎನ್ನುವ ಲಕ್ಷ್ಮೀನಾರಾಯಣ ಭಟ್ ರವರ ಕವನ ನೆನಪಾಗುತ್ತದೆ.
ಅದಕ್ಕೆ ಹೇಳೋದು ‘ಪರಿಸರವನ್ನ ಬೆಳೆಸಿ’ ‘ಪರಿಸರವನ್ನು ಉಳಿಸಿ’
ವರದಿ : ಜಿಲಾನಸಾಬ್ ಬಡಿಗೇರ್.
