
ಬೆಂಗಳೂರು: ರಾಜ್ಯದ ಶಕ್ತಿ ಸೌಧ ವಿಧಾನಸೌಧಲ್ಲಿ ಆನೆಗಳ ಕಾರುಬಾರು ಕಂಡು ಬಂದಿತು, ಆಂಧ್ರಪ್ರದೇಶಕ್ಕೆ ಹಸ್ತಾಂತರ ಮಾಡುವ ನಿಟ್ಟಿನಲ್ಲಿ ಐದು ಆನೆಗಳನ್ನು ವಿಧಾನಸೌಧದಲ್ಲಿ ಹಸ್ತಾಂತರ ಮಾಡಲಾಯಿತು. ಸಿಎಂ ಸಿದ್ದರಾಮಯ್ಯ ಅವರು ಆಂಧ್ರಪ್ರದೇಶದ ಡಿ. ಸಿ. ಎಂ. ಪವನ್ ಕಲ್ಯಾಣ್ ಅವರಿಗೆ ಹಸ್ತಾಂತರ ಮಾಡಿದರು. ಅದಕ್ಕೂ ಮುನ್ನ ವಿಧಾನಸೌಧದಲ್ಲಿ ಆನೆಗಳಿಗೆ ಪೂಜೆ ಸಲ್ಲಿಸಲಾಯಿತು. ಡಿ. ಕೆ. ಶಿವಕುಮಾರ್ ಆನೆಗೆ ಹೂವು ಹಾಕುತ್ತಿದ್ದಂತೆ ಆನೆ ಸೊಂಡಿಲೆತ್ತಿ ನಮಸ್ಕಾರ ಮಾಡಿತು. ಆಂಧ್ರಪ್ರದೇಶಕ್ಕೆ ಒಟ್ಟು ಐದು ಕುಮ್ಕಿ ಆನೆಗಳನ್ನು ಹಸ್ತಾಂತರ ಮಾಡಲಾಯಿತು. ಸಕ್ರೆಬೈಲು ಆನೆ ಶಿಬಿರದಿಂದ 2 ಹಾಗೂ ದುಬಾರೆ ಆನೆ ಶಿಬಿರದಿಂದ 3 ಆನೆಗಳನ್ನು ತರಿಸಲಾಗಿದೆ, ಈ ಆನೆಗಳನ್ನು ಕಾಡಾನೆ ಹಿಡಿಯುವ ಕಾರ್ಯಾಚರಣೆಗಾಗಿ ಪಳಗಿಸಲಾಗಿದೆ.
ಆಂಧ್ರ ಪ್ರದೇಶ ಡಿ. ಸಿ. ಎಂ ಪವನ್ ಕಲ್ಯಾಣ್ ಅವರು ಕರ್ನಾಟಕಕ್ಕೆ ಆಗಮಿಸಿದ್ದು ರಾಜ್ಯದ ಅರಣ್ಯ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ’ ಎಂದು ಭಾಷಣ ಆರಂಭಿಸಿದ ಪವನ್ ಕಲ್ಯಾಣ್, ಭಾಷಣದುದ್ದಕ್ಕೂ ಕುವೆಂಪು ಅವರ ಸಾಲುಗಳನ್ನು ಅಲ್ಲಲ್ಲಿ ಬಳಸಿಕೊಂಡರು. ಸಾಧ್ಯವಾದಷ್ಟು ಕನ್ನಡವನ್ನೇ ತಮ್ಮ ಭಾಷಣದಲ್ಲಿ ಪವನ್ ಕಲ್ಯಾಣ್ ಬಳಸಿದರು. ಕರ್ನಾಟಕವು ಭಾರತ ಮಾತೆಯ ಮುದ್ದು ಮಗಳು’ ಎಂದು ಕೊಂಡಾಡಿದರು.
ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಸಚಿವರಾದ ಕೆ.ಜೆ. ಜಾರ್ಜ್, ದಿನೇಶ್ ಗುಂಡೂರಾವ್, ಬೈರತಿ ಸುರೇಶ್, ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತಿತರರು ಸೇರಿದಂತೆ ಇಲಾಖೆ ಅಧಿಕಾರಿಗಳು ಇದ್ದರು ಹಾಜರಿದ್ದರು.
ವರದಿ : ಬಡಿಗೇರ್ ಜಿಲಾನಸಾಬ್
