
ಕೃನಾಲ್, ಕೊಹ್ಲಿ ಬೊಂಬಾಟ್ ಬ್ಯಾಟಿಂಗ್, ಶಿಸ್ತು ಬದ್ಧ ಬೌಲಿಂಗ್ – ಆರ್‌ಸಿಬಿಗೆ 6 ವಿಕೆಟ್‌ಗಳ ಜಯ, ನಂ.1 ಪಟ್ಟಕ್ಕೇರಿದ ಆರ್‌ಸಿಬಿ
ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಈ ಜೋಡಿ, ಪಿಚ್‌ಗೆ ಹೊಂದಿಕೊಳ್ಳುತ್ತಿದ್ದಂತೆಯೇ ಮೈಚಳಿ ಬಿಟ್ಟು ಬ್ಯಾಟ್ ಬೀಸುವ ಮೂಲಕ ಡೆಲ್ಲಿ ಬೌಲರ್‌ಗಳ ಮೇಲೆ ಸವಾರಿ ಮಾಡಿದರು.
ನವದೆಹಲಿ: ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅನುಭವಿಸಿದ್ದ ಸೋಲಿಗೆ ಆರ್‌ಸಿಬಿ ಡೆಲ್ಲಿಯಲ್ಲಿಯೇ ರಿವೇಂಜ್ ತೀರಿಸಿಕೊಂಡಿದೆ. ಭುವನೇಶ್ವರ್ ಕುಮಾರ್ ಮಿಂಚಿನ ಬೌಲಿಂಗ್, ಲೋಕಲ್ ಬಾಯ್ ವಿರಾಟ್ ಕೊಹ್ಲಿ ಹಾಗೂ ಕೃನಾಲ್ ಪಾಂಡ್ಯ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಆರ್‌ಸಿಬಿ ಇನ್ನೂ 9 ಎಸೆತ ಬಾಕಿ ಇರುವಂತೆಯೇ 6 ವಿಕೆಟ್ ಅಂತರದ ಗೆಲುವಿನ ನಗೆ ಬೀರಿದೆ. ಡೆಲ್ಲಿಯನ್ನು ಅವರದ್ದೇ ನೆಲದಲ್ಲಿ ಗಿಲ್ಲಿಯಂತೆ ಹೊಡೆದ ಆರ್‌ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಗೆಲ್ಲಲು 163 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಫಿಲ್ ಸಾಲ್ಟ್ ಬದಲು ಆರ್‌ಸಿಬಿ ಪರ ಕಣಕ್ಕಿಳಿದ ಜೆಕೊಬ್ ಬೆಥೆಲ್ 6 ಎಸೆತಗಳಲ್ಲಿ ತಲಾ ಒಂದು ಬೌಂಡರಿ ಹಾಗೂ ಸಿಕ್ಸರ್ ಸಹಿತ 12 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿದ ದೇವದತ್ ಪಡಿಕ್ಕಲ್ ಶೂನ್ಯ ಸುತ್ತಿ ಅಕ್ಷರ್ ಪಟೇಲ್‌ಗೆ ಎರಡನೇ ಬಲಿಯಾದರು. ಇನ್ನು ನಾಯಕ ರಜತ್ ಪಾಟೀದಾರ್ ಇಲ್ಲದ ರನ್ ಕದಿಯಲು ಹೋಗಿ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಆಗ ಆರ್‌ಸಿಬಿ ಸ್ಕೋರ್ 3 ವಿಕೆಟ್ ನಷ್ಟಕ್ಕೆ 26 ರನ್.
ಕೊಹ್ಲಿ-ಕೃನಾಲ್ ಜುಗಲ್ಬಂದಿ:
ಆರಂಭಿಕ ಆಘಾತದಲ್ಲಿದ್ದ ಆರ್‌ಸಿಬಿ ತಂಡಕ್ಕೆ ನಾಲ್ಕನೇ ವಿಕೆಟ್‌ಗೆ ವಿರಾಟ್ ಕೊಹ್ಲಿ ಹಾಗೂ ಕೃನಾಲ್ ಪಾಂಡ್ಯ ಆಕರ್ಷಕ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಈ ಜೋಡಿ, ಪಿಚ್‌ಗೆ ಹೊಂದಿಕೊಳ್ಳುತ್ತಿದ್ದಂತೆಯೇ ಮೈಚಳಿ ಬಿಟ್ಟು ಬ್ಯಾಟ್ ಬೀಸುವ ಮೂಲಕ ಡೆಲ್ಲಿ ಬೌಲರ್‌ಗಳ ಮೇಲೆ ಸವಾರಿ ಮಾಡಿದರು.
ನಾಲ್ಕನೇ ವಿಕೆಟ್‌ಗೆ 84 ಎಸೆತಗಳಲ್ಲಿ 119 ರನ್‌ಗಳ ಆಕರ್ಷಕ ಜತೆಯಾಟವಾಡುವ ಮೂಲಕ ತಂಡವನ್ನು ಗೆಲುವಿನ ಸಮೀಪ ಕೊಂಡೊಯ್ದರು. ತಂಡ ಗೆಲ್ಲಲು ಕೇವಲ 18 ರನ್ ಅಗತ್ಯವಿದ್ದಾಗ ವಿರಾಟ್ ಕೊಹ್ಲಿ ದುಸ್ಮಂತ್ ಚಮೀರಾಗೆ ವಿಕೆಟ್ ಒಪ್ಪಿಸಿದರು. ಕೊಹ್ಲಿ 47 ಎಸೆತಗಳನ್ನು ಎದುರಿಸಿ 4 ಬೌಂಡರಿ ಸಹಿತ 51 ರನ್ ಸಿಡಿಸಿ ತನ್ನ ತವರಿನ ಅಭಿಮಾನಿಗಳನ್ನು ರಂಜಿಸಿದರು. ಮತ್ತೊಂದು ತುದಿಯಲ್ಲಿ ಆಕರ್ಷಕ ಬ್ಯಾಟಿಂಗ್ ನಡೆಸಿದ ಕೃನಾಲ್ ಪಾಂಡ್ಯ 73 ರನ್ ಸಿಡಿಸಿ ಆರ್‌ಸಿಬಿ ಗೆಲುವಿನ ರೂವಾರಿ ಎನಿಸಿದರು.
ಕೃನಾಲ್ ಪಾಂಡ್ಯ
ಇದಕ್ಕೂ ಮೊದಲು ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ ಎಚ್ಚರಿಕೆಯ ಆರಂಭ ಪಡೆಯಿತು. ಅಭಿಷೇಕ್ ಪೊರೆಲ್ ಹಾಗೂ ಫಾಫ್ ಡು ಪ್ಲೆಸಿಸ್ ಮೊದಲ ವಿಕೆಟ್‌ಗೆ 33 ರನ್‌ಗಳ ಜತೆಯಾಟವಾಡಿತು. ಪೊರೆಲ್ ಕೇವಲ 11 ಎಸೆತಗಳನ್ನು ಎದುರಿಸಿ ತಲಾ 2 ಬೌಂಡರಿ ಹಾಗೂ ಸಿಕ್ಸರ್ ಸಹಿತ 28 ರನ್ ಬಾರಿಸಿ ಜೋಸ್ ಹೇಜಲ್‌ವುಡ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಕರುಣ್ ನಾಯರ್ ಮತ್ತೊಮ್ಮೆ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಕರುಣ್ ನಾಯರ್ 4 ರನ್ ಗಳಿಸಿ ಯಶ್ ದಯಾಳ್‌ಗೆ ವಿಕೆಟ್ ಒಪ್ಪಿಸಿದರು.
ಡೆಲ್ಲಿ ಮತ್ತೋರ್ವ ಆರಂಭಿಕ ಬ್ಯಾಟರ್ ಫಾಫ್ ಡು ಪ್ಲೆಸಿಸ್ ಆರ್‌ಸಿಬಿ ಬೌಲಿಂಗ್ ಎದುರು ರನ್ ಗಳಿಸಲು ಪರದಾಡಿದರು. 26 ಎಸೆತಗಳನ್ನು ಎದುರಿಸಿದ ಫಾಫ್ ಕೇವಲ ಎರಡು ಬೌಂಡರಿ ಸಹಿತ 22 ರನ್ ಗಳಿಸಿ ಕೃನಾಲ್ ಪಾಂಡ್ಯ ಬೌಲಿಂಗ್‌ನಲ್ಲಿ ಕೊಹ್ಲಿಗೆ ಕ್ಯಾಚಿತ್ತು ಪೆವಿಲಿಯನ್ ಹಾದಿ ಹಿಡಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ವಿಕೆಟ್ ಕೀಪರ್ ಬ್ಯಾಟರ್ ಕೆ ಎಲ್ ರಾಹುಲ್ 39 ಎಸೆತಗಳನ್ನು ಎದುರಿಸಿ 3 ಬೌಂಡರು ಸಹಿತ 41 ರನ್ ಬಾರಿಸಿ ತಂಡದ ಮೊತ್ತ ನೂರರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಇನ್ನು ಕೊನೆಯಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ಟ್ರಿಸ್ಟಿನ್ ಸ್ಟಬ್ಸ್ ಕೇವಲ 18 ಎಸೆತಗಳಲ್ಲಿ 5 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 34 ರನ್ ಗಳಿಸಿ ಕೊನೆಯವರಾಗಿ ವಿಕೆಟ್ ಒಪ್ಪಿಸಿದರು.
ಇನ್ನು ಆರ್‌ಸಿಬಿ ಪರ ಪವರ್ ಪ್ಲೇ ಓವರ್‌ನಲ್ಲಿ ದುಬಾರಿಯಾಗಿದ್ದ ಭುವನೇಶ್ವರ್ ಕುಮಾರ್ ಡೆತ್ ಓವರ್‌ನಲ್ಲಿ ಮಾರಕ ದಾಳಿ ನಡೆಸುವ ಮೂಲಕ ಡೆಲ್ಲಿ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಭುವನೇಶ್ವರ್ ಕುಮಾರ್ 33 ರನ್ ನೀಡಿ ಮೂರು ವಿಕೆಟ್ ಪಡೆದರು. ಇನ್ನು ಜೋಶ್ ಹೇಜಲ್‌ವುಡ್ 2, ಕೃನಾಲ್ ಪಾಂಡ್ಯ ಹಾಗೂ ಯಶ್ ದಯಾಳ್ ತಲಾ ಒಂದೊಂದು ವಿಕೆಟ್ ತಮ್ಮದಾಗಿಸಿಕೊಂಡರು.
ವರದಿ : ಜಿಲಾನಸಾಬ್ ಬಡಿಗೇರ್
