ಭಾವನೆಗಳ ಜೋಡಿಸುವ
ಸಾಹಿತಿಯೊಬ್ಬ ಭೇಟಿ ಕೊಟ್ಟ
ವೇಶ್ಯೆಯ ಮನೆಗೆ;
ಜೋಡಿ ಗುಡ್ಡಗಳ ಮಧ್ಯೆ
ಉದಯಿಸುವ ರವಿಗೆ
ಹೋಲಿಸಿ, ಬರೆದುಕೊಟ್ಟ
ಕವಿತೆಯೊಂದನು ಆಕೆಗೆ;
ಆಕೆಯದು ಒಂದೇ ಪ್ರಶ್ನೆ!!!
ಬಣ್ಣಗಳ ಬದಲಿಸುವ
ಕಲೆಗಾರ, ಭೇಟಿ ಕೊಟ್ಟ
ಈಕೆಯ ಮನೆಗೆ;
ರವಿಕೆ ಜಾರಿದ
ತುಂಬು ಎದೆಯ ಬಾಲೆಯ
ಚಿತ್ರ ಬಿಡಿಸಿ
ನೀಡಿದ ಉಡುಗರೆಯ
ಆಕೆಯದು ಒಂದೇ ಪ್ರಶ್ನೆ!!!
ಧ್ವನಿಯ ಭೇದಿಸುವ
ಸಂಗೀತಗಾರ ದಾಟಿದ
ಕಡುನೀಲಿ ಬೇಲಿಯ
ಶೃಂಗಾರ ರಸವ
ಮುಂದು ಮಾಡಿ
ಹೆಣೆದ, ಆಕೆಗೆಂದು
ಮಧವೇರುವ ರಾಗವ
ಆಕೆಯದು ಒಂದೇ ಪ್ರಶ್ನೆ!!!
ಜೀವ ಉಳಿಸುವ
ವೈದ್ಯನೊಬ್ಬ, ತಟ್ಟಿದ
ಆಕೆಯ ಮನೆಯ ಕದವ
ಸೊಳೆಯ ಮೂಳೆಯ
ಮಿಡಿತವನ್ನರಿತು;
ಮಾಯದ ಗಾಯಕೆ
ಸೂಚಿಸಿದ ಔಷಧಿಯ
ಆಕೆಯದು ಒಂದೇ ಪ್ರಶ್ನೆ!!!!
ಬಡತನದಲಿ ಬೆಂದು
ಬೆಳೆದ, ರಾಜಕಾರಣಿಯೊಬ್ಬ
ಆಕೆಗಾಗಿ ಮರುಗಿದ;
ಕೇಳಿದ ? ನನ್ನ ಹೊರತಾರು
ಈಕೆಗೆ ಉಚಿತ ಆಧಾರ?
ಗುರುತುಗಳಿರದ ಮನೆಯ
ಪ್ರವೇಶಕೆ ;ಮಾಡಿದ
ಹದಿನೆಂಟು ಕಡ್ಡಾಯ
ಆಕೆಯದು ಒಂದೇ ಪ್ರಶ್ನೆ!!!
ಆಕೆಯದು ಒಂದೇ ಪ್ರಶ್ನೆ!!!
ನನ್ನ ಮೈಯ ಬಣ್ಣ
ತೋರದಂತೆ
ಬಟ್ಟೆ ಮುಚ್ಚಿ;
ಮೌನ ಕಂಬನಿಯ
ನೋವ ನಿವಾರಿಸಲು
ವಯಸ್ಸಿನ ಹಂಗನು
ಮೀರಬೇಕೆಂದು
ನಿಮಗಾರಿಗೂ
ಅನ್ನಿಸಲಿಲ್ಲವೆ??
ಆಕೆಯದು ಒಂದೇ ಪ್ರಶ್ನೆ!!!
ಆಕೆಯದು ಒಂದೆ ಪ್ರಶ್ನೆ!!!
- ಮಂಜುನಾಥ ಮೇಟಿ




















