ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದ ಮಗನ ಉತ್ತೇಜಿಸಲು ಕುಟುಂಬದೊಂದಿಗೆ ಕೇಕ್ ಕಟ್ ಮಾಡಿ ತಂದೆ ಸಂಭ್ರಮ
ಬಾಗಲಕೋಟೆ : ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಫೇಲಾದ ಮಗನ ಉತ್ತೇಜಿಸಲು ಕುಟುಂಬದೊಂದಿಗೆ ಕೇಕ್ ಕಟ್ ಮಾಡಿ ತಂದೆ ಸಂಭ್ರಮಿಸಿದ ಅಪರೂಪದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಎಸ್. ಎಸ್. ಎಲ್. ಸಿಯಲ್ಲಿ ಫೇಲ್ ಆದ ಮಗನಿಗೆ ಕೇಕ್ ತಿನ್ನಿಸಿ ತಂದೆ ಧೈರ್ಯ ಹೇಳಿದ್ದಾರೆ.
ಅಭಿಷೇಕ ಯಲ್ಲಪ್ಪ ಚೊಳಚಗುಡ್ಡ ಎಸ್‌ಎಸ್‌ಎಲ್‌ಸಿಯಲ್ಲಿ 625ಕ್ಕೆ 200 ಅಂಕ ಪಡೆದು 32% ತೆಗೆದುಕೊಂಡಿದ್ದಾನೆ.
ಹೌದು! ಆರಕ್ಕೆ ಆರು ವಿಷಯದಲ್ಲಿ ಫೇಲ್ ಆದ ಅಭಿಷೇಕ ಬಾಗಲಕೋಟೆ ಬಸವೇಶ್ವರ ಹೈಸ್ಕೂಲ್ ನಲ್ಲಿ ಇಂಗ್ಲೀಷ್ ಮೀಡಿಯಮ್ ನಲ್ಲಿ ಓದುತ್ತಿದ್ದ, ಫೇಲ್ ಆದ ಹಿನ್ನೆಲೆ ಬೇಜಾರಿನಲ್ಲಿದ್ದ ಮಗನ ಕಂಡು ಸರ್ಪ್ರೈಜ್ ಆಗಿ ಕುಟುಂಬದವರು ಕೇಕ್ ತಂದು ತಿನ್ನಿಸಿದ್ದಾರೆ.
ಅಲ್ಲದೇ ಮಗನಿಗೆ ಮುತ್ತು ಕೊಟ್ಟಿದ್ದಾರೆ. ಪರೀಕ್ಷೆ ಒಂದೇ ಜೀವನವಲ್ಲ ಮತ್ತೆ ಪ್ರಯತ್ನ ಮಾಡು ಎಂದು ಹೆಗಲ ಮೇಲೆ ಕೈ ಇಟ್ಟು ತಂದೆ ಧೈರ್ಯ ತುಂಬಿದ್ದಾರೆ. ಇನ್ನು ಹದಿನೈದು ತಿಂಗಳ ಮಗುವಾಗಿದ್ದಾಗ ಎರಡೂ ಪಾದ ಸುಟ್ಟು ನೆನಪಿನ ಶಕ್ತಿ ಕಳೆದುಕೊಂಡಿರುವ ಅಭಿಷೇಕ್, ಇದೇ ಹಿನ್ನೆಲೆ ಉತ್ತರ ನೆನಪಿಟ್ಟುಕೊಂಡು ಬರೆಯಲು ವಿಫಲನಾಗಿದ್ದಾನೆ.
ಮತ್ತೆ ಪ್ರಯತ್ನ ಮಾಡಿ ಪಾಸ್ ಆಗ್ತೀನಿ:
ಫೇಲ್ ಆಗಿದ್ದರಿಂದ ಬಹಳ ಬೇಜಾರಾಗಿತ್ತು. ನಮ್ಮ ತಂದೆ ತಾಯಿ ಎಲ್ಲರೂ ಧೈರ್ಯ ಹೇಳಿದರು. ಫೇಲ್ ಆದರೂ ಧೈರ್ಯ ಹೇಳಿ ಕೇಕ್ ತಿನ್ನಿಸಿ ಸಂಭ್ರಮಿಸಿದ್ದಾರೆ. ಮತ್ತೆ ಪ್ರಯತ್ನ ಮಾಡಿ ಪಾಸ್ ಆಗ್ತೀನಿ. ಪರೀಕ್ಷೆಯಲ್ಲಿ ಫೇಲ್ ಆದರೂ ಜೀವನದಲ್ಲಿ ಸಾಧಿಸಿ ತೋರಿಸ್ತೀನಿ ಎಂದು ಅಭಿಷೇಕ ಹೇಳಿದ್ದಾನೆ.
ವರದಿ : ಜಿಲಾನಸಾಬ್ ಬಡಿಗೇರ್
