ಕೊಪ್ಪಳ/ಕಾರಟಗಿ:
ಸ್ವಸಹಾಯ ಸಂಘದ ಮಹಿಳೆಯರು ಕಡ್ಡಾಯವಾಗಿ ಮತ ಚಲಾಯಿಸಿ:ಸೋಮನಾಥ ನಾಯಕ
ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಸ್ವಸಹಾಯ ಸಂಘದ ಮಹಿಳೆಯರು ಕಡ್ಡಾಯವಾಗಿ ಮತ ಚಲಾಯಿಸಿ ಎಂದು ತಾಲೂಕು ಪಂಚಾಯತಿ ಐಇಸಿ ಸಂಯೋಜಕ ಸೋಮನಾಥ ನಾಯಕ ಅವರು ಹೇಳಿದರು.
ಕಾರಟಗಿ ಪಟ್ಟಣದ ನವಲಿ ರಸ್ತೆಯಲ್ಲಿನ ದಿಕ್ಸೂಚಿ ಇನ್ಸ್ಟಿಟ್ಯೂಟಿವ್ ಕಂಪ್ಯೂಟರ್ ತರಬೇತಿ ಕಟ್ಟಡದಲ್ಲಿ ಶುಕ್ರವಾರದಂದು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್ ) ಕೊಪ್ಪಳ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ಆರು ದಿನಗಳ ಉದ್ಯಮಶೀಲತಾಭಿವೃದ್ಧಿ ತರಬೇತಿಯಲ್ಲಿ ತಾಲೂಕು ಸ್ವೀಪ್ ಸಮಿತಿಯಿಂದ ಮತದಾನದ ಜಾಗೃತಿ ಕುರಿತು ಮಾತನಾಡಿದರು.
ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಐದು ವರ್ಷಕೊಮ್ಮೆ ಸಾರ್ವತ್ರಿಕ ಚುನಾವಣೆಗಳು ಬರುತ್ತಿದ್ದು ನಮಗೆಲ್ಲ ತಿಳಿದಿರುವ ವಿಷಯ.ಅದರಂತೆ ಮತದಾನ ಮಾಡುವುದು ನಮ್ಮ ಹಕ್ಕು, ಅದನ್ನು ನಾವು ಚಲಾಯಿಸಿಬೇಕು, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಶೇ.100 ರಷ್ಟು ಮತದಾನ ಪ್ರಗತಿ ಸಾಧಿಸಲು ಪ್ರತಿಯೊಬ್ಬರೂ ಸಹಕಾರ ಅತ್ಯಾವಶ್ಯಕ, ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ, ಎನ್ನುವ ಧ್ಯೇಯ ವ್ಯಾಖ್ಯಾದಂತೆ ಮುಂಬರುವ ಚುನಾವಣೆಯಲ್ಲಿ ಮಹಿಳೆಯರು ತಮ್ಮ ಮತವನ್ನು ಚಲಾಯಿಸಿ, ಯಾವುದೇ ಮಹಿಳಾ ಮತದಾರರು ಮತದಾನದಿಂದ ಹೊರಗುಳಿಯಬಾರದು ಎಂದರು.
ನಂತರ ಸ್ವಸಹಾಯ ಸಂಘದ ಸದಸ್ಯರಿಗೆ ಮತದಾನದ ಕುರಿತು ಪ್ರತಿಜ್ಞಾ ವಿಧಿ ಭೋದಿಸಲಾಯಿತು. ಸದರಿ ಕಾರ್ಯಕ್ರಮದಲ್ಲಿ 56 ಸ್ವಸಹಾಯ ಗುಂಪಿನ ಮಹಿಳೆಯರು ಇದ್ದರು.
ಈ ಸಂದರ್ಭದಲ್ಲಿ ಕೌಶಲ್ಯಾಭಿವೃದ್ಧಿ ತರಬೇತುದಾರರಾದ ಅಬ್ದುಲ್ ರೆಹಮಾನ್, ಸಿಡಾಕ್ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳಾದ ನಾಗರಾಜ್, ಸಂಜೀವಿನಿ ಎನ್ ಆರ್ ಎಲ್ ಎಂ ತಾಲೂಕು ವ್ಯವಸ್ಥಾಪಕ ಶ್ಯಾಮ್ ಸುಂದರ್, ತೋಟಗಾರಿಕೆ ತಾಂತ್ರಿಕ ಸಹಾಯಕರಾದ ಕನಕಮೂರ್ತಿ ಸಿ, ಸೇರಿದಂತೆ ಸ್ವಸಹಾಯ ಸಂಘದ ಎಂಬಿಕೆ, ಎಲ್ ಸಿ ಆರ್ ಪಿ,ಸಂಘದ ಮಹಿಳೆಯರು ಇದ್ದರು.