ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗಳ ನಡುವೆ, ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಶಿವಕುಮಾರ್ ಅವರ ಪ್ರಮಾಣವಚನ ಸಮಾರಂಭಕ್ಕೆ ಭರ್ಜರಿ ಸಿದ್ಧತೆಗಳು ಆರಂಭಗೊಂಡಿವೆ. ಕಾಂಗ್ರೆಸ್ ಹೈಕಮಾಂಡ್ನಿಂದ ಗ್ರೀನ್ ಸಿಗ್ನಲ್ ದೊರೆತಿರುವ ಹಿನ್ನೆಲೆ, ಶುಕ್ರವಾರ ನಡೆಯಲಿರುವ ಪದಗ್ರಹಣ ಕಾರ್ಯಕ್ರಮಕ್ಕಾಗಿ ಸರ್ಕಾರ ಹಾಗೂ ಪಕ್ಷದ ವಲಯದಲ್ಲಿ ಚಟುವಟಿಕೆಗಳು ಗರಿಗೆದರಿವೆ.
ನಗರದ ಕಂಠೀರವ ಕ್ರೀಡಾಂಗಣ ಅಥವಾ ವಿಧಾನಸೌಧದ ಮುಂದೆ ಬೃಹತ್ ವೇದಿಕೆ ಸಿದ್ದ ಪಡಿಸಲು ಅಧಿಕಾರಿಗಳು ಸ್ಥಳ ವೀಕ್ಷಣೆ ನಡೆಸಿದರು.
ಈಗಾಗಲೇ ಸರ್ಕಾರದ ಹಿರಿಯ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಉನ್ನತಾಧಿಕಾರಿಗಳು ಕ್ರೀಡಾಂಗಣಕ್ಕೆ ಹಾಗೂ ವಿಧಾನಸೌಧಕ್ಲೆ ಭೇಟಿ ನೀಡಿ ಭದ್ರತೆ, ಜನಸಂದಣಿ ನಿಯಂತ್ರಣ ಹಾಗೂ ಕಾರ್ಯಕ್ರಮ ವ್ಯವಸ್ಥೆಗಳ ಕುರಿತು ಪರಿಶೀಲನೆ ನಡೆಸಿದ್ದಾರೆ.
ಪ್ರಮಾಣವಚನ ಸಮಾರಂಭದಲ್ಲಿ ಸುಮಾರು 50ಸಾವಿರಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಹಾಗೂ ಡಿ.ಕೆ. ಶಿವಕುಮಾರ್ ಅಭಿಮಾನಿಗಳು ಭಾಗವಹಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಈ ಹಿನ್ನೆಲೆ ಕ್ರೀಡಾಂಗಣ ಅಥಾವ ವಿಧಾನಸೌಧ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲು ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ.
ಇನ್ನೊಂದೆಡೆ, ಕಾರ್ಯಕ್ರಮದ ದಿನ ಟ್ರಾಫಿಕ್ ದಟ್ಟಣೆ ಉಂಟಾಗದಂತೆ ನಗರ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡುವ ಕುರಿತೂ ಪೊಲೀಸ್ ಇಲಾಖೆ ಸಿದ್ಧತೆ ನಡೆಸಿದೆ. ಪ್ರಮುಖ ರಸ್ತೆಗಳಲ್ಲಿ ಬದಲಿ ಮಾರ್ಗ ವ್ಯವಸ್ಥೆ ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ.
ಕಾರ್ಯಕ್ರಮಕ್ಕೆ ಆಗಮಿಸುವ ಸಾವಿರಾರು ಕಾರ್ಯಕರ್ತರ ವಾಹನಗಳ ನಿಲುಗಡೆಗಾಗಿ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ಕುರಿತೂ ಅಧಿಕಾರಿಗಳು ಸಮಾಲೋಚನೆ ನಡೆಸಿದ್ದಾರೆ. ಸಮಾರಂಭವನ್ನು ಐತಿಹಾಸಿಕವಾಗಿ ನಡೆಸಲು ಕಾಂಗ್ರೆಸ್ ನಾಯಕರು ಸಕಲ ಸಿದ್ಧತೆಯಲ್ಲಿ ತೊಡಗಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್




















