ಬೆಳಗಾವಿ: ಅಥಣಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಓದಿ ರಾಜ್ಯ ಮಟ್ಟದಲ್ಲಿ ಅಪ್ರತಿಮ ಸಾಧನೆ ಮಾಡಿದ ಪ್ರಾರ್ಥನಾ ನಾಗಪ್ಪ ಬಿರಾದರ ಪಾಟೀಲ್ ಅವರಿಗೆ ಲೋಕೋಪಯೋಗಿ ಇಲಾಖೆ ಸಚಿವರಾದ ಸತೀಶ್ ಜಾರಕಿಹೊಳಿ ಅವರು ದೂರವಾಣಿ ಮೂಲಕ ಕರೆ ಮಾಡಿ ಹಾರ್ಧಿಕ ಅಭಿನಂದನೆ ಸಲ್ಲಿಸಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿರುವ ಪ್ರಾರ್ಥನಾ ಅವರ ಸಾಧನೆಗೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿ, “ಗ್ರಾಮೀಣ ಹಿನ್ನೆಲೆಯಿಂದ ಬಂದ ವಿದ್ಯಾರ್ಥಿನಿಯ ಈ ಯಶಸ್ಸು ಶ್ರಮ, ಪೋಷಕರ ಬೆಂಬಲ ಮತ್ತು ಶಿಕ್ಷಕರ ಮಾರ್ಗದರ್ಶನದ ಫಲವಾಗಿದೆ. ಇಂತಹ ಸಾಧನೆಗಳು ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗುತ್ತವೆ” ಎಂದು ತಿಳಿಸಿದ್ದಾರೆ.
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಅಥಣಿ ತಾಲೂಕಿನ ಕಟಗೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರಾರ್ಥನಾ ಅವರ ಸಾಧನೆ ನಿಜಕ್ಕೂ ಮಾದರಿಯಾಗಿದ್ದು, ಅವರ ಮುಂದಿನ ವಿದ್ಯಾಭ್ಯಾಸ ಮತ್ತು ಭವಿಷ್ಯ ಇನ್ನಷ್ಟು ಉಜ್ವಲವಾಗಿರಲಿ ಎಂದು ಸಚಿವರು ಶುಭ ಹಾರೈಸಿದರು.
ವರದಿ ವಿಠ್ಠಲ ಖೋಕಾಟೆ




















