ಗದಗ: ತೋಂಟದಾರ್ಯ ಮಠದ ರಥಬೀದಿಯಲ್ಲಿ ನಡೆಯುವ ಜಾತ್ರೆಯ ವಿರುದ್ಧ ಶ್ರೀರಾಮ ಸೇನೆ ನೀಡಿದ್ದ ಬಂದ್ ಕರೆಗೆ ನಗರದಲ್ಲಿ ಸೋಮವಾರ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.
ಬಂದ್ ನಡೆಸಲು ಅವಕಾಶ ಕಲ್ಪಿಸದಂತೆ ಪೊಲೀಸ್ ಬಿಗಿ ಬಂದೋಬಸ್ತ್ ಹಾಕಲಾಗಿತ್ತು. ಪೋಲೀಸರ ನಿಷೇಧಾಜ್ಞೆ ನಡುವೆಯೇ ಬೆಳಿಗ್ಗೆ 10 ಗಂಟೆ ಸುಮಾರಿಗೆ ಶ್ರೀರಾಮ ಸೇನೆ ಕಾರ್ಯಕರ್ತರು ಮಠದ ವಿರುದ್ಧ ಧಿಕ್ಕಾರ ಕೂಗಿದರು. ಜೈ ಶ್ರೀರಾಮ್ ಘೋಷಣೆ ಮೊಳಗಿಸುತ್ತಾ ರಥದ ಬೀದಿಗೆ ನುಗ್ಗಲು ಯತ್ನಿಸಿದರು.
ಆಗ ಶ್ರೀರಾಮ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಖಾನಪ್ಪನವರ ಸೇರಿದಂತೆ 20ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು, ಡಿ.ಆರ್ ವ್ಯಾನ್‌ನಲ್ಲಿ ಕರೆದೊಯ್ದರು, ಮಧ್ಯಾಹ್ನವಾಗುತ್ತಿದ್ದಂತೆ ಜಾತ್ರೆ ಆರಂಭಗೊಂಡಿತು, ಸಂಜೆ ಆಗುತ್ತಿದ್ದಂತೆ ಜನರು ಬಂದರು. ಯಥಾರೀತಿ ಜಾತ್ರೆ ಕಳೆಗಟ್ಟಿತು.
ಎಎಸ್‌ಪಿ ನಾಲ್ವರು ಡಿವೈಎಸ್‌ಪಿ ಹತ್ತು ಸಿಪಿಐ ಹತ್ತು ಪಿಎಸ್ಐ 200ಕ್ಕೂ ಹೆಚ್ಚು ಸಿಬ್ಬಂದಿ ಸೇರಿದಂತೆ ಎರಡು ಕೆಎಸ್‌ಆರ್‌ಪಿ ತುಕಡಿಗಳು ಹಾಗೂ ಆರು ಡಿಆರ್ ಸಿಬ್ಬಂದಿಯನ್ನು ಬಂದೋಬಸ್ತ್‌ಗೆ ನಿಯೋಜನೆ ಮಾಡಲಾಗಿತ್ತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ತೋಂಟದಾರ್ಯ ಮಠ ಹಾಗೂ ಸುತ್ತಮುತ್ತಲಿನ ಸ್ಥಳಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲು ಸಿಬ್ಬಂದಿಗೆ ಸೂಚನೆ ನೀಡಿದರು.
ಶರಣ ಸಮಾಜದ ಪ್ರತಿಷ್ಠಿತ ತೋಂಟದಾರ್ಯ ಮಠದ ಜಾತ್ರೆಯಲ್ಲಿ ಅನ್ಯ ಧರ್ಮದ ಹಾಗೂ ಹೊರಗಿನ ವ್ಯಾಪಾರಸ್ಥರಿಗೆ ಅವಕಾಶ ನೀಡಲಾಗಿದೆ ಎಂಬ ಕಾರಣದಿಂದ ಶ್ರೀರಾಮಸೇನೆ ಗದಗ ನಗರದಲ್ಲಿ ಬಂದ್‌ಗೆ ಕರೆ ನೀಡಿತ್ತು.
ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ತೋಂಟದಾರ್ಯ ಜಾತ್ರಾ ಸಮಿತಿಯವರು ಹಲವು ದಿನಗಳಿಂದ ಬಂದ್‌ಗೆ ಕಿವಿಗೊಡದಿರಿ ಎಂದು ಸ್ಪಷ್ಟನೆ ನೀಡುತ್ತಲೇ ಬಂದಿದ್ದರು.
ತೋಂಟದಾರ್ಯ ಮಠದ ವಿರುದ್ಧ ಇಲ್ಲಸಲ್ಲದ ಹೇಳಿಕೆ ನೀಡುತ್ತಾ ಅಪಪ್ರಚಾರ ಮಾಡುತ್ತಿರುವ ಶ್ರೀರಾಮ ಸೇನೆಯ ಪ್ರಮುಖ ರಾಜು ಖಾನಪ್ಪನವರ ನಡೆಯನ್ನು ಶ್ರೀಮಠದ ಭಕ್ತರು ಖಂಡಿಸಿದ್ದಾರೆ.
- ಕರುನಾಡ ಕಂದ
