ವಿಜಯನಗರ ಜಿಲ್ಲೆ ಕೊಟ್ಟೂರು : ಜಗತ್ತು ಭಯೋತ್ಪಾನೆಯಿಂದ ಸಾಕಷ್ಟು ಸಂಕಷ್ಟವನ್ನು ಅನುಭವಿಸುತ್ತಿದೆ. ನಿರಪರಾಧಿ ವ್ಯಕ್ತಿಗಳು ಜೀವಕಳೆದುಕೊಂಡು ಅವರ ಕುಟುಂಬಗಳು ತೊಂದರೆಯನ್ನು ಅನುಭವಿಸುತ್ತಿವೆ. ಇಂತಹ ದುಷ್ಟ ಶಕ್ತಿಗಳ ವಿರುದ್ಧ ಪ್ರತಿಯೊಬ್ಬ ನಾಗರೀಕರು ಹೋರಾಡಬೇಕಾಗಿದೆ. ಇತ್ತೀಚೆಗೆ ಅಂದರೆ 22-ಏಪ್ರಿಲ್ 2025 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಬಳಿ ಐವರು ಉಗ್ರರು 26 ಪ್ರವಾಸಿಗರನ್ನು ಹತ್ಯೆಗೈದರು. ಹೀಗೆ ಅಮಾಯಕ ಜನರ ಬಲಿಪಡೆಯುವ ಭಯೋತ್ಪಾದನೆಯನ್ನು ವಿರೋಧಿಸಿ ಪ್ರತಿ ವರ್ಷ ಮೇ-21ನೇ ದಿನಾಂಕವನ್ನು “ಭಯೋತ್ಪಾದನಾ ವಿರೋಧಿ ದಿನ”ವನ್ನಾಗಿ ಆಚರಿಸಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಸರ್ಕಾರದ ನಿರ್ದೇಶನದಂತೆ ಕೊಟ್ಟೂರು ತಾಲೂಕು ಕಛೇರಿಯ ಮಹಾತ್ಮಾ ಗಾಂಧೀಜಿ ಸಭಾಂಗಣದಲ್ಲಿ ಇಂದು “ಭಯೋತ್ಪಾದನಾ ವಿರೋಧಿ ದಿನ”ವನ್ನು ಆಚರಿಸಲಾಯಿತು. ತಹಶೀಲ್ದಾರರಾದ ಅಮರೇಶ ಜಿ ಕೆ ಇವರು ಕಛೇರಿಯ ಅಧಿಕಾರಿ , ಸಿಬ್ಬಂದಿಯವರ ಜೊತೆಗೂಡಿ “ಅಹಿಂಸೆ ಹಾಗೂ ಸಹನೆಗೆ ಹೆಸರಾದ ನಮ್ಮ ರಾಷ್ಟ್ರದ ಭವ್ಯ ಪರಂಪರೆಯಲ್ಲಿ ದೃಢ ವಿಶ್ವಾಸವುಳ್ಳ ಭಾರತದ ಪ್ರಜೆಗಳಾದ ನಾವು ಎಲ್ಲಾ ಬಗೆಯ ಭಯೋತ್ಪಾದನೆ ಮತ್ತು ಹಿಂಸೆಯನ್ನು ನಮ್ಮೆಲ್ಲಾ ಶಕ್ತಿ ಸಾಮರ್ಥ್ಯದಿಂದ ಎದುರಿಸುತ್ತೇವೆ ಎಂದು
ಈ ಮೂಲಕ ಶ್ರದ್ಧಾಪೂರ್ವಕವಾಗಿ ಪ್ರತಿಜ್ಞೆ ಮಾಡುತ್ತೇವೆ. ನಮ್ಮ ಸಹ ಭಾಂಧವರಲ್ಲಿ ಶಾಂತಿ, ಸಾಮಾಜಿಕ ಸೌಹಾರ್ದತೆ ಮತ್ತು ಪರಸ್ಪರ ಅರಿವನ್ನು ಸಾಧಿಸಲು ಹಾಗೂ ಉತ್ತೇಜಿಸಲು ಮತ್ತು ಮಾನವ ಜೀವಕ್ಕೆ ಹಾಗೂ ಮೌಲ್ಯಗಳಿಗೆ ಬೆದರಿಕೆ ಒಡ್ಡುತ್ತಿರುವ ವಿಚ್ಛಿದ್ರಕಾರಿ ಶಕ್ತಿಗಳ ವಿರುದ್ಧ ಹೋರಾಡಲು ನಾವು ಪಣ ತೊಡುತ್ತೇವೆ” ಎಂದು ಪ್ರತಿಜ್ಞಾ ವಚನವನ್ನು ಮಾಡಿದರು.
- ಕರುನಾಡ ಕಂದ
