
ಬಳ್ಳಾರಿ / ಕಂಪ್ಲಿ : ಪಟ್ಟಣದ ಪುರಸಭೆಗೆ ಒಳಪಡುವ ಉದ್ಯಾನವನಗಳು ಸಮರ್ಪಕ ನಿರ್ವಹಣೆ ಇಲ್ಲದೇ ಕಳೆಗುಂದುವಂತೆ ಮಾಡಿರುವುದು ಒಂದೆಡೆಯಾದರೆ ಮತ್ತೊಂದೆಡೆ ಸಸಿಗಳಿಂದ ಹೆಮ್ಮರವಾಗಿ ಬೆಳೆದು ನಿಂತ ಕೋನೋ ಕಾರ್ಪಸ್ ಗಿಡಗಳು ಮನುಷ್ಯ ಮತ್ತು ಪ್ರಾಣಿ, ಪಕ್ಷಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರತೊಡಗಿವೆ.
ನಗರದ ಸೌಂದರ್ಯೀಕರಣ ಹಾಗೂ ಪರಿಸರವನ್ನು ಹಸಿರಾಗಿಸಲು ಇಲ್ಲಿನ ಹೊಸಪೇಟೆ ಬೈಪಾಸ್ ರಸ್ತೆಯ ಮಹಾಲಕ್ಷ್ಮೀ ಲೇಔಟ್ನ ಪುರಸಭೆ ವ್ತಾಪ್ತಿಗೆ ಒಳಪಡುವ ಉದ್ಯಾನವನದಲ್ಲಿ ನೆಟ್ಟಿರುವ ಕೋನೋ ಕಾರ್ಪಸ್ ಗಿಡಗಳು ಜನರ ಉಸಿರಿಗೆ ಕಂಟಕವಾಗುವ ಭೀತಿ ಎದುರಾಗಿದೆ.
ಪಟ್ಟಣದ ಲೇಔಟ್ ನಲ್ಲಿರುವ ಉದ್ಯಾನವನದಲ್ಲಿ ನೂರಾರು ಗಿಡಗಳನ್ನು ಹಾಗೂ ಇತರೆ ಕಡೆಗಳಲ್ಲಿ ಸಾಕಷ್ಟು ಗಿಡಗಳನ್ನು ನೆಡಲಾಗಿತ್ತು. ಇಲ್ಲಿನ ಸ್ಥಳದಲ್ಲಿ ಗಿಡಗಳನ್ನು ನೆಡುವ ಮುನ್ನ ಇವೂ ಪರಿಸರಕ್ಕೆ ಹಾನಿಕಾರಕ ಎಂಬುದು ತಿಳಿದಿದ್ದರೆ, ಇಲ್ಲಿನ ಉದ್ಯಾನವನ ಸೇರಿದಂತೆ ನಾನಾ ಕಡೆಗಳಲ್ಲಿ ಕೋನೋ ಕಾರ್ಪಸ್ ಹುಟ್ಟುತ್ತಿದ್ದಿಲ್ಲ. ಆದರೆ, ಇಲ್ಲಿ ಸಾಕಷ್ಟು ಗಿಡಗಳು ಬೆಳೆದು, ಈಗ ಪರಿಸರ ಮತ್ತು ಮನುಷ್ಯನ ಮೇಲೆ ದುಷ್ಪರಿಣಾಮದ ಹಿನ್ನಲೆ ಸ್ಥಳೀಯ ನಿವಾಸಿಗಳು ಗಿಡಗಳ ತೆರವಿಗೆ ಹಕ್ಕೊತ್ತಾಯ ಮಾಡುವಂತಾಗಿದೆ.
ಇಂತಹ ಗಿಡಗಳನ್ನು ನೆರೆಯ ಹಲವು ರಾಜ್ಯಗಳಲ್ಲಿ ನಿಷೇಧಿಸಿದುಂಟು. ರಾಜ್ಯ ಸರ್ಕಾರದ ಸ್ಪಷ್ಟತೇ ಇಲ್ಲದೇ ಇದ್ದರೂ, ಅರಣ್ಯ ಇಲಾಖೆಯು ಪರಿಸರಕ್ಕೆ ಮಾರಕವಾದ ಕೋನೋ ಕಾರ್ಪಸ್ ಗಿಡಗಳಿಗೆ ನಿರ್ಬಂಧಗಳನ್ನು ವಿಧಿಸಿದೆ. ಆದ್ದರಿಂದ ಕರ್ನಾಟಕ ರಾಜ್ಯದಲ್ಲಿ ಇಂತಹ ಗಿಡಗಳನ್ನು ಬುಡ ಸಮೇತವಾಗಿ ತೆಗೆದು ಹಾಕಲು ಸರ್ಕಾರ ಸೂಕ್ತ ನಿರ್ದೇಶನ ನೀಡಬೇಕಾಗಿದೆ. ಇಂತಹ ನಿಷೇಧಿತ ಸಸಿಗಳನ್ನು ಪಟ್ಟಣ ಸೇರಿದಂತೆ ತಾಲೂಕಿನದಲ್ಲಿ ಬೆಳೆಸುತ್ತಿರುವುದು ವಿಪರ್ಯಸವಾಗಿದೆ.
ಉಸಿರು ನಿಲ್ಲಿಸುವ ಗಿಡ :
ಕೋನೋ ಕಾರ್ಪಸ್ ಎಂಬ ಗಿಡ ತುಂಬಾ ಅಪಾಯಕಾರಿಯಾಗಿದೆ. ಈ ಸಸ್ಯ ನೆಡುವುದರಿಂದ ಅಂತರ್ಜಲ ಮಟ್ಟ ಕುಸಿತಕ್ಕೆ ಕಾರಣ ಜತೆಗೆ ಜನರಿಗೆ ಉಸಿರಾಟ ಸಮಸ್ಯೆ ಹಾಗೂ ಅಸ್ತಮಾ ತಂದೊಡ್ಡಲಿದೆ ಎಂಬುದು ಅಧ್ಯಯನ ವರದಿಗಳಲ್ಲಿ ಬಹಿರಂಗ ಆಗಿದೆ. ಗಾಳಿಯಲ್ಲಿ ಬೀಜಗಳು ಹರಡಿದರೂ ಕೂಡ ವೇಗವಾಗಿ ಬೆಳೆಯುವ ಶಕ್ತಿ ಹೊಂದಿರುವ ಹಾಗೂ ಕಡಿಮೆ ನೀರಿನಲ್ಲೇ ಹಚ್ಚ ಹಸಿರಾಗಿ ಕಂಗೊಳಿಸುವ ಗಿಡಗಳ ನಿರ್ವಹಣೆ ಕೂಡ ಸುಲಭ ಎಂಬುವಂತಾಗಿದೆ. ಇದರಿಂದ ಅತಿ ಹೆಚ್ಚಾಗಿ ಇಂತಹ ಗಿಡಗಳ ಮೊರೆ ಹೋಗುತ್ತಿರುವುದು ದುರ್ಧೈವವಾಗಿದೆ.
ತೆರವಿಗೆ ಆಗ್ರಹ :
ಆಕ್ಸಿಜನ್ ಬದಲು ಕಾರ್ಬನ್ ಉತ್ಪಾದಿಸುವ ಕೋನೋ ಕಾರ್ಪಸ್ ಗಿಡಗಳನ್ನು ಪಟ್ಟಣದ ಉದ್ಯಾನವನ ಹಾಗೂ ಇತರೆ ಕಡೆಗಳಲ್ಲಿ ನೆಟ್ಟಿರುವುದರಿಂದ ಅವುಗಳನ್ನು ತೆರವುಗೊಳಿಸಿ ಪರಿಸರ ಉಳಿಸಲು ಕ್ರಮ ಜರುಗಿಸುವ ಜವಾಬ್ದಾರಿ ಅರಣ್ಯ ಮತ್ತು ಪುರಸಭೆ ಮೇಲಿದ್ದು, ನಗರದಲ್ಲಿ ಪರಿಸರ ಗುಣಮಟ್ಟಕ್ಕಾಗಿ ನಮ್ಮ ಪರಿಸರ ಉಳಿಸಲು ಕೂಡಲೇ ಕೋನೋ ಕಾರ್ಪಸ್ ಗಿಡಗಳನ್ನು ತೆರವು ಮಾಡಬೇಕೆಂಬುದು ಸ್ಥಳೀಯ ನಿವಾಸಿಗಳ, ಸಾರ್ವಜನಿಕರ, ಪರಿಸರ ಪ್ರೇಮಿಗಳ ಒಕ್ಕೂರೋಲಿನ ದನಿಯಾಗಿದೆ .
ಅಪಾಯದ ವಿದ್ಯುತ್ ಪರಿವರ್ತಕ :
ಇಲ್ಲಿನ ಉದ್ಯಾನವನದಲ್ಲಿ ಮಕ್ಕಳ ಆಟಿಕೆ ಸಾಮಾನುಗಳಿದ್ದು, ಸಾಕಷ್ಟು ಮಕ್ಕಳು ಸೇರಿದಂತೆ ಸಾರ್ವಜನಿಕರು ಬರುವದುಂಟು. ಆದರೆ, ಇಲ್ಲಿನ ವಿದ್ಯುತ್ ಪರಿವರ್ತಕದ ಅಪಾಯದ ನಡುವೆ ಮಕ್ಕಳು, ಜನರು ಸಮಯ ಕಳೆಯುತ್ತಿದ್ದಾರೆ. ಮತ್ತು ಇಲ್ಲಿ ಮುಳ್ಳುಗಂಟಿಗಳಿಂದ ಆವೃತವಾಗಿದ್ದು, ವಿಷಜಂತು ನಡುವೆ ಮಕ್ಕಳು, ಜನರು ವಾಸಿಸುವಂತಾಗಿದೆ. ಆದ್ದರಿಂದ ಅಪಾಯಕ್ಕೆ ಆಹ್ವಾನಿಸುತ್ತಿರುವ ವಿದ್ಯುತ್ ಪರಿವರ್ತಕವನ್ನು ಬೇರೆಡೆ ಸ್ಥಳಾಂತರಿಸಬೇಕು. ಮತ್ತು ಸ್ಬಚ್ಚತೆಗೆ ಹೆಚ್ಚಿನ ಅಧ್ಯತೆ ನೀಡಬೇಕೆಂದು ಇಲ್ಲಿನ ಜನರ ಹಕ್ಕೊತ್ತಾಯವಾಗಿದೆ.
” ಇಲ್ಲಿನ ಲೇಔಟ್ ಸೇರಿದಂತೆ ಇನ್ನಿತರ ಕಡೆಗಲ್ಲಿ ಪರಿಸರ ಹಾನಿಕಾರ ಮತ್ತು ಮನುಷ್ಯ ಉಸಿರಾಟಕ್ಕೆ ಸಮಸ್ಯೆ ತಂದೊಡ್ಡುವ ಕೋನೋ ಕಾರ್ಪಸ್ ಗಿಡಗಳನ್ನು ತೆರವುಗೊಳಿಸಿ, ಗುಣಮಟ್ಟದ ಪರಿಸರ ಉಳಿಸುವುದು ನಮ್ಮ ಜವಾಬ್ದಾರಿಯಾಗಿದೆ. ಅರಣ್ಯ ಇಲಾಖೆಯ ಗಮನಕ್ಕೆ ತಂದು, ಇಲ್ಲಿನ ಗಿಡಗಳ ತೆರವಿಗೆ ಸೂಕ್ತಕ್ರಮ ಕೈಗೊಳ್ಳಲಾಗುವುದು “.
- ಬಿ.ಮಲ್ಲಿಕಾರ್ಜುನ, ಮುಖ್ಯಾಧಿಕಾರಿ, ಪುರಸಭೆ, ಕಂಪ್ಲಿ.
” ಈ ಹಿಂದೆ ಲೇಔಟ್ ಮಾಡುವ ವೇಳೆ ಸಸಿಗಳನ್ನು ನೆಡಲಾಗಿದೆ. ಅತಿ ಹೆಚ್ಚಾಗಿ ಇಲ್ಲಿನ ಉದ್ಯಾನವನದಲ್ಲಿ ನೂರಾರು ಗಿಡಗಳನ್ನು ಹೆಮ್ಮರವಾಗಿ ಬೆಳೆದು ನಿಂತಿವೆ. ಈ ಕೋನೋ ಕಾರ್ಪಸ್ ಗಿಡಗಳಿಂದ ಸೂಸುವ ಗಾಳಿಯು ಹಾನಿಕಾರವಾಗಿದೆ. ಮನುಷ್ಯನ ಉಸಿರಾಟದ ಮೇಲೆ ಗಂಭೀರ ಪರಿಣಾಮ ಬೀರುವ ಗಿಡಗಳಾಗಿದೆ. ಈಗಾಗಲೇ ಸಂಬಂಧಿಸಿದ ಪುರಸಭೆಯವರ ಗಮನಕ್ಕೆ ತರಲಾಗಿದೆ. ಇನ್ನೂ ಇಲ್ಲಿನ ಗಿಡಗಳ ತೆರವಿಗೆ ಮುಂದಾಗಿಲ್ಲ. ಇದರಿಂದ ಇಲ್ಲಿನ ನಿವಾಸಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಕೂಡಲೇ ಪುರಸಭೆ ಅಧಿಕಾರಿಗಳು ಅತಿ ಮುತುವರ್ಜಿವಹಿಸಿ, ಅರಣ್ಯ ಇಲಾಖೆಯ ಅನುಮತಿಯೊಂದಿಗೆ ಇಲ್ಲಿನ ಗಿಡಗಳನ್ನು ತೆರವುಗೊಳಿಸಬೇಕು “.
- ಹನುಮಂತಪ್ಪ, ಸ್ಥಳೀಯ ನಿವಾಸಿ, ಲಕ್ಷ್ಮೀ ಲೇಔಟ್, ಕಂಪ್ಲಿ
” ಈ ಮರಗಳು ಹೂ ಬಿಡುವ ಅವಧಿಯಲ್ಲಿ ಬಿಡುಗಡೆ ಮಾಡುವ ಪರಾಗ ರೇಣುಗಳು (Pollen grains) ಗಾಳಿಯಲ್ಲಿ ಹರಡಿ, ಮನುಷ್ಯರಲ್ಲಿ ಅಸ್ತಮಾ, ಅಲರ್ಜಿ, ನೆಗಡಿ ಮತ್ತು ದಮ್ಮು -ಕೆಮ್ಮಿನಂತಹ ಗಂಭೀರ ಉಸಿರಾಟದ ಸಮಸ್ಯೆಗಳನ್ನು ಉಂಟುಮಾಡುತ್ತವೆ.
ಈ ಗಿಡಗಳ ಸಂಪರ್ಕಕ್ಕೆ ಬರುವುದರಿಂದ ಕೆಲವರಿಗೆ ಚರ್ಮದ ಮೇಲೆಯೂ ಅಲರ್ಜಿ ಕಾಣಿಸಿಕೊಳ್ಳಬಹುದು “.
- ಡಾ. ಭರತ್ ಪದ್ಮಶಾಲಿ ಬಿ.ಎಸ್., MBB5, MD, FIPHCL, FIM (Intemal Medicine) Consultant Preventive Physicion.
ಶ್ರೀ ವೀರ ಬ್ರಹ್ಮಂದ್ರ ಸ್ವಾಮಿ ಪಾಲಿ ಕ್ಲಿನಿಕ್, ಕಂಪ್ಲಿ.
ವರದಿ : ಜಿಲಾನಸಾಬ್ ಬಡಿಗೇರ್




















