ದೇಶವೇ ಮಹಾಮಾರಿ ಕರೋನ ಖಾಯಿಲೆ ಭೀತಿ ಎದುರಿಸಿದರು : ಜೀವದ ಹಂಗನ್ನು ತೊರೆದ ನಮ್ಮನ್ನು ರಕ್ಷಿಸಿದ ಆರಕ್ಷಕರು.
ಗದಗ : ದಿನಕ್ಕೊಂದು ಹತ್ಯೆಗಳು, ತಪ್ಪಿಸಿಕೊಂಡವರು, ಪಲಾಯನಗಳಾದವರ ಹುಡುಕಾಟ, ಕಳ್ಳತನ, ಅತ್ಯಾಚಾರ, ರಾತ್ರಿ ಗಸ್ತು ಇವೆಲ್ಲವೂಗಳಲ್ಲದೇ ರಣ ಬಿಸಿಲಿನ ಬೇಗೆಯ ನಡುವೆ ಬೆವರ ಹರಿಸುತ್ತಾ ನಿಲ್ಲಬೇಕಾದ ಬಂದೋಬಸ್ತು ಕರ್ತವ್ಯಗಳು ಹೀಗೆ ವಿವರಿಸುತ್ತಾ ಹೋದರೆ ಒಂದೇ ಎರಡೇ, ಇವೆಲ್ಲವುಗಳ ಮಧ್ಯೆ ಬದುಕುವ ಪೋಲಿಸ್ ಇಲಾಖೆ ಕರ್ತವ್ಯ ಕಷ್ಟಕರ.
ಹೌದು… ಕರ್ನಾಟಕ ಪೊಲೀಸ್ ಎಂದರೆ ಇಡೀ ದೇಶವೇ ಮೆಚ್ಚುವಂತಹ ಸಂಸ್ಥೆ, ಕಠಿಣ ಕಾರ್ಯಾಚರಣೆಯನ್ನು ನಡೆಸುವ ಮೂಲಕ ದೇಶದ ಗಮನ ಸೆಳೆದಿದೆ ನಮ್ಮ ಹೆಮ್ಮೆಯ ಕರ್ನಾಟಕ ಪೊಲೀಸ್.
ದುಷ್ಪರಿಗೆ ಸಿಂಹ ಸ್ವಪ್ನವಾಗಿ, ಅನ್ಯಾಯ ದೌರ್ಜನ್ಯಕ್ಕೆ ಒಳಗಾದವರಿಗೆ ನ್ಯಾಯವನ್ನು ಒದಗಿಸುವ ಮಮತಾ ಮಯಿಯಂತೆ ಹಾಗೂ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿರುವ ನಮ್ಮ ಪೊಲೀಸರಿಗೆ ಹೃದಯಪೂರ್ವಕವಾಗಿ ಅಭಿನಂದನೆ ಸಲ್ಲಿಸಲೇಬೇಕು.
ಶಿಸ್ತಿನ ಸಿಪಾಯಿಗಳು ನಮ್ಮ ಪೊಲೀಸರು..
ಸುಗಮ ಆಡಳಿತಕ್ಕಾಗಿ ರಾಜ್ಯ ಸರ್ಕಾರದಲ್ಲಿ 40ಕ್ಕೂ ಹೆಚ್ಚು ಇಲಾಖೆಗಳನ್ನು ರಚಿಸಿಕೊಂಡಿದೆ. ಅದರಲ್ಲಿ ಮೂರು ಇಲಾಖೆಗಳ ಮೈ ಮೇಲೆ ಖಾಕಿ ಇದೆ. ಖಾಕಿ ತೊಟ್ಟ ಮೂರು ಇಲಾಖೆಗಳಾದ ಪೊಲೀಸ್, ಅಬಕಾರಿ ಹಾಗೂ ಅರಣ್ಯ ಇಲಾಖೆಗಳ ಕರ್ತವ್ಯ ವಿಭಿನ್ನ ಮತ್ತು ಹೆಚ್ಚು ಜವಾಬ್ದಾರಿತವಾಗಿಯೂ ಆಗಿದೆ. ಪೊಲೀಸ್ ಇಲಾಖೆ ಶಿಸ್ತಿನ ಇಲಾಖೆ ಎಂದೇ ಪರಿಗಣಿಸಲಾಗುತ್ತದೆ.
ಸಾವು, ನೋವು, ಕಷ್ಟ, ನಷ್ಟ ಕೊಲೆ, ಸುಲಿಗೆ, ಅತ್ಯಾಚಾರ, ಸಂಸಾರ ಕಲಹಗಳು ಇದೆಲ್ಲವು ನೋಡುತಾ ದಿನವೂ ಖಾಕಿ ಬಟ್ಟೆಯ ಹಾಕಿ ಕೆಟ್ಟ ಪ್ರಪಂಚದಲ್ಲಿ ಒಳ್ಳೆತನವ ಕಾಪಾಡಲು ಎಲ್ಲಾ ಆಸೆಗಳನ್ನು ಬದಿಗಿಟ್ಟು ಹಲವು ನಿರ್ಬಂಧಗಳ ಸುಳಿಯಲ್ಲಿ ಬದುಕಬೇಕಾದ ಅನಿವಾರ್ಯತೆ, ಅವರ ಜೀವನ ನಿರ್ವಹಣೆ ಅವರಿಗೂ ಹತ್ತು ಹಲವಾರು ಸಂಕಷ್ಟ, ಆದರೂ ಎಲ್ಲರೆದುರು ನಮ್ಮ ಹೆಮ್ಮೆಯ ಪೋಲಿಸರ ಜೀವನ ಕಷ್ಟ ಸಾಧ್ಯ ಕರ್ತವ್ಯ.
ಇತರೆ ಇಲಾಖೆಯ ಸಿಬ್ಬಂದಿಗಳಂತೆ ಪೊಲೀಸ್ ಇಲಾಖೆಗೆ ಬಿಡುವು ಸಿಗುವುದಿಲ್ಲಾ ಕರ್ತವ್ಯದ ಸಮಯವು ಈ ಇಲಾಖೆಗೆ ಇಲ್ಲಾ, ದಿನದ 24 ಗಂಟೆಯೂ ಕರ್ತವ್ಯಕ್ಕೆ ಸದಾ ಸಿದ್ದರಾಗಿರಬೇಕಾದ ಸ್ಥಿತಿ ಪೊಲೀಸರದಾಗಿದೆ.
ಮುಂಜಾನೆಯಾಗಲಿ, ಹಬ್ಬ ಹರಿದಿನವಾಗಲಿ, ರಜಾ ದಿನವಾಗಲಿ ಪೊಲೀಸರು ಮಾತ್ರ ಕರ್ತವ್ಯಕ್ಕೆ ಹಾಜರಾಗಲೇಬೇಕು ರಕ್ಷಣೆ ಬಯಸಿ ನಾಗರಿಕರು ಕರೆದರೆ ರಕ್ಷಣೆಗೆ ಪೊಲೀಸರು ಧಾವಿಸಲೇಬೇಕು. ಸಂಜೆ ಐದರ ನಂತರ ಇತರೆ ಇಲಾಖೆ ಸಿಬ್ಬಂದಿಗಳಂತೆ ಮನೆ ಸೇರುವ ವ್ಯವಸ್ಥೆ ಪೊಲೀಸರಿಗಿಲ್ಲ ರಾತ್ರಿ ವೇಳೆ ಬೇರೆ ಇಲಾಖೆಗೆ ಸಂಪರ್ಕಿಸಿದರೆ ಯಾರೂ ಸಿಗುವುದಿಲ್ಲ ಆದರೆ ಪೊಲೀಸ್ ಇಲಾಖೆ ಅದೆಲ್ಲದಕ್ಕಿಂತ ವಿಭಿನ್ನ ವಿಶಿಷ್ಟ ಹಾಗೂ ಅಪಾಯ ಬಂದಾಗ ಆಪತ್ಬಾಂಧವನಂತೆ ಬರುವವರೇ ನಮ್ಮ ಪೊಲೀಸರು.
ಇವರು ನಮ್ಮಂತೆ ಸಾಧಾರಣ ಮನುಷ್ಯರೇ ಆದರೂ, ಇವರಿಗೆ ಸಮಾಜದ ಒಳಿತು, ಸಾರ್ವಜನಿಕ ಹಿತಾಸಕ್ತಿ ಜೊತೆಗೆ ಶಾಂತಿ ಅವಶ್ಯಕತೆ ಬೇಕು, ಪ್ರತಿನಿತ್ಯ ಸಮಾಜದಲ್ಲಿ ನಡೆಯುವ ಹಲವಾರು ಅನೈತಿಕ, ಅಕ್ರಮ ಚಟುವಟಿಕೆಗಳ ಕಾರ್ಯಾಚರಣೆಯಲ್ಲಿ ನೊಂದು ಬೆಂದು ಓಡಾಡುವ ಇವರು ಪಡುವ ಯಾತನೆ ಪರಮಾತ್ಮನಿಗೆ ಪ್ರೀತಿ ಆದರೂ ಇವರನ್ನು ಜನಗಳು ನೋಡುವ ಭಂಗಿಯೇ ವಿಬಿನ್ನ.
ಕರೋನಾ ಸಂದರ್ಭದಲ್ಲಿ ರಾಜ್ಯದೆಲ್ಲೆಡೆ ಇವರ ಕಾರ್ಯ ನಿಜಕ್ಕೂ ಅಮೋಘ, ದೇಶವೇ ನಡುಗಿ, ನಲುಗಿ ಆ ಮಹಾಮಾರಿ ಖಾಯಿಲೆ ನಡುವೆಯು ಸೊಡ್ಡು ಹೊಡೆದು ಖಾಯಿಲೆ ಹಿಮ್ಮೆಟ್ಟುವವರೆಗೆ ಇವರ ಕಾರ್ಯಪ್ರವೃತ್ತಿ ನಿಜಕ್ಕೂ ಶ್ಲಾಘನೀಯ ಇಂತಹ ಇಲಾಖೆಗೆ ನನ್ನೊದೊಂದು ಸಲಾಂ…
- ಕರುನಾಡ ಕಂದ
