ಯುಗವೆನಿತೊ
ಜಗವೆನಿತೊ
ಸೃಷ್ಟಿಯೋಳ್,
ಬರಡು ಅಂಡಗಳೆನಿತೋ
ಬ್ರಹ್ಮಾಂಡದೋಳ್,
ಈ ಎನ್ನ ಜಗ ಉರುಳುತಿಹುದು
ನಿರಂತರ,
ಸೃಷ್ಟಿಸುತ ಮನ್ವಂತರ
ತುಂಬಿಕೊಂಡು ಒಡಲೊಳಗೆ
ಕೋಟಿ ಕೋಟಿ ಜೀವ ಸಂಕುಲ.
ಈ ಜೀವಾಂಡ ಉರುಳಿದಂತೆಲ್ಲಾ
ನಮ್ಮ ನಿಮ್ಮೆಲ್ಲರ ಬದುಕು ಸವೆಯುತಿಹುದು,
ಆಯಸ್ಸು ಕರಗುತಿಹುದು
ಎಂಬ ವಿವೇಕದೊಡನೆ
ಹೊಸ ಅಲೆಯ
ಜೀವ ಸೆಲೆಯು
ಉಕ್ಕಿ ಉಕ್ಕಿ ಹರಿಯಲಿ,
ಪ್ರೀತಿ ವಿಶ್ವಾಸಗಳ ಹಾಲ್ಗಡಲು
ತುಂಬಿ ತುಂಬಿ ತುಳುಕಲಿ,
ಬೇವಿನೋಳ್ ಬೆಲ್ಲವೋ
ಬೆಲ್ಲದೊಳ್ ಬೇವೋ,
ನೋವು ನಲಿವುಗಳ
ಸಂಗಮವಿದು.
ಇದುವೇ ಜೀವ
ಇದು ಜೀವನ.
– ರಾಜಾ ವಿಜಯ ನಾಯಕ




















