ಮುಂಜಾನೆಯ ಮುಸುಕಿನಲಿ
ಅರುಣೋದಯದ ವೇಳೆಯಲಿ
ನೆನಪಾಗುವಳು ಅವಳು..
ರವಿಮಾಮನ ತಿಳಿಕಿರಣದಲಿ
ಎಲೆಯ ಮೇಲೆ ಕುಳಿತು
ಕೈಜಾರಿ ಹೋದ ಮಂಜಿನಂತೆ..!
ಆ ಇಬ್ಬನಿಯಂತೆ..!
ಮಧ್ಯಾಹ್ನದ ಹೊತ್ತಿನಲಿ
ಸುಡುಬಿಸಿಲ ಬೇಗೆಯಲಿ
ನೆನಪಾಗುವಳು ಅವಳು..
ಅಲೆದಾಡಿ, ತಿರುಗಾಡಿ
ಬಳಲಿ ಬೆಂಡಾಗಿ ಬಾಯಾರಿದ ಮನಕೆ
ದಾಹ ನೀಗಿಸಲು ಬಂದ ಗಂಗೆಯಂತೆ..!
ನಮ್ ತುಂಗೆಯಂತೆ..!
ಸೂರ್ಯಾಸ್ತದ ಸಮಯದಲ್ಲಿ
ಇಳಿಬಿಸಿಲ ಹೊತ್ತಿನಲಿ
ನೆನಪಾಗುವಳು ಅವಳು..
ಹೆಂಡ ಕುಡಿದ ಹುಚ್ಚು ಕುದುರೆಯಂತೆ
ಬೀದಿ ಬೀದಿಯಲಿ ತಿರುಗಿ ದಣಿದ ದೇಹಕೆ
ಮುದ ನೀಡಲು ಬೀಸುವ ಗಾಳಿಯಂತೆ..!
ತಂಗಾಳಿಯಂತೆ..!
ಹುಣ್ಣಿಮೆಯ ರಾತ್ರಿಯಲಿ
ತಿಳಿಹಾಲ ಬೆಳಕಿನಲಿ
ನೆನಪಾಗುವಳು ಅವಳು..
ಹಠ ಮಾಡಿ ಅಳುತಿರುವ
ಕರುಳ ಬಳ್ಳಿಗೆ
ಚಂದ ಮಾಮನ ತೋರಿಸುತ
ಲಾಲಿಯನು ಹಾಡುತಾ
ಕೈತುತ್ತು ತಿನಿಸುತ್ತಾ
ರಮಿಸುವ ಆ ತಾಯಿಯಂತೆ…!
ಮಹಾ ಮಾಯಿಯಂತೆ..!

~ ಸಿದ್ದು ಗುಂಡ




















