ಮುಂಬೈ : IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ 63ನೇ ಪಂದ್ಯದ ಮುಕ್ತಾಯದ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಫಿಕ್ಸಿಂಗ್ ಆರೋಪ ಕೇಳಿ ಬಂದಿದೆ. ಅದು ಕೂಡಾ ಮುಂಬೈ ಇಂಡಿಯನ್ಸ್ ವಿರುದ್ಧ, ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಅಂಪೈರ್ ಮುಂಬೈ ಇಂಡಿಯನ್ಸ್ ಪರ ತೀರ್ಪು ನೀಡಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಆರೋಪಿಸಲಾಗುತ್ತಿದೆ. ಆದರೆ ಈ ಆರೋಪಗಳಿಗೆ ಹುರುಳಿಲ್ಲ ಎಂಬುದಕ್ಕೆ ಸಾಕ್ಷಿ ಇಲ್ಲಿದೆ…
ಸೋಷಿಯಲ್ ಮೀಡಿಯಾದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕೇಳಿ ಬರುತ್ತಿರುವ ಮೊದಲ ಆರೋಪ ಮಿಚೆಲ್ ಸ್ಯಾಂಟ್ನರ್ ಅವರ ನೋಬಾಲ್. ಸೈಡ್ ಲೈನ್ಗೆ ಅವರ ಕಾಲು ತಾಗಿದ್ದರಿಂದ ಅದನ್ನು ಅಂಪೈರ್ ನೋಬಾಲ್ ನೀಡಬೇಕಿತ್ತು ಎಂದು ಅನೇಕರು ವಾದಿಸುತ್ತಿದ್ದಾರೆ. ಆದರೆ ಇಲ್ಲಿ ಸ್ಯಾಂಟ್ನರ್ ಅವರ ಮುಂಬದಿಯ ಕಾಲು ಸೈಡ್ ಲೈನ್ಗೆ ತಾಗಿರುವುದನ್ನು ಗಮನಿಸಬೇಕು. ಅಂದರೆ ರಿಟರ್ನ್ ಕ್ರೀಸ್ಗೆ (ಸೈಡ್ ಲೈನ್) ಅವರ ಹಿಂಬದಿಯ ಕಾಲು ತಾಗಿದರೆ ಮಾತ್ರ ನೋಬಾಲ್ ಎಂದು ಪರಿಗಣಿಸಲಾಗುತ್ತದೆ. ಇಲ್ಲಿ ಸ್ಯಾಂಟ್ನರ್ ಅವರ ಮುಂಬದಿಯ ಕಾಲು ಮಾತ್ರ ತಾಗಿದೆ. ಇದೇ ಎಸೆತದಲ್ಲಿ ಅವರ ಹಿಂಬದಿಯ ಕಾಲು ಎಲ್ಲಿತ್ತು ಎಂಬುದನ್ನು 2ನೇ ಚಿತ್ರದಲ್ಲಿ ನೋಡಬಹುದು. ಹಾಗೆಯೇ ಮಿಚೆಲ್ ಸ್ಟಾರ್ಕ್ ಅವರ ಹಿಂಬದಿಯ ಕಾಲು ಸೈಡ್ ಲೈನ್ಗೆ ತಾಗಿರುವುದಕ್ಕೆ ನೋ ಬಾಲ್ ನೀಡಲಾಗಿತ್ತು ಎಂಬುದನ್ನು ಸಹ ಇಲ್ಲಿ ಗಮನಿಸಬಹುದು. ಹೀಗಾಗಿ ಮಿಚೆಲ್ ಸ್ಯಾಂಟ್ನರ್ ಎಸೆದ ಚೆಂಡು ನೋಬಾಲ್ ಆಗಿರಲಿಲ್ಲ.
ಇನ್ನು ವಿಪ್ರಾಜ್ ನಿಗಮ್ ಬಾರಿಸಿದ ಚೆಂಡನ್ನು ಅಂಪೈರ್ ಸಿಕ್ಸ್ ಬದಲಿಗೆ ಫೋರ್ ನೀಡಿದ್ದಾರೆ ಎಂಬ ಆರೋಪವನ್ನು ಸಹ ಸೋಷಿಯಲ್ ಮೀಡಿಯಾದಲ್ಲಿ ಮುಂದಿಡಲಾಗುತ್ತಿದೆ. ಆದರೆ ಅದು ಫೋರ್ ಆಗಿದ್ದರಿಂದ ಫೋರ್ ರನ್ ನೀಡಿದ್ದರು ಎಂಬುದೇ ಸತ್ಯ. ಏಕೆಂದರೆ ಚೆಂಡು ಬೌಂಡರಿ ಲೈನ್ ಬಳಿ ಪಿಚ್ ಆಗಿತ್ತು. ಇಲ್ಲಿ ಚೆಂಡು ಪಿಚ್ ಆಗಿರುವ ಫೋಟೋವನ್ನು ನೀಡಲಾಗಿದೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಪಿಚ್ ಆದ ಬಳಿಕ ಬೌಂಡರಿ ಲೈನ್ ದಾಟಿದ ಚೆಂಡಿನ ಫೋಟೋವನ್ನು ಮಾತ್ರ ಹಂಚಿಕೊಳ್ಳಲಾಗಿದೆ. ಹೀಗಾಗಿ ಈ ಆರೋಪ ಕೂಡ ಸತ್ಯಕ್ಕೆ ದೂರ,
ಹಾಗೆಯೇ ಅಭಿಷೇಕ್ ಪೊರೆಲ್ ಅವರ ಸ್ಟಂಪ್ ಔಟ್ ಬಗ್ಗೆಯೂ ಆರೋಪಗಳು ಕೇಳಿ ಬರುತ್ತಿವೆ. ಇಲ್ಲಿ ಅಭಿಷೇಕ್ ಪೊರೆಲ್ ಕಾಲು ನೆಲಕ್ಕೆ ತಾಗುವ ಮುಂಚೆ ಬೇಲ್ಸ್ ಎಗರಿದ್ದರಿಂದ ಮೂರನೇ ಅಂಪೈರ್ ಅದನ್ನು ಔಟ್ ನೀಡಿದ್ದಾರೆ ಎಂಬುದೇ ಸತ್ಯ. ಅಂದರೆ ಇಲ್ಲಿ ಸ್ಟಂಪ್ ಬೇಲ್ಸ್ ಎಗರುವುದನ್ನು ಪರಿಗಣಿಸಲಾಗುತ್ತದೆ ಹೊರತು ಕೆಳಗೆ ಬೀಳುವುದನ್ನಲ್ಲ. ಅದರಂತೆ ಬೇಲ್ಸ್ ಸ್ಟಂಪ್ ಮೇಲಿಂದ ಎಗರುವಾಗ ಅಭಿಷೇಕ್ ಅವರ ಕಾಲು ಗಾಳಿಯಲ್ಲಿತ್ತು. ಇದೇ ಕಾರಣದಿಂದಾಗಿ ಟಿವಿ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದರು. ಹೀಗಾಗಿ ಮುಂಬೈ ಇಂಡಿಯನ್ಸ್ ಮ್ಯಾಚ್ ಫಿಕ್ಸಿಂಗ್ ಮಾಡಿದ್ದಾರೆ ಎಂಬ ಆರೋಪಕ್ಕೆ ಯಾವುದೇ ಹುರುಳಿಲ್ಲ.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ಪರ ಸೂರ್ಯಕುಮಾರ್ ಯಾದವ್ ಅಜೇಯ 73 ರನ್ ಬಾರಿಸಿದ್ದರು. ಈ ಮೂಲಕ ಮುಂಬೈ ಇಂಡಿಯನ್ಸ್ 20 ಓವರ್ಗಳಲ್ಲಿ 180 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 121 ರನ್ಗಳಿಗೆ ಆಲೌಟ್ ಆಗಿದೆ. ಈ ಮೂಲಕ 59 ರನ್ಗಳ ಜಯ ಸಾಧಿಸಿ ಮುಂಬೈ ಇಂಡಿಯನ್ಸ್ ತಂಡವು ಪ್ಲೇಆಫ್ಗೆ ಎಂಟ್ರಿ ಕೊಟ್ಟಿದೆ.
ವರದಿ ಜಿಲಾನಸಾಬ್ ಬಡಿಗೇರ್
