ಕಲಬುರಗಿ/ ಜೇವರ್ಗಿ: ಕರ್ನಾಟಕ ರಾಜ್ಯದ ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಾದ ಕಲಬುರ್ಗಿ, ಬೀದರ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ತಳವಾರ ಜಾತಿ ಜನಾಂಗಕ್ಕೆ ನೀಡಬೇಕಾದ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ, ನೌಕರರಿಗೆ ಸಿಂಧುತ್ವ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ ನೀಡದಿರುವುದನ್ನು ಖಂಡಿಸಿ ಏಪ್ರಿಲ್ 25 ರಿಂದ ಯಡ್ರಾಮಿ ತಾಲ್ಲೂಕಿನ ಕಣಮೇಶ್ವರ ಗ್ರಾಮದಿಂದ ಆರಂಭವಾದ ಪಾದಯಾತ್ರೆ ಶುಕ್ರವಾರ ಜೇವರ್ಗಿ ಮಿನಿ ವಿಧಾನಸೌಧಕ್ಕೆ ಬಂದಿತ್ತು. ಪ್ರತಿಭಟನಾಕಾರರು ಅಧಿಕಾರಿಗಳ ವಿರುದ್ಧ ದಿಕ್ಕಾರದ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.ಕೇಂದ್ರ ಸರ್ಕಾರ 2020ರಲ್ಲಿ ಲೋಕ ಸಭೆ ಮತ್ತು ರಾಜ್ಯಸಭೆ ಅನುಮೋದನೆಯೊಂದಿಗೆ ರಾಷ್ಟ್ರಪತಿಗಳ ಅಂಕಿತದೊಂದಿಗೆ ಕಾನೂನು ಬದ್ದವಾಗಿ ನಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಗೆಜೆಟ್ ನೋಟಿಫಿಕೇಶನ ಹೊರಡಿಸಿದೆ. ನಿಯಮದ ಪ್ರಕಾರ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ಕೊಡುವುದು ರಾಜ್ಯ ಸರ್ಕಾರದ ಕರ್ತವ್ಯವಾಗಿದೆ. ಅದನ್ನು ಬಿಟ್ಟು ಅಧಿಕಾರ ವ್ಯಾಪ್ತಿ ಮೀರಿ ಸುಖಾಸುಮ್ಮನೆ ಗೊಂದಲ ಸೃಷ್ಟಿಸುವ ಸುತ್ತೋಲೆಗಳನ್ನು ಹೊರಡಿಸಿ ತಳವಾರ ಸಮುದಾಯದವನ್ನು ಪರಿಶಿಷ್ಟ ಪಂಗಡಗಳ ಸೌಲಭ್ಯಗಳನ್ನು ಪಡೆಯದಂತೆ ವಂಚಿಸುವ ಕೆಲಸ ನಿರಂತರವಾಗಿ ಮಾಡುತ್ತಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.
ಯಡ್ರಾಮಿ ತಾಲೂಕಿನ ಕಣಮೇಶ್ವರ ಗ್ರಾಮದಿಂದ ಆರಂಭವಾದ ಪಾದಯಾತ್ರೆ ಕಲಬುರ್ಗಿಯ ಪ್ರಾದೇಶಿಕ ಆಯುಕ್ತರ ಕಚೇರಿಗೆ ತೆರಳಿ ನಂತರ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ನಡೆಯಲಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಈ ಸಂದರ್ಭದಲ್ಲಿ ತಳವಾರ ಸಮಾಜದ ಮುಖಂಡರಾದ ರೇವಣ ಸಿದ್ಧಪ್ಪಗೌಡ ಕಮಾನಮನಿ, ತಳವಾರ ಸಮಾಜದ ರಾಜ್ಯಾಧ್ಯಕ್ಷರಾದ ಸರ್ದಾರ ರಾಯಪ್ಪ, ಬಸವರಾಜಗೌಡ ಪಾಟೀಲ ನರಿಬೋಳ, ವಸಂತರಾವ ನರಿಬೋಳ, ಅಯ್ಯಣ್ಣಗೌಡ ಪಡದಳ್ಳಿ, ಶೌಕತ್ ಅಲಿ ಆಲೂರ್, ಸಿದ್ದಣ್ಣ ಐರೋಡಗಿ, ಮಲ್ಲೇಶಗೌಡ ರೇವನೂರ,ಮನೋಹರ ಕಾಮನಕೇರಿ, ಸಿದ್ದನಗೌಡ ಮಾವನೂರ, ಬಾಪುಗೌಡ ಮಾಲಿ ಪಾಟೀಲ, ಭಗವಂತರಾಯ ಬೆಣ್ಣೂರ, ಅಶೋಕ ಕಂಕಿ, ಭಾಗೇಶ್ ಹೋತಿನಮಡು, ಗುರು ಜೈನಾಪುರ, ಲಚ್ಚಪ್ಪ ಜಮಾದಾರ, ಸಂತೋಷ ತಳವಾರ,ಈರಣ್ಣ ಹೊಸ್ಮನಿ,ಮೈಲಾರಿ ಗುಡೂರ, ಕುಮಾರ ಬಣಮಿ, ಪ್ರೇಮ ಕೋಲಿ, ಕರಣ ಬಿರಾದಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ: ಚಂದ್ರಶೇಖರ ಪಾಟೀಲ್
