ಹಲವು ಕಣ್ಣುಗಳಲ್ಲಿ ಒಲವು ಚೆಲ್ಲಿದ ತಾಯಿ
ಮನುಜಾಂತಃಕರಣದ ಮಮತಾಮಯಿ
ಮನೆಮಂದಿತರವಿರುವ ನೆರೆಮಂದಿಯಲು ನೀನು
ಮಾತೃಕೆಯೆ ಮೈವೆತ್ತ ಕರುಣಾಮಯಿ ।
ನಿನಗು ಬಂದಿತೆ ಕೇಡು?
ಬಹುಜನಕೆ ನೋವು ॥
ಕನಿಕರದ ಕರುಳಿತ್ತು ಎಳವೆಯಲೆ ಹಿರಿತನದು
ಮನೆತನಕೆ ಬೆಲೆಯಿತ್ತು ಭೌತಿಕದಿ ಬೆಳೆದು
ನೈತಿಕತೆ ಹುದುಗಿತ್ತು ಆತ್ಮೋನ್ನತಿಯ ನೆನೆದು
ಮಾತೃಕೆಯೆ ಮೈವೆತ್ತ ಕರುಣಾಮಯಿ |
ನಿನಗು ಬಂದಿತೆ ಕೇಡು?
ಬಹುಜನಕೆ ನೋವು ||
ತುಹಿನಗಿರಿ ತಪ್ಪಲಲಿ ತಪಗೈದು ಬಂದಂತೆ
ನಡೆನುಡಿಯ ತುಂಬಿತ್ತು ಸದು ವಿನಯ ಮಮತೆ
ನಗೆಹೂವ ಬೀರುವೊಲು ಹಗೆಕಾಣದಿರು ಕ್ಷಮತೆ
ಮಾತೃಕೆಯೆ ಮೈವೆತ್ತ ಕರುಣಾಮಯಿ |
ನಿನಗು ಬಂದಿತೆ ಕೇಡು?
ಬಹುಜನಕೆ ನೋವು ||
ಶತಮಾನಗಳ ಮೀರು ಮಾನವತೆ ತೇರೇರು
ಕನಸು ಮೊಳೆದಂತಿತ್ತು ಬಳಗಪೂರ್ತಿ
ಮೋಡವಿರದ ನಡುವೆ ಸಿಡಿಲೆರಗಿ ಕರಗಿದೆಯೆ
ಮಾತೃಕೆಯೆ ಮೈವೆತ್ತ ಕರುಣಾಮಯಿ |
ನಿನಗು ಬಂದಿತೆ ಕೇಡು?
ಬಹುಜನಕೆ ನೋವು ||

✍️ಮಾಸ್ಕೇರಿ ಎಂ.ಕೆ. ನಾಯಕ
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು,
ದಾಂಡೇಲಿ.




















